ಆ.10ರೊಳಗೆ ಸಂಪುಟ ವಿಸ್ತರಣೆ..?

ಈ ಸುದ್ದಿಯನ್ನು ಶೇರ್ ಮಾಡಿ

S-Siddaramaiha

ಬೆಂಗಳೂರು, ಜು.26- ಪ್ರಸ್ತುತ ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆ.10ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆದ ಡಾ.ಜಿ.ಪರಮೇಶ್ವರ್ ರಾಜೀನಾಮೆಯಿಂದ ತೆರವಾ ಗಿರುವ ಗೃಹಖಾತೆ, ಲೈಂಗಿಕ ಹಗರಣ ಅಪವಾದಕ್ಕೆ ಸಿಲುಕಿ ಎಚ್.ವೈ.ಮೇಟಿ ರಾಜೀನಾಮೆಯಿಂದ ತೆರವಾಗಿರುವ ಅಬಕಾರಿ ಖಾತೆ, ಎಚ್.ಎಸ್.ಮಹದೇವಪ್ರಸಾದ್ ಅಕಾಲಿಕ ನಿಧನದಿಂದ ತೆರವಾಗಿರುವ ಸಹಕಾರಿ ಖಾತೆ ಮತ್ತು ಸಚಿವ ರೋಷನ್‍ಬೇಗ್‍ರಿಂದ ಹಿಂಪಡೆಯಲಾದ ವಾರ್ತಾ ಮತ್ತು ಪ್ರಚಾರ ಇಲಾಖೆ ಖಾತೆ ಮುಖ್ಯಮಂತ್ರಿಗಳ ಬಳಿ ಇವೆ.

ಇವು ಅತ್ಯಂತ ಪ್ರಮುಖ ಖಾತೆಗಳಾಗಿದ್ದು, ಕಾರ್ಯಭಾರದ ಒತ್ತಡ ಹೆಚ್ಚಿದೆ. ಚುನಾವಣೆಯ ವರ್ಷವಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸುವ ಮಹದುದ್ದೇಶ ಹೊಂದಿದ್ದಾರೆ. ಆದರೆ ಹಲವಾರು ಪ್ರಮುಖ ಖಾತೆಗಳ ಜವಾಬ್ದಾರಿ ತಮ್ಮ ಬಳಿ ಇರುವುದರಿಂದ ಕಡತಗಳ ವಿಲೇವಾರಿಗೆ ಹೆಚ್ಚು ಸಮಯ ವ್ಯಯವಾಗುತ್ತಿದ್ದು, ರಾಜ್ಯ ಪ್ರವಾಸ, ಚುನಾವಣಾ ಕಾರ್ಯಗಳಿಗೆ ಸಮಯ ನೀಡಲಾಗುತ್ತಿಲ್ಲ.
ಮುಖ್ಯಮಂತ್ರಿ ಹೊರತುಪಡಿಸಿ ಸರ್ಕಾರದ ಸಾಧನೆಗಳ ಬಗ್ಗೆ ಸಂಪುಟದ ಯಾವೊಬ್ಬ ಸಚಿವರೂ ಪರಿಣಾಮಕಾರಿಯಾಗಿ ಮಾತನಾಡುತ್ತಿಲ್ಲ. ಹಾಗಾಗಿ ರಾಜ್ಯ ಪ್ರವಾಸ ಮಾಡುವುದು, ಸರ್ಕಾರದ ಸಾಧನೆಗಳ ಪ್ರಚಾರ, ಪಕ್ಷ ಸಂಘಟನೆಗೆ ಒತ್ತು ನೀಡುವ ಜವಾಬ್ದಾರಿ ಮುಖ್ಯಮಂತ್ರಿ ಅವರ ಮೇಲಿದೆ.

ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿರುವ ಸಿಎಂ, ತಾಲೂಕು ಮಟ್ಟದಲ್ಲಿ ಪ್ರವಾಸ ನಡೆಸಿ ಪಕ್ಷ ಸಂಘಟಿಸುವ ಇರಾದೆ ಹೊಂದಿದ್ದಾರೆ. ಹಾಗಾಗಿ ಪ್ರಮುಖ ಖಾತೆಗಳಿಂದ ಬಿಡುಗಡೆ ಪಡೆದು ಪೂರ್ಣ ಪ್ರಮಾಣದ ಸಮಯವನ್ನು ಪ್ರವಾಸಕ್ಕೆ ಮೀಸಲಿಡಲು ಸಿದ್ದು ಚಿಂತನೆ ನಡೆಸಿದ್ದಾರೆ. ಅಕ್ಟೋಬರ್ 10ರ ವೇಳೆಗೆ ಸಂಪುಟ ವಿಸ್ತರಣೆಯನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಕರಾವಳಿ ಭಾಗದಲ್ಲಿ ನಡೆದ ಕೋಮುಗಲಭೆಗಳಿಂದ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದು ಕಾನೂನು ಸುವ್ಯವಸ್ಥೆ ಸರಿಪಡಿಸಲು ಪೂರ್ಣ ಪ್ರಮಾಣದ ಗೃಹ ಸಚಿವರ ಅವಶ್ಯಕತೆ ಹೆಚ್ಚಿದೆ.

ಆರ್.ವಿ.ದೇಶಪಾಂಡೆ, ರಮೇಶ್‍ಕುಮಾರ್ ಅವರಂತಹ ಹಿರಿಯರು ಗೃಹ ಖಾತೆ ಹೊರಲು ಹಿಂದೇಟು ಹಾಕಿದ್ದರಿಂದ ಅನಿವಾರ್ಯವಾಗಿ ಅರಣ್ಯ ಖಾತೆ ನಿಭಾಯಿಸುತ್ತಿರುವ ರಮಾನಾಥರೈ ಅವರಿಗೆ ಗೃಹ ಖಾತೆ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ದರಾಮಯ್ಯ ನಿನ್ನೆ ರಾತ್ರಿ ಸೂಚನೆ ನೀಡಿದ್ದಾರೆ.
ಅರಣ್ಯ ಇಲಾಖೆ ಜವಾಬ್ದಾರಿಯಿಂದ ರೈ ಅವರನ್ನು ಬಿಡುಗಡೆ ಮಾಡಿ ಗೃಹ ಖಾತೆ ಜವಾಬ್ದಾರಿ ನೀಡಲು ಸಿದ್ದು ನಿರ್ಧರಿಸಿದ್ದಾರೆ. ಈ ಸಂಬಂಧ ನಡೆದ ಮಾತುಕತೆಗೆ ರಮಾನಾಥರೈ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ವಿಸ್ತರಣೆ ಕಷ್ಟಸಾಧ್ಯವಾಗಿದ್ದು, ರಮಾನಾಥರೈ ಅವರಿಗೆ ಗೃಹ ಖಾತೆ ಹಸ್ತಾಂತರಿಸುವ ನಿರೀಕ್ಷೆ ಇದೆ.  ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂದಿ ಜತೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದು, ಆಗಸ್ಟ್ 5ರ ನಂತರ ದೆಹಲಿಗೆ ಬರುವಂತೆ ರಾಹುಲ್ ಸೂಚಿಸಿದ್ದಾರೆ.  ಹೀಗಾಗಿ ದೆಹಲಿಗೆ ಹೋಗಿ ಬಂದ ನಂತರ ಸಿದ್ದು ಸಂಪುಟ ವಿಸ್ತರಣೆಗೆ ಮುಂದಾಗುತ್ತಾರೆ ಎಂದು ತಿಳಿದುಬಂದಿದೆ.  ಕೆಲವು ಸಚಿವರು ಖಾತೆ ಬದಲಾವಣೆಗೆ ಬೇಡಿಕೆ ಸಲ್ಲಿಸಿದ್ದು, ಆ ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮಕೈಗೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಖಾಲಿ ಇರುವ ಮೂರು ಸ್ಥಾನಗಳಿಗೆ ಆಕಾಂಕ್ಷಿಗಳ ಸಂಖ್ಯೆ ಕೂಡ ಹೆಚ್ಚಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin