ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡ ಉಳಿಸಿ : ಸಾಹಿತಿ ಡಾ.ಪಾಟೀಲ್ ಪುಟ್ಟಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

beluru

ಬೇಲೂರು, ನ.28- ರಾಜಕಾರಣಿಗಳ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡದ ನಿರ್ಲಕ್ಷ್ಯಕ್ಕೆ ಕಾರಣವಾಗುತ್ತಿದ್ದು, ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯದ ಜನತೆ ಮುಂದಾಗಬೇಕು ಎಂದು ಸಾಹಿತಿ ಡಾ.ಪಾಟೀಲ್ ಪುಟ್ಟಪ್ಪ ಹೇಳಿದರು.ಪಟ್ಟಣದ ಚನ್ನಕೇಶವ ದೇವಾಲಯದ ಆವರಣದಲ್ಲಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, 2ನೇ ಶತಮಾನದಲ್ಲಿ ಉತ್ಖನನ ಸಂದರ್ಭದಲ್ಲಿ ಕನ್ನಡದ ಪದಗಳು ಗೋಚರಿಸಿದ್ದವು. ಇದನ್ನು ನೋಡಿದರೆ ಕನ್ನಡ ಭಾಷೆಯು ಪ್ರಾಚೀನ ಇತಿಹಾಸ ಸಾರುವಂತಹ ಭಾಷೆಯಾಗಿದೆ. ಹಲವು ಪ್ರಾಚೀನ ಭಾಷೆಗಳಲ್ಲಿ ಕೇವಲ 200 ಭಾಷೆಗಳು ಉಳಿದಿದ್ದು, ಕನ್ನಡ ಇದರಲ್ಲಿ ಅಗ್ರ ಸ್ಥಾನವನ್ನು ಹೊಂದಿದೆ ಎಂದರು. ಕನ್ನಡವು ಸಾಯುವ ಭಾಷೆಯಾಗಿಲ್ಲ. ಇದು ಉಳಿಯುವ ಭಾಷೆಯಾಗಿದೆ. ಕನ್ನಡ ನಾಡು ನುಡಿಯ ಬಗ್ಗೆ ನಮಗೆ ಇನ್ನು ಸರಿಯಾದ ಜ್ಞಾನವಿಲ್ಲ.

ಕನ್ನಡ ನಾಡಿನಲ್ಲಿ ಆಳಿದ ರಾಜವಂಶಗಳು ಕನ್ನಡ ನಾಡಿನಿಂದ ಹೊರಗೆಯೂ ಹಬ್ಬಿರುವುದು ಸಂಶೋಧನೆಯಿಂದ ತಿಳಿಯಬಹುದಾಗಿದೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಮಂಜೇಗೌಡ ಮಾತನಾಡಿ, ಕನ್ನಡವನ್ನು ಉಳಿಸಿ ಬೆಳೆಸಬೇಕಾದರೆ ಶಾಲೆಗಳಲ್ಲಿ ಏಕರೂಪ ಶಿಕ್ಷಣ ಜಾರಿಗೆ ಬರಬೇಕು. ಮತ್ತು ಕನ್ನಡ ನಾಡು ನುಡಿಯ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕು. ಕನ್ನಡದ ಶಿಲಾ ಶಾಸನ ದೊರೆತ ತಾಲ್ಲೂಕಿನ ಹಲ್ಮಿಡಿ ಗ್ರಾಮವನ್ನು ಸರ್ಕಾರ ಪ್ರವಾಸಿ ತಾಣವೆಂದು ಘೋಷಿಸಿ ಅನುದಾನ ಬಿಡುಗಡೆ ಮಾಡಿ ಅಭಿವೃದ್ದಿಪಡಿಸಬೇಕು ಎಂದರು. ತಾಲೂಕು ಕಸಾಪ ಅಧ್ಯಕ್ಷ ದಯಾನಂದ್ ಮಾತನಾಡಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಲು ಹಲ್ಮಿಡಿ ಶಿಲಾ ಶಾಸನ ಮಹತ್ತರವಾದ ಪಾತ್ರ ವಹಿಸಿದೆ. ಆದ್ದರಿಂದ ಅರ್ಥಿಕವಾಗಿ ಹಿಂದುಳಿದ ತಾಲ್ಲೂಕು ಎಂದು ಪರಿಗಣಿತವಾಗಿರುವ ಬೇಲೂರಿನಲ್ಲಿ ಸಣ್ಣ ಪುಟ್ಟ ಕೈಗಾರಿಕೆಗಳಿಲ್ಲದೆ ಜನರು ವಲಸೆ ಹೋಗುತಿದ್ದಾರೆ.

ಆದ್ದರಿಂದ ಸರ್ಕಾರ ತಾಲೂಕಿನ ಸಮಗ್ರ ಅಭಿವೃದ್ದಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.ಸಮ್ಮೇಳನಾಧ್ಯಕ್ಷ ಸಾಹಿತಿ ಡಾಶ್ರೀವತ್ಸ ಎಸ್ ವಟಿ, ನಿಕಟಪೂರ್ವ ಅಧ್ಯಕ್ಷ ಬೇಲೂರು ನವಾಭ್, ಸಾಹಿತಿಗಳಾದ ಬೇಲೂರು ಕೃಷ್ಣಮೂರ್ತಿ, ಡಾ.ಭಾನುಮತಿ, ಮ.ರಾಜಶೇಖರ್ ನಾರ್ವೆ, ಜಿಪಂ ಸದಸ್ಯರಾದ ಲತಾಮಂಜೇಶ್ವರಿ, ಲತಾದಿಲೀಪ್, ತಾಪಂ ಅಧ್ಯಕ್ಷ ತಮ್ಮಣ್ಣಗೌಡ, ಚಲನಚಿತ್ರ ನಟ ಬ್ಯಾಂಕ್ ಜರ್ನಾಧನ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೊರಟಿಕೆರೆ ಪ್ರಕಾಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ತಾ.ಕಸಾಪ ಕಾರ್ಯದರ್ಶಿ ರವೀಶ್ ಇನ್ನಿತರರಿದ್ದರು.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin