ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ : 455 ರನ್‍ಗೆ ಭಾರತ ಆಲ್‍ಔಟ್

ಈ ಸುದ್ದಿಯನ್ನು ಶೇರ್ ಮಾಡಿ

Ashwin-02

ವಿಶಾಖಪಟ್ಟಣಂ, ನ.18– ನಿನ್ನೆ ಸಮಯೋಚಿತ ಬ್ಯಾಟಿಂಗ್ ವೈಭವ ಪ್ರದರ್ಶನ ನೀಡಿದ ಭಾರತ ಇಂದು ಆಂಗ್ಲರ ಬೌಲಿಂಗ್ ದಾಳಿಗೆ ನಲುಗಿ ಮೊದಲ ಇನ್ನಿಂಗ್ಸ್ ನಲ್ಲಿ 455 ರನ್‍ಗೆ ಆಲ್‍ಔಟ್ ಆಯಿತು.  ಕೆಳ ಕ್ರಮಾಂಕದ ಬ್ಯಾಟ್ಸ್ಮೆನ್ ಗಳಾದ ಆಲ್‍ರೌಂಡರ್ ಆರ್.ಅಶ್ವಿನ್ (58) ಅರ್ಧ ಶತಕ ಮತ್ತು ಬಾಲಂಗೋಚಿ ಜಯಂತ್ ಯಾದವ್ (35) ಅವರ ಆಟದ ನೆರವಿನಿಂದ ಗೌರವ ಮೊತ್ತ ದಾಖಲಿಸಿತು. ಇಲ್ಲಿನ ಡಾ.ಪಿ.ಎಸ್.ರಾಜಶೇಖರರೆಡ್ಡಿ ಮೈದಾನದಲ್ಲಿ ನಡೆಯುತ್ತಿರುವ ಎರಡನೆ ಟೆಸ್ಟ್ ನಲ್ಲಿ ಎರಡನೆ ದಿನದಾಟ ಆರಂಭಿಸಿದ ಭಾರತ ಮೊದಲ ಅವಧಿಯಲ್ಲೇ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತ್ತು. ಗುರುವಾರ ಆಂಗ್ಲ ಬೌಲರ್‍ಗಳನ್ನು ದಂಡಿಸಿ ಅಜೇಯ (150) ರನ್ ಶತಕ ಗಳಿಸಿದ ಕೊಹ್ಲಿ, ಇಂದು ಬೇಗನೆ ಔಟ್ ಆದರು. 167 ರನ್ ಬಾರಿಸಿ ತಂಡದ ಮೊತ್ತ 351 ರನ್‍ನಲ್ಲಿದ್ದಾಗ ಕೊಹ್ಲಿ ಅಲಿ ಬೌಲಿಂಗ್‍ನಲ್ಲಿ ಸ್ಟೋಕ್ಸ್‍ಗೆ ಕ್ಯಾಚ್ ನೀಡಿ ಔಟ್ ಆದರು.

ಕೊಹ್ಲಿ ಔಟ್ ಆದ ಬಳಿಕ ವೃದ್ಧಿಮಾನ್ ಸಹಾ (3) ಮತ್ತು ರವೀಂದ್ರ ಜಡೇಜಾ (0) ಅವರು ಅಲಿ ಬೌಲಿಂಗ್‍ನಲ್ಲೇ ಬಲೆಗೆ ಬಿದ್ದು ವಿಕೆಟ್ ಒಪ್ಪಿಸಿದರು. ಅಲಿ ಒಂದೇ ಓವರ್‍ನಲ್ಲಿ 2 ವಿಕೆಟ್ ಉರುಳಿಸಿ ಭಾರತಕ್ಕೆ ಆಘಾತ ನೀಡಿದರು.

ಆರ್.ಅಶ್ವಿನ್ ಅರ್ಧ ಶತಕ:

ಒಂದು ಹಂತದಲ್ಲಿ 363 ರನ್‍ಗೆ ಕೊಹ್ಲಿ, ಜಡೇಜಾ ಮತ್ತು ಸಹಾ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದ ಭಾರತ ಬೇಗನೆ ಆಘಾತ ಆಗುವ ಭೀತಿ ಎದುರಿಸಿತ್ತು. ಈ ಸಮಯದಲ್ಲಿ ತಂಡಕ್ಕೆ ನೆರವಾಗಿದ್ದು ಆಲ್‍ರೌಂಡರ್ ಆರ್.ಅಶ್ವಿನ್. ಕೀವಿಸ್ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಗೆಲುವಿಗೆ ಕಾರಣವಾಗಿದ್ದ ಅವರು ಮತ್ತೆ ಅದೇ ಲಯವನ್ನು ಮುಂದುವರಿಸಿದರು. ಆಂಗ್ಲರ ಬೌಲರ್‍ಗಳನ್ನು ಎದುರಿಸಿ ಅಶ್ವಿನ್ (58, 95 ಎಸೆತ, 5 ಬೌಂಡರಿ) ಅರ್ಧಶತಕ ದಾಖಲಿಸಿ ತಂಡವನ್ನು ದಿಢೀರ್ ಕುಸಿತದಿಂದ ಪಾರು ಮಾಡಿದರು.

ಉತ್ತಮ ಆಟವಾಡಿದ ಜಯಂತ್ ಯಾದವ್ ಅಶ್ವಿನ್‍ಗೆ ಸಾಥ್ ನೀಡಿದರು. ಇವರಿಬ್ಬರ 7ನೆ ವಿಕೆಟ್ ಜತೆಯಾಟದಲ್ಲಿ 54 ರನ್ ದಾಖಲಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು.
ತಂಡದ ಮೊತ್ತ 427 ರನ್ ಆಗಿದ್ದಾಗ ಅಶ್ವಿನ್ ಔಟ್ ಆಗುತ್ತಿದ್ದಂತೆ ಭಾರತ ಜಯಂತ್ ಯಾದವ್ (35) ಮತ್ತು ಉಮೇಶ್ ಯಾದವ್ (13) ರನ್ ಗಳಿಸಿ ಬೇಗನೆ ಔಟಾದರು. ಮಹಮ್ಮದ್ ಶಮಿ ಅಜೇಯ 7 ರನ್ ಗಳಿಸಿದರು.  ಅಂತಿಮವಾಗಿ ಭಾರತ 129 ಓವರ್‍ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 455 ರನ್‍ಗೆ ಸರ್ವಪತನವಾಯಿತು. ಇಂಗ್ಲೆಂಡ್ ಪರ ಅಲಿ ಮತ್ತು ಜೇಮ್ಸ್ ಆ್ಯಂಡ್ರಸನ್ 3 ವಿಕೆಟ್, ಅದಿಲ್ ರಶೀದ್ 2, ಸ್ಟೂವರ್ಟ್ ಬ್ರಾಡ್ ಮತ್ತು ಬೆನ್‍ಸ್ಟೋಕ್ಸ್ ತಲಾ 1 ವಿಕೆಟ್ ಪಡೆದರು.

► Follow us on –  Facebook / Twitter  / Google+

Facebook Comments

Sri Raghav

Admin