ಇಂದಿನಿಂದ ಹಣ ವಿತ್ ಡ್ರಾಗೆ ಯಾವುದೇ ಮಿತಿ ಇಲ್ಲ, ಸುಗಮವಾಯ್ತು ಹಣಕಾಸು ವಹಿವಾಟು

ಈ ಸುದ್ದಿಯನ್ನು ಶೇರ್ ಮಾಡಿ

RBI--01

ನವದೆಹಲಿ/ ಮುಂಬೈ, ಮಾ.13-ಬ್ಯಾಂಕ್‍ಗಳಿಂದ ಹಣ ವಿತ್‍ಡ್ರಾ ಮಿತಿಯನ್ನು ಇಂದಿನಿಂದ ಸಂಪೂರ್ಣ ಹಿಂತೆಗೆದುಕೊಳ್ಳಲಾಗಿದ್ದು, ದೇಶದ ಜನತೆಗೆ ಹಣಕಾಸು ವಹಿವಾಟು ನಿರಾಳವಾದಂತಾಗಿದೆ.  ಉಳಿತಾಯ ಖಾತೆಯಿಂದ ಅಗತ್ಯವಾದಷ್ಟು ಮೊತ್ತವನ್ನು ಹಿಂಪಡೆಯಬಹುದಾಗಿದ್ದು, ಈವರೆಗೆ ಇದ್ದ ವಾರಕ್ಕೆ 50 ಸಾವಿರಗಳ ವಿತ್‍ಡ್ರಾ ಮಿತಿಯನ್ನು ಸಡಿಲಿಸಲಾಗಿದೆ.  ನೋಟು ರದ್ಧತಿ ನಂತರ ಬ್ಯಾಂಕ್ ವ್ಯವಹಾರಗಳಲ್ಲಿ ತೊಂದರೆ ಅನುಭವಿಸುತ್ತಿದ್ದ ಗ್ರಾಹಕರಿಗೆ ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಕಳೆದ ಎರಡು ದಿನಗಳ ಹಿಂದಷ್ಟೇ ಮಾ.13 ರಿಂದ ಹಣಕಾಸು ಮಿತಿಯನ್ನು ಸಂಪೂರ್ಣ ಹಿಂತೆಗೆದುಕೊಳ್ಳಲಾಗುವುದಾಗಿ ಘೋಷಿಸಿದ್ದು, ಇಂದಿನಿಂದ ಅನುಷ್ಠಾನಕ್ಕೆ ಬಂದಿದೆ.  ಹಣ ವಿತ್‍ಡ್ರಾ ಮಿತಿಯನ್ನು ಕೇಂದ್ರ ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಹಂತಹಂತವಾಗಿ ಸಡಿಲಿಸುತ್ತಾ ಬಂದಿತ್ತು. ಫೆಬ್ರವರಿಯಿಂದ ಹಣ ಹಿಂಪಡೆಯುವ ಮಿತಿಯನ್ನು ಏರಿಕೆ ಮಾಡುತ್ತಾ ಬಂದಿತ್ತು. ಫೆ.20 ರಿಂದ ಹಣ ವಿತ್ ಡ್ರಾ ಮಿತಿಯನ್ನು ವಾರಕ್ಕೆ 50 ಸಾವಿರಗಳಿಗೆ ನಿಗದಿಗೊಳಿಸಲಾಗಿತ್ತು.

ಮಾ.13 ರಿಂದ ಈ ಮಿತಿಯನ್ನು ತೆಗೆದು ಉಳಿತಾಯ ಖಾತೆಯಿಂದ ಅಗತ್ಯವಿರುವಷ್ಟು ಹಣವನ್ನು ಹಿಂಪಡೆಯಬಹುದು ಎಂದು ಆರ್‍ಬಿಐ ತನ್ನ ದ್ವೈಮಾಸಿಕ ಆರ್ಥಿಕ ಪರಾಮರ್ಶೆ ವೇಳೆ ಘೋಷಿಸಿತ್ತು.  ಬ್ಯಾಂಕ್ ಮತ್ತು ಎಟಿಎಂನಿಂದ ಹಣ ಪಡೆಯುವ ಮಿತಿಯನ್ನು ತೆಗೆದು ಹಾಕಿರುವುದರಿಂದ ದೇಶದ ಆರ್ಥಿಕ ವಹಿವಾಟು ಯಥಾಸ್ಥಿತಿಗೆ ಬಂದಂತಾಗಿದೆ.  ಹಣ ವಿತ್‍ಡ್ರಾ ಮಿತಿಯನ್ನು ತೆಗೆದುಹಾಕಿದ್ದರೂ ಕೆಲವು ಎಟಿಎಂಗಳಲ್ಲಿ ಕರೆನ್ಸಿ ಅಲಭ್ಯತೆ ಇದ್ದು, ಆ ಕೊರತೆಯನ್ನು ನೀಗಿಸಲು ಎಲ್ಲಾ ರೀತಿಯ ಕ್ರಮಕೈಗೊಂಡಿರುವುದಾಗಿ ಆರ್‍ಬಿಐನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಚಿಲ್ಲರೆ ಸಮಸ್ಯೆ ತಪ್ಪಿಸಲು 500 ರೂ., 100ರೂ., 50 ಮತ್ತು 20 ರೂ.ಗಳ ಚಲಾವಣೆಯನ್ನು ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದ್ದು, 10 ರೂ.ಗಳ ಹೊಸ ನೋಟನ್ನು ಸದ್ಯದಲ್ಲೇ ಆರ್‍ಬಿಐ ಬಿಡುಗಡೆ ಮಾಡಲಿದೆ.  ಪ್ರಸ್ತುತ 9.92 ಲಕ್ಷ ಕೋಟಿ ರೂ.ಹಣ ಚಲಾವಣೆಯಲ್ಲಿದೆ ಎಂದು ಜ.27ರಂದು ಆರ್‍ಬಿಐ ಹೇಳಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin