ಇಂದಿರಾಗಾಂಧಿ ಜನ್ಮ ಜಯಂತಿ : ಗಣ್ಯರಿಂದ ನಮನ

ಈ ಸುದ್ದಿಯನ್ನು ಶೇರ್ ಮಾಡಿ

Indiaragandhi

ನವದೆಹಲಿ, ನ.19-ಭಾರತದ ಏಕೈಕ ಮಹಿಳಾ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರ 99ನೇ ಜನ್ಮ ಜಯಂತಿ ಪ್ರಯುಕ್ತ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ ಪರವಾಗಿ ಪುಷ್ಪ ನಮನ ಸಲ್ಲಿಸಿದರು. ಇಂದಿರಾ ಅವರ ಜನ್ಮದಿನ ಅಂಗವಾಗಿ ದೇಶದ ಜನತೆ ಪರವಾಗಿ ನಮನ ಸಲ್ಲಿಸುವುದಾಗಿ ಮೋದಿ ಟ್ವೀಟ್‍ನಲ್ಲಿ ಹೇಳಿದ್ದಾರೆ.  ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸೇರಿದಂತೆ ಅನೇಕ ಗಣ್ಯರು ಸಹ ನಮನ ಸಮರ್ಪಿಸಿದ್ದಾರೆ. ಪ್ರಧಾನಿಯಾಗಿದ್ದ ಇಂದಿರಾಜೀ ಅವರ ಜನ್ಮದಿನವನ್ನು ದೇಶದ ವಿವಿಧೆಡೆ ಆಚರಿಸಲಾಯಿತು.

ಇಂದಿರಾ ಪ್ರಿಯದರ್ಶಿನಿ ಗಾಂಧಿ ಭಾರತದ 4ನೇ ಪ್ರಧಾನಮಂತ್ರಿ ಹಾಗೂ ದೇಶದ ಏಕೈಕ ಮಹಿಳಾ ಪ್ರಧಾನಿ. ನವೆಂಬರ್ 19, 1917ರಲ್ಲಿ ಅಲಹಾಬಾದ್‍ನಲ್ಲಿ ಜನಿಸಿದರು. ಇವರು ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಹರ್‍ಲಾಲ್ ಅವರ ಏಕಮಾತ್ರ ಪುತ್ರಿ. ತಂದೆಯವರ ಒಡನಾಟದೊಂದಿಗೆ ಬಾಲ್ಯದಿಂದಲೂ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಇವರು 1966 ರಿಂದ 1977ರವರೆಗೆ ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು ಹಾಗೂ ಮತ್ತೆ 1980ರಲ್ಲಿ ಪ್ರಧಾನಿಯಾದರು. 1984ರಲ್ಲಿ ಹತ್ಯೆಯಾಗುವ ತನಕ ದೇಶದ ಅತ್ಯುನ್ನತ ಹುದ್ದೆಯಲ್ಲಿದ್ದ ಇಂದಿರಾಗಾಂಧಿ ತಮ್ಮ ತಂದೆಯ ನಂತರ ದೀರ್ಘ ಕಾಲ ಭಾರತದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ ಕೀರ್ತಿ ಪಡೆದಿದ್ದಾರೆ.

ತಮ್ಮ ತಂದೆಯವರು 1947 ಮತ್ತು 1964ರ ನಡುವೆ ಪ್ರಧಾನಮಂತ್ರಿಯಾಗಿದ್ದಾಗ ಇಂದಿರಾಗಾಂಧಿ, ನೆಹರು ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. 1959ರಲ್ಲಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕಗೊಂಡರು. 1964ರಲ್ಲಿ ನೆಹರು ನಿಧನರಾದ ನಂತರ ಕಾಂಗ್ರೆಸ್ ಪಕ್ಷದ ನಾಯಕತ್ವ ಸ್ಥಾನ ನಿರಾಕರಿಸಿದರು. ಬದಲಿಗೆ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನೇತೃತ್ವದ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಸೇರ್ಪಡೆಯಾಗಲು ಬಯಸಿದರು. ವಾರ್ತಾ ಸಚಿವರಾಗಿ ಅವರು ಸೇವೆ ಸಲ್ಲಿಸಿದರು. 1966ರಲ್ಲಿ ಶಾಸ್ತ್ರಿಯವರು ನಿಧನರಾದ ನಂತರ ಸಂಸದೀಯ ನಾಯಕತ್ವಕ್ಕಾಗಿ ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಮೊರಾರ್ಜಿ ದೇಸಾಯಿ ಅವರನ್ನು ಪರಾಭವಗೊಳಿಸಿ ನಾಯಕರಾಗಿ ಹೊರಹೊಮ್ಮಿ ಭಾರತದ ಪ್ರಧಾನಮಂತ್ರಿಯಾದರು.
ತಮ್ಮ ರಾಜಕೀಯ ಜೀವನದಲ್ಲಿ ಅತ್ಯಂತ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದ ಇಂದಿರಾಗಾಂಧಿ ಅಧಿಕಾರವನ್ನು ತಮ್ಮಲ್ಲೇ ಕೇಂದ್ರೀಕರಣ ಮಾಡಿಕೊಂಡ ಆರೋಪಕ್ಕೆ ಗುರಿಯಾಗಿದ್ದರು.

ಇವರ ಆಡಳಿತದಲ್ಲಿ ಇಂಡೋ-ಪಾಕ್ ಸಮರ ನಡೆಯಿತು. ಭಾರತ ಗೆಲುವು ಸಾಧಿಸಿತು. ಇದೇ ವೇಳೆ ಪ್ರತ್ಯೇಕ ಬಾಂಗ್ಲಾದೇಶ ಸೃಷ್ಟಿಯಾಯಿತು. ಇವರ ಅಳ್ವಿಕೆಯಲ್ಲಿ ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಭಾರತವು ಪ್ರಬಲ ದೇಶವಾಗಿ ಹೊರಹೊಮ್ಮಿತು. 1975 ರಿಂದ 1977ರವರೆಗೆ ದೇಶದಲ್ಲಿ ವಿವಾದಾತ್ಮಕ ತುರ್ತು ಪರಿಸ್ಥಿತಿ ಜಾರಿಗೊಳಿಸಿ ಇಂದಿರಾಗಾಂಧಿಯವರು ದೊಡ್ಡ ವಿವಾದಕ್ಕೆ ಒಳಗಾದರು. ಉಗ್ರಗಾಮಿಗಳ ವಿರುದ್ಧ ಪಂಜಾಬ್‍ನ ಅಮೃತಸರದ ಸ್ವರ್ಣಮಂದಿರ ಮೇಲೆ ಸೈನಿಕರಿಂದ ಬ್ಲೂಸ್ಟಾರ್ ಕಾರ್ಯಾಚರಣೆ ನಡೆಸಿದರು. ಇದು ಸಿಖ್ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. 31ನೇ ಅಕ್ಟೋಬರ್ 1984 ದೇಶದ ಪಾಲಿಗೆ ಅತ್ಯಂತ ದುರಂತದ ದಿನವಾಗಿತ್ತು. ಅವರ ಸಿಖ್ ಅಂಗರಕ್ಷಕರೇ ಇಂದಿರಾ ಅವರನ್ನು ಗುಂಡಿಕ್ಕಿ ಕೊಂದರು.

► Follow us on –  Facebook / Twitter  / Google+

Facebook Comments

Sri Raghav

Admin