‘ಇಂದಿರಾ ಕ್ಯಾಂಟೀನ್’ ಯೋಜನೆ ವಿಫಲವಾಗಲು ಬಿಡಲ್ಲ : ಮೇಯರ್

ಈ ಸುದ್ದಿಯನ್ನು ಶೇರ್ ಮಾಡಿ

mayor

ಬೆಂಗಳೂರು, ಆ.22-ಬಡವರ ಹಸಿವು ನೀಗಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಇಂದಿರಾ ಕ್ಯಾಂಟೀನ್ ಯೋಜನೆ ವಿಫಲಗೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಲ್ಲ ಎಂದು ಮೇಯರ್ ಜಿ.ಪದ್ಮಾವತಿ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಇಂದು ಬೆಳ್ಳಂಬೆಳಗ್ಗೆ ಅತ್ತಿಗುಪ್ಪೆ, ನಾಗರಬಾವಿ, ಪಾದರಾಯನಪುರ, ಆಜಾದ್‍ನಗರ ಮತ್ತು ರಾಯಪುರಂ ವಾರ್ಡ್‍ಗಳಲ್ಲಿರುವ ಇಂದಿರಾ ಕ್ಯಾಂಟೀನ್‍ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅತ್ತಿಗುಪ್ಪೆ ವಾರ್ಡ್‍ನ ಇಂದಿರಾ ಕ್ಯಾಂಟೀನ್‍ನಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಡಾ.ರಾಜು ಅವರೊಂದಿಗೆ ತಿಂಡಿ ಸೇವಿಸಿದ ಮೇಯರ್ ಅವರು, ಅಲ್ಲಿದ್ದ ಶಾಲಾ ಮಕ್ಕಳಿಗೂ ತಿಂಡಿ ತಿನ್ನಿಸಿ ಸಂತಸಪಟ್ಟರು.

ತಿಂಡಿ ಸೇವಿಸಲು ಕ್ಯಾಂಟೀನ್‍ಗೆ ಬರುವವರೊಂದಿಗೆ ಸಭ್ಯತೆಯಿಂದ ನಡೆದುಕೊಳ್ಳಬೇಕು ಹಾಗೂ ಆಹಾರದ ಗುಣಮಟ್ಟ ಕಾಪಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪದ್ಮಾವತಿ ಎಚ್ಚರಿಕೆ ನೀಡಿದರು. ನಂತರ ಅವರು ನಾಗರಬಾವಿ ಮತ್ತಿತರ ಪ್ರದೇಶಗಳಲ್ಲಿರುವ ಇಂದಿರಾ ಕ್ಯಾಂಟೀನ್‍ಗಳಿಗೂ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದರು. ನಿನ್ನೆ ಸುಬ್ರಹ್ಮಣ್ಯ ನಗರ ವಾರ್ಡ್‍ನಲ್ಲಿರುವ ಇಂದಿರಾ ಕ್ಯಾಂಟೀನ್‍ನಲ್ಲಿ ನೀರಿಲ್ಲ ಎಂಬ ಕಾರಣಕ್ಕೆ ಕ್ಯಾಂಟೀನ್ ಮುಚ್ಚಿದೆ ಎಂದು ನಾಮಫಲಕ ಪ್ರದರ್ಶಿಸಿದ್ದ ಉಸ್ತುವಾರಿ ಅಧಿಕಾರಿಯನ್ನು ಮೇಯರ್ ಸೇವೆಯಿಂದ ಅಮಾನತುಗೊಳಿಸಿದ್ದರು.

ಈ ಪ್ರಕರಣದ ನಂತರ ಇಂದಿರಾ ಕ್ಯಾಂಟೀನ್‍ಗಳ ಉಸ್ತುವಾರಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಯಾವುದೇ ಅಚಾತುರ್ಯ ಸಂಭವಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಇಂದು ಇಂದಿರಾ ಕ್ಯಾಂಟೀನ್‍ಗಳು ಸರಾಗವಾಗಿ ಕಾರ್ಯ ನಿರ್ವಹಿಸಿದವು. ಇಷ್ಟಕ್ಕೂ ಸುಮ್ಮನಾಗದ ಮೇಯರ್ ಅವರು, ಮಧ್ಯಾಹ್ನ ಮತ್ತು ಸಂಜೆ ನಗರದ ಇನ್ನಿತರ ಕ್ಯಾಂಟೀನ್‍ಗಳಿಗೂ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಒಂದು ವೇಳೆ ಯಾವುದೇ ಅಧಿಕಾರಿ ನಿರ್ಲಕ್ಷ್ಯ ತೋರಿದ್ದು ಕಂಡುಬಂದರೆ ಕೂಡಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗುವುದು ಎಂದು ಮೇಯರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

Indira-Canteen--Mayor

Indira-Canteen--021

 

PUR_6281 Indira-Canteen

PUR_6299

Facebook Comments

Sri Raghav

Admin