ಇಂದು ಲೋಕಾರ್ಪಣೆಗೊಂಡ ವಿಶ್ವದರ್ಜೆಯ ಸುರಂಗದ 10 ವಿಶೇಷತೆಗಳೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಶ್ರೀನಗರ. ಏ.02 : ಭಾರತದ ಚೊಚ್ಚಲ ವಿಶ್ವದರ್ಜೆಯ ಸುರಂಗ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ದಕ್ಷಿಣ ಏಷ್ಯಾದ ಮೊದಲ ದ್ವಿಮುಖ ಪಥದ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಿದರು.
ಸುಮಾರು 3000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಬೃಹತ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. ಇನ್ನು ನಿನ್ನೆಯಷ್ಟೇ ಶ್ರೀನಗರದ ಪರಿಂಪೋರಾ-ಪಂತ್ ಚೌಕ್ ಬೈಪಾಸ್ ರಸ್ತೆಯಲ್ಲಿರುವ ಆಸ್ಪತ್ರೆ ಸಮೀಪ ಸೇನಾ ಕಾವಲುಪಡೆ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ ಇಬ್ಬರು ಯೋಧರು ಗಾಯಗೊಂಡಿದ್ದರು. ಹೀಗಾಗಿ ಸುರಂಗ ಮಾರ್ಗ ಉದ್ಘಾಟನೆಗೆ ವ್ಯಾಪಕ ಭದ್ರತೆ ಒದಗಿಸಲಾಗಿದ್ದು, ಭಾರತೀಯ ಸೇನೆ ಉನ್ನತ ಶ್ರೇಣಿಯ ಯೋಧರು ಕಾರ್ಯಕ್ರಮಕ್ಕೆ ಭದ್ರತಾ ವ್ಯವಸ್ಥೆ ಕಲ್ಪಿಸಲಿದ್ದಾರೆ.

ಚೆನಾನಿ-ನಾಶ್ರೀ ಸುರಂಗದ ವಿಶೇಷತೆಗಳೇನು ಗೊತ್ತೇ..?

> 2011ರ ಮೇ 23ರಂದು ಸುರಂಗ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇದೀಗ ಸುಧೀರ್ಘ 6 ವರ್ಷಗಳ ಬಳಿಕ ಸುರಂಗ ಮಾರ್ಗ ಲೋಕಾರ್ಪಣೆಯಾಗಿದೆ.

> ದ್ವಿಮುಖ ಪಥದವಿರುವ ಈ ಸುರಂಗದ ಉದ್ದ 9.2 ಕಿ.ಮೀ. ಇದು ಭಾರತದಲ್ಲೇ ಅತೀ ಉದ್ದದ ಸುರಂಗ ಮಾರ್ಗವೆನಿಸಿದೆ.

> 9.2 ಕಿ.ಮೀ ಉದ್ದದ ಸುರಂಗಮಾರ್ಗದಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಇದರಲ್ಲಿ ವಾಹನದಿಂದ ಹೊರಬರುವ ಹೊಗೆಯನ್ನು ಹೊರಹಾಕಲು ಮತ್ತು ಹೊರಗಿನ ಶುದ್ಧವಾದ ಗಾಳಿ ಸುರಂಗದೊಳಕ್ಕೆ ಹೋಗಲು ಪ್ರತ್ಯೇಕವಾದ ವ್ಯವಸ್ಥೆ ಕಲ್ಪಿಸಲಾಗಿದೆ.

> ಐದೂವರೆ ವರ್ಷಗಳ ಅವಧಿಯಲ್ಲಿ ಸುರಂಗಮಾರ್ಗ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇನ್ ಫ್ರಾಕ್ಚರ್ ಲೀಸಿಂಗ್ ಆಂಡ್ ಫೈನಾನ್ಶಿಯಲ್ ಸರ್ವಿಸಸ್ ಸಂಸ್ಥೆ ಈ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಿದೆ. ರಾಷ್ಟ್ರೀಯ ಹೆದ್ದಾರಿ 44ರ ಮೂಲಕ ಪ್ರಯಾಣಿಸುವಾಗ ಸುರಂಗ ಮಾರ್ಗದಿಂದಾಗಿ ಜಮ್ಮು ಮತ್ತು ಶ್ರೀನಗರ ನಡುವಿನ ಪ್ರಯಾಣದ ಅವಧಿ 2 ಗಂಟೆಗಳಷ್ಟು ಇಳಿಕೆಯಾಗಲಿದ್ದು, ಪ್ರತಿನಿತ್ಯ ಸುಮಾರು 27 ಲಕ್ಷ ಮೌಲ್ಯದಷ್ಟು ಇಂಧನ ಉಳಿತಾಯವಾಗಲಿದೆ. ಈ ಎರಡು ನಗರಗಳ ನಡುವಿನ ಅಂತರ ಸುಮಾರು 31 ಕಿಲೋಮೀಟರ್ಗಳಷ್ಟು ಕಡಿತಗೊಳ್ಳಲಿದೆ.

> ಸುರಂಗವು ಸಮುದ್ರ ಮಟ್ಟದಿಂದ 1200 ಮೀಟರ್(4,000 ಅಡಿ) ಎತ್ತರದಲ್ಲಿದೆ.

> ಈ ಸುರಂಗವು ವರ್ಷಾದ್ಯಂತ ಯಾವುದೇ ಹವಾಮಾನದಲ್ಲೂ ಬಳಕೆಯೋಗ್ಯವಾಗುಂತೆ ವ್ಯವಸ್ಥೆ ಹೊಂದಿದೆ.

> ಈ ಸುರಂಗ ಮಾರ್ಗದಲ್ಲಿ ಗಂಟೆಗೆ 50 ಕಿಮೀ ವೇಗದ ಮಿತಿ ನಿಗದಿ ಪಡಿಸಲಾಗಿದ್ದು, 5 ಮೀಟರ್ ಗಿಂತ ಹೆಚ್ಚು ಎತ್ತರವಿರುವ ವಾಹನ ಸಂಚಾರಕ್ಕೆ ಅವಕಾಶವಿಲ್ಲ.

> ಈ ಸುರಂಗ ಮಾರ್ಗದಲ್ಲಿ ಒಟ್ಟು ಮೂರು ನಿಲ್ದಾಣಗಳನ್ನು ಮಾಡಲಾಗಿದ್ದು, ಕುಡ್, ಪಟ್ನಿಟಾಪ್, ಬಟೋಟೆ ಪ್ರದೇಶಗಳನ್ನು ಇದರ ಮೂಲಕ ಸಂಪರ್ಕಿಸಬಹುದಾಗಿದೆ. ಇನ್ನು ಸುರಂಗ ಮಾರ್ಗದಲ್ಲಿ ಪ್ರಯಾಣಿಕರ ಸೌಲಭ್ಯಕ್ಕಾಗಿ ಬಿಎಸ್ಎನ್ಎಲ್, ಏರ್ಟೆಲ್, ಐಡಿಯಾಗೆ ನೆಟ್ ವರ್ಕ್ ಸೌಲಭ್ಯ ಕಲ್ಪಿಸಲಾಗಿದೆ.

> ವಿಶ್ವ ದರ್ಜೆಯ “ಇಂಟಿಗ್ರೇಟೆಡ್ ಟನೆಲ್ ಕಂಟ್ರೋಲ್ ಸಿಸ್ಟಂ” ಹೊಂದಿರುವ ಭಾರತದ ಮೊದಲ ಸುರಂಗ ಮಾರ್ಗ ಇದಾಗಿದೆ. ಸೌರ ಬೆಳಕಿನ ವ್ಯವಸ್ಥೆ, ಅಗ್ನಿ ಅವಘಡ ನಿಯಂತ್ರಣ, ಸಿಗ್ನಲ್, ಕಮ್ಯೂನಿಕೇಶನ್, ವಿದ್ಯುತ್ ಮೊದಲಾದವನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸಲಾಗಿದೆ.

> ಹಿಮಾಲಯ ಕಣಿವೆಯ ಅತ್ಯಂತ ದುರ್ಗಮ ಮಾರ್ಗದಲ್ಲಿ ಅತ್ಯಂತ ಚಾಕಚಕ್ಯತೆಯಿಂದ ನಿರ್ಮಾಣ

> ಪ್ರಯಾಣಿಕರಿಗೆ ಯಾವುದೇ ರೀತಿಯ ಸಮಸ್ಯೆ ಎದುರಾದಲ್ಲಿ ಪ್ರಯಾಣಿಕರ ಸುರಕ್ಷತೆಗೂ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಸುರಂಗಮಾರ್ಗದಲ್ಲಿ ಒಟ್ಟು 124 ಕ್ಯಾಮೆರಾಗಳನ್ನು ಮತ್ತು ಉಷ್ಣ ಪತ್ತೆ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin