ಇಂದು ‘ವಿಶ್ವ ನಾಟಕ ದಿನ’ – ವಿಶೇಷ ಲೇಖನ

ಈ ಸುದ್ದಿಯನ್ನು ಶೇರ್ ಮಾಡಿ

ಆಧುನಿಕ ಜಗತ್ತು ಎಷ್ಟೇ ರಭಸವಾಗಿ ರೂಪುಗೊಳ್ಳುತ್ತಿದ್ದರೂ, ವಿಜ್ಞಾನ ಮಂಗಳ ಗ್ರಹದಲ್ಲಿ ವಾಸ ಮಾಡುವ ಆಲೋಚನೆ ಮಾಡುತ್ತಿರುವ ಈ ಸಂದರ್ಭದಲ್ಲೂ ಜೀವಂತ, ನೈಜವಾದ ಮಾನವನನ್ನು ಮಾನವನಾಗಿಯೇ ಉಳಿಸಿಕೊಂಡಿರುವ ಈ ಪ್ರಕಾರಕ್ಕೆ ಸದಾ ಮನ್ನಣೆ ಇದ್ದೇ ಇದೆ.

ಆಧುನಿಕ ಜಗತ್ತು ಒಡ್ಡಿರುವ ಜಾಗತೀಕರಣ, ಕೈಗಾರೀಕರಣ, ಉದಾರೀಕರಣದ ಸವಾಲುಗಳಿಂದ ವಿಭಿನ್ನವಾಗಿ ರೂಪುಗೊಳ್ಳುತ್ತಿರುವ ನವ ಸಮಾಜದಲ್ಲಿ, ಈ ಹಿಂದೆಂದೂ ಕಂಡರಿಯದಂತಹ ಸಂಘರ್ಷದ ವಾತಾವರಣವಿದೆ.

ಇದು ಇಡೀ ಜಗತ್ತನ್ನೇ ವ್ಯಾಪಿಸಿರುವುದರಿಂದ ಜರ್ಝರಿತವಾದ ಮನುಕುಲಕ್ಕೆ ನೆಮ್ಮದಿಯ ವರ್ತಮಾನ ಹಾಗೂ ಸಾಂತ್ವನ ನೀಡುವ ದಿಸೆಯಲ್ಲಿ ವಿಕಾಸದ ಬೃಹತ್ ಶಕ್ತಿಯಾಗಿ ರಂಗಭೂಮಿಯನ್ನೇ ಪದೇ ಪದೇ ನಾವು ಆಶ್ರಯಿಸಬೇಕಾದ ಹಿನ್ನೆಲೆಯಲ್ಲಿ ರಂಗಭೂಮಿ ಇಂದು ವಿಶ್ವ ಸಂಸ್ಕøತಿಯ ಅವಿಭಾಜ್ಯ ಅಂಗವೆನಿಸಿದೆ.

ಇಂತಹ ಸಂದರ್ಭದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಗೆ ಹೆಚ್ಚಿನ ಪ್ರಾಶಸ್ತ್ಯ ದೊರೆತಿದೆ. ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವದಾದ್ಯಂತ ಇಂದು ವಿಶ್ವರಂಗಭೂಮಿ ದಿನ ಆಚರಿಸಲ್ಪಡುತ್ತಿದ್ದು, ತನ್ನ ಪ್ರಸ್ತುತತೆಯನ್ನು ಸಾರಿ ಹೇಳುತ್ತಿದೆ. 1962ರಿಂದಲೂ ರಂಗಕರ್ಮಿಗಳು, ರಂಗ ಸಂಸ್ಥೆಗಳು, ಪ್ರದರ್ಶನ ಕಲಾ ವಿಶ್ವವಿದ್ಯಾಲಯಗಳು,ರಂಗಪ್ರೇಮಿಗಳು ಈ ದಿನವನ್ನು ಆಚರಿಸುತ್ತಿರುವುದು ಸ್ವಾಗತಾರ್ಹ.

ಪ್ರಸ್ತುತ ದಿನಗಳಲ್ಲಿ ರಂಗಭೂಮಿ ಪಯಣ ಎತ್ತ ಸಾಗುತ್ತಿದೆ ಎಂಬ ಅರಿವು ಹಾಗೂ ಚಿಂತನೆ ಅತ್ಯಗತ್ಯವೆನಿಸುತ್ತಿದ್ದು, ವಿಶ್ವಶಾಂತಿ,ಸ್ವಾತಂತ್ರ್ಯ ಹೋರಾಟ, ಸಮ ಸಮಾಜ ನಿರ್ಮಾಣ, ಕಲೆ, ಸಂಸ್ಕøತಿ, ಭಾಷೆಯ ರಕ್ಷಣೆಯೊಂದಿಗೆ ನವ ಸಮಾಜ ನಿರ್ಮಾಣದ ಕೈಂಕರ್ಯವನ್ನು ಸಲ್ಲಿಸುತ್ತಿರುವ ಈ ಕ್ಷೇತ್ರದ ಅಭಿವೃದ್ಧಿಯತ್ತಲೂ ಗಮನಹರಿಸಬೇಕಿದೆ.

ವಿಶ್ವಮಟ್ಟದ ರಂಗ ಚಿಂತಕರು ಈ ದಿನವನ್ನು ಪ್ರಗತಿಯ, ಅಭಿವೃದ್ಧಿಯ ದಿನವಾಗಿಯೂ ಪರಿಗಣಿಸುತ್ತಿದ್ದು, ಮಹಾತ್ಮಗಾಂಧಿಯವರು ನಮಗೆ ಪಾಠಶಾಲೆ ಜತೆಗೆ ನಾಟಕ ಶಾಲೆಯೂ ಅಗತ್ಯ ಎಂದಿದ್ದನ್ನು ಸ್ಮರಿಸಬಹುದು.

ಕನ್ನಡ ರಂಗಭೂಮಿ ಎಂಬುದೇ ಕನ್ನಡ ಭಾಷೆ, ಸಂಸ್ಕøತಿ ಬಿಂಬಿಸುವ ಮಾಧ್ಯಮ. ನಾಟಕದ ಮುಖ್ಯ ಉದ್ದೇಶ ಮನೋರಂಜನೆಯಾದರೂ, ಈ ಮಾಧ್ಯಮ ಗಂಭೀರ ವಿಚಾರಗಳತ್ತ ಪ್ರೇಕ್ಷಕರನ್ನು ಸೆಳೆದು ಅವರನ್ನು ಚಿಂತನಾಶೀಲರನ್ನಾಗಿ ಮಾಡುವಲ್ಲಿ ಮೊದಲಿನಿಂದಲೂ ಮಹತ್ವವಾದ ಪಾತ್ರ ನಿರ್ವಹಿಸುತ್ತಿದೆ.

ನಾಟಕಗಳು ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅರಿವು ವಿಸ್ತರಿಸುವ ತರಬೇತಿ ನೀಡುವ ಮಾಧ್ಯಮವಾಗಿ ಬೆಳೆದಿರುವುದು ಚಲನಚಿತ್ರ, ಟಿವಿಯಂತಹ ಹಲವು ದೃಶ್ಯ ಮಾಧ್ಯಮಗಳ ಭರಾಟೆಯಲ್ಲೂ ನೆಲೆ ಕಂಡುಕೊಳ್ಳಲು ಸಾಧ್ಯವಾಗಿರುವುದರಿಂದಲೇ ಎನ್ನಬಹುದು.

ನಾಟಕ: ಸದಾ ಚಲನಶೀಲವಾದ ನಾಟಕವೇ ಒಂದು ಅನುಭವ. ಭರತ ತನ್ನ ನಾಟ್ಯ ಶಾಸ್ತ್ರದಲ್ಲಿ ಜೀವನವೇ ನಾಟಕ ಎಂದಿದ್ದಾನೆ. ಒಂದು ನಾಟಕದಲ್ಲಿ ನಟ-ನಟಿಯರ ಅಭಿನಯ, ಸಂಭಾಷಣೆ, ಚಲನವಲನ ಮತ್ತು ಆಂಗಿಕ ಅಭಿನಯಗಳು ಎಲ್ಲವೂ ಔಚಿತ್ಯ ಪೂರ್ಣವಾಗಿರಬೇಕು. ಪಾತ್ರಗಳ ನಡುವೆ ಪರಸ್ಪರ ನಡೆಯುವ ವೃತ್ತಿಯನ್ನು ಅರಿತು ನಟಿಸುವುದು ಪ್ರತಿಯೊಬ್ಬ ನಟನ ಸವಾಲು. ಒಬ್ಬರನೊಬ್ಬರು ನಟರಾಗಿ, ಪಾತ್ರಗಳಾಗಿ ಅಷ್ಟೇ ಅಲ್ಲದೆ, ನಾಟಕದ ಹೊರಗೂ ಸಾಮಾಜಿಕ ಜೀವನದಲ್ಲೂ ಸ್ನೇಹಿತರಾಗಿ, ಬಂಧುಗಳಾಗಿ ಅರ್ಥಮಾಡಿಕೊಂಡು ಬದುಕುವ ಹೃದಯ ಶ್ರೀಮಂತಿಕೆಯಿಂದ ರಂಗ ಭೂಮಿ ಗಟ್ಟಿಗೊಳ್ಳಲು ಸಾಧ್ಯ.

ಉದಾಹರಣೆಗೆ ರಂಗ ಭೂಮಿ, ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರದಲ್ಲಿ, ಮನೋ ವಿಜ್ಞಾನ ಕ್ಷೇತ್ರದಲ್ಲಿ, ಆರೋಗ್ಯ, ನೈರ್ಮಲ್ಯ, ಸಹಬಾಳ್ವೆ, ಕೋಮು ಸೌಹಾರ್ದತೆ, ಕುಟುಂಬ ಯೋಜನೆ, ಹದಿಹರಿಯದ ಸಮಸ್ಯೆಗಳು, ಸಾಕ್ಷರತೆ, ವಯಸ್ಕರ ಶಿಕ್ಷಣ ಇತ್ಯಾದಿ ಎಲ್ಲಾ ವಿಷಯಗಳ ಬಗ್ಗೆಯೂ ಅರಿವು ಮೂಡಿಸುವ ಕೆಲಸ ನಿರ್ವಹಿಸುತ್ತಿರುವುದರಿಂದ ಎಲ್ಲರಿಗೂ ಅತ್ಯಗತ್ಯ.

ಶಿಕ್ಷಣದಲ್ಲಿ ರಂಗಭೂಮಿ: ವಿಶೇಷವಾಗಿ ಮಕ್ಕಳು ಈ ರಂಗದಲ್ಲಿ ಸಕ್ರಿಯರಾದರೆ ಹಿಂಜರಿಕೆ, ಕೀಳರಿಮೆ, ಸಂಕೋಚ, ಭಯ ಮುಂತಾದ ದೌರ್ಬಲ್ಯಗಳನ್ನು ನಿವಾರಿಸಿಕೊಳ್ಳುತ್ತಾ, ಏಕಾಗ್ರತೆ, ಶಿಸ್ತು, ಕ್ರಿಯಾತ್ಮಕತೆ, ಒಳ್ಳೆಯ ವ್ಯಕ್ತಿತ್ವ, ರಚನಾತ್ಮಕÀತೆ, ಕಲ್ಪನಾ ಶೀಲತೆ, ಕೌಶಲ್ಯ ವೃದಿ, ಉಚ್ಚಾರ ಸ್ಪಷ್ಟತೆ, ಆತಸ್ಥೈರ್ಯದೊಂದಿಗೆ ಮುನ್ನುಗ್ಗುವಂತಾಗುತ್ತದೆ.

ಸರಿ-ತಪ್ಪುಗಳ ನಡುವಿನ ವ್ಯತ್ಯಾಸ ಕಂಡುಕೊಳ್ಳುತ್ತ ಸ್ವಾಸ್ಥ್ಯ ಸಮಾಜ ರೂಪಿಸಲು ನಮ್ಮ ರಂಗ ಶಿಕ್ಷಣ/ಶಾಲೆಗಳು ನೆರವಾಗಬೇಕು. ಅಲ್ಲದೆ, ವಿಷಯಗಳ ವಿಸ್ತರಣೆಗಳ ಮೂಲಕ ಶಿಕ್ಷಣ ಪಠ್ಯವನ್ನೇ ಕಲಿಯಲು ಸಾಧ್ಯವಿದೆ. ಹೀಗೆ ಅನೌಪಚಾರಿಕ ವ್ಯವಸ್ಥೆಯ ಮೂಲಕವೇ ಔಪಚಾರಿಕ ಶಿಕ್ಷಣವನ್ನು ಗ್ರಹಿಸಲು ರಂಗಭೂಮಿ ಸಹಕಾರಿ. ರಂಗಭೂಮಿ ಜನ ವಿಶ್ವದಾದ್ಯಂತ ನಡೆಯುವ ಚಳವಳಿಗಳಲ್ಲಿ, ಕ್ರಾಂತಿಗಳಲ್ಲಿ ಮೊದಲಿಗೆ ನಿಂತಿದೆ.

ಸಾಮಾಜಿಕ ಹೋರಾಟಗಳು, ವಸಾಹತು ಶಾಹಿಯ ವಿರುದ್ಧ ರಾಷ್ಟ್ರೀಯ ಚಳವಳಿ, ಮಾತೃಭಾಷೆ (ಕನ್ನಡ) ರಾಷ್ಟ್ರೀಯತೆಯ ಹೋರಾಟ ಹಿಂದುಳಿದ, ಅಲ್ಪ ಸಂಖ್ಯಾತ,ಅಲೆಮಾರಿ ಹಾಗೂ ದಲಿತ ಮತ್ತು ಮಹಿಳಾ ಚಳವಳಿಯಾಗಿಯೂ ರೂಪುಗೊಂಡು ಕ್ರಾಂತಿಯ ಅಲೆ ಎಬ್ಬಿಸಿದ್ದನ್ನು ಮರೆಯುವಂತಿಲ್ಲ.

ಕಲೆಗಾಗಿ ಕಲೆ ಅಥವಾ ಬದುಕಿಗಾಗಿ ಕಲೆ ಎಂಬ ವಾದ ಇದ್ದೇ ಇದೆ. ಮಾನವ ಹಕ್ಕುಗಳ ಮೃಗೀಯ ಅತಿಕ್ರಮಣಗಳ ಜತೆಗೆ ಜನಸಂಖ್ಯೆ ಹೆಚ್ಚಳ, ಬಡತನ, ನಿರುದ್ಯೋಗ, ವೃದ್ಧರ ಸಮಸ್ಯೆ, ಜಾತೀಯತೆ (ತುಳಿತಕ್ಕೆ ಒಳಗಾದವರು), ಶೋಷಣೆ, ಪ್ರಕೃತಿ ವಿಕೋಪ, ಮಕ್ಕಳು-ಹೆಣ್ಣು ಮಕ್ಕಳ ಸಮಸ್ಯೆಯಂತಹ ಸಾಮಾಜಿಕ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆದು ನಿಂತಿರುವಾಗ ನಾವು ಕಲೆಗಾಗಿ ಕಲೆ ಎನ್ನಲು ಹೇಗೆ ಸಾಧ್ಯ? ಹೀಗಾಗಿ ಇಂದು ರಂಗಭೂಮಿ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ವಹಿಸಿದ ಜವಾಬ್ದಾರಿಯನ್ನು ಇನ್ನು ಮುಂದೆಯೂ ಒಂದು ಚಟುವಟಿಕೆಯಾಗಿ, ಚಳವಳಿ ರೂಪದಲ್ಲಿ ಸಾಮಾಜಿಕವಾದ ರಂಗಭೂಮಿ ್ನಕಟ್ಟಿ ಹೆಚ್ಚು ಹೆಚ್ಚು ಶಕ್ತಿಶಾಲಿ ಮಾಡಬೇಕಾದ ಅಗತ್ಯ ಹಾಗೂ ಅನಿವಾರ್ಯತೆ ಇದೆ. ಹಾಗೆಯೇ ಇತ್ತೀಚೆಗೆ ರಾಜಕೀಯ ಲಾಭಕ್ಕಾಗಿ ಈ ವಲಯ ಭ್ರಷ್ಟಗೊಳಿಸುವ ಬೆರಳೆಣಿಕೆಯ ಸಾಹಿತಿ ಕಲಾವಿದರೂ ಸುಧಾರಿಸಬೇಕಾಗಿದೆ.

ಒಂದು ರಂಗ ತಂಡ ತನ್ನ ಚಟುವಟಿಕೆಗಳಿಂದ ಒಂದು ಸ್ವಾಸ್ಥ್ಯ ಸಮಾಜ, ಮನಸ್ಸು ಹಾಗೂ ಪರಿಸರ ಸೃಷ್ಟಿಸಿ ನೂರಾರು ಸಮಾನ ಮನಸ್ಕರನ್ನು ರಾಷ್ಟ್ರಮಟ್ಟದ ಕಲಾವಿದರನ್ನು ಕೊಡುಗೆ ನೀಡಿರುವ ಹೆಗ್ಗಳಿಕೆ ನಮ್ಮ ರಾಜ್ಯದ್ದು. ಇದರೊಂದಿಗೆ ರಂಗಭೂಮಿ ಏರುಪೇರಿನ ಹಾದಿಯಲ್ಲಿ ಸಮಾಜದೊಂದಿಗಿನ ನಡೆಯಲ್ಲಿ ಮುಂದೆ ಸಾಗಬೇಕಷ್ಟೆ.ರಂಗ ತಂಡಗಳು ಕನ್ನಡ ರಂಗ ಭೂಮಿಯಲ್ಲಿ ಜನಪರ ಹಾಗೂ ಸಮಾಜಮುಖಿ ನಾಟಕ ಪ್ರಯೋಗಗಳನ್ನು ಕಟ್ಟುವ ಮೂಲಕ ಜನಾನುರಾಗಿಯಾಗಿವೆ.

ಈ ಮೊದಲು ಸಿಜಿಕೆಯವರಂತಹ ಅನೇಕ ರಂಗಕರ್ಮಿಗಳು ಆರಂಭಕ್ಕೆ ಕನ್ನಡದ ಪ್ರಖ್ಯಾತ ಗ್ರಾಮೀಣ ಹಿನ್ನೆಲೆ ಕಥೆಗಾರರ ಕಥೆಗಳನ್ನು ಆಯ್ದುಕೊಂಡು, ರಂಗರೂಪಗಳೊಂದಿಗೆ ಸಮಾಜಮುಖಿ ನಾಟಕಗಳನ್ನು ಪ್ರಯೋಗಿಸಿದ್ದರು. ಅಲ್ಲದೆ, ನಾಟಕ ಸಂವಾದ, ವಿಚಾರ ಸಂಕಿರಣ ಹಮ್ಮಿಕೊಂಡು, ನಿರಂತರ ರಂಗ ಚಟುವಟಿಕೆಗಳನ್ನು ಅದರಲ್ಲೂ ನಾಟಕ ರಚನಾ ಕಮ್ಮಟ, ನಾಟಕ ಉತ್ಸವಗಳನ್ನು ನಡೆಸುತ್ತ ರಂಗ ಚಳವಳಿಗೆ ನಾಂದಿಯಾಗಿದ್ದಾರೆ.

ಎಮರ್ಜೆನ್ಸಿ ಸಂದರ್ಭದಲ್ಲಿನ ಅನೇಕ ಘಟನೆ ಆಧರಿಸಿದ ಬೆಲ್ಚಿಯಂತಹ ಬೀದಿನಾಟಕಗಳ ಮೂಲಕ ಪ್ರಸ್ತುತದ ಸಾಮಾಜಿಕ ಶೋಷಣೆ ಹೋಗಲಾಡಿಸಲು ಹೋರಾಟ ಕಟ್ಟಿದ್ದಾರೆ.ಶತ ಶತಮಾನಗಳಿಂದ ತುಳಿತಕ್ಕೆ ಒಳಗಾಗಿರುವ ಧ್ವನಿ ಇಲ್ಲದ ತಬ್ಬಲಿ ಹುಟ್ಟು ಕಲಾವಿದರಾದ ಅಲೆಮಾರಿಗಳು, ಅಸ್ಪೃಶ್ಯರು, ನೊಂದವರು, ಕಾರ್ಮಿಕರು, ಭೂ ಹೀನರು, ಬಡರೈತರು, ಆದಿವಾಸಿಗಳು, ಮಹಿಳೆಯರ ಪರವಾದ ದಲಿತರ ರಂಗಭೂಮಿಯ ಅಗತ್ಯದ ಬಗ್ಗೆಯೂ ಈ ಸನ್ನಿವೇಶದಲ್ಲಿ ಚಿಂತಿಸಬೇಕಾಗಿದೆ.

ಈ ಬದ್ಧತೆ ವಿಶ್ವರಂಗಭೂಮಿ ದಿನದ ನೆಪದಲ್ಲಾದರೂ ಮುಂದುವರೆಯಲಿ ಹಾಗೂ ಅತ್ಯಾಧುನಿಕ ತಾಂತ್ರಿಕ ರಂಗಭೂಮಿ ಬೆಳವಣಿಗೆಗೆ ನಾವು ನಾಂದಿಯಾಗಬೇಕಾಗಿದೆ ಎಂಬುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ. ಹೀಗಾದಾಗಲೇ ವಿಶ್ವರಂಗಭೂಮಿ ದಿನಕ್ಕೆ ಮನ್ನಣೆ ಹಾಗೂ ಮಹತ್ವ ಬರುತ್ತದೆ.

– ಡಾ.ಎ.ಆರ್.ಗೋವಿಂದಸ್ವಾಮಿ

Facebook Comments