ಇಂದು ಸಂಜೆ ಬಿಜೆಪಿ ಶಾಸಕಾಂಗ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

BJP--02

ಬೆಳಗಾವಿ, ನ.14- ಇಲ್ಲಿನ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳನ್ನು ರೂಪಿಸಲು ಪ್ರತಿಪಕ್ಷ ಬಿಜೆಪಿ ಇಂದು ಸಂಜೆ ಶಾಸಕಾಂಗ ಸಭೆ ಕರೆದಿದೆ. ವಿಧಾನಸಭೆಯ ವಿರೋಧಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಶಾಸಕಾಂಗ ಸಭೆಗೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಶಾಸಕರು ಹಾಗೂ ಪರಿಷತ್ ಸದಸ್ಯರು ಪಾಲ್ಗೊಳ್ಳುವರು.

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿ ಸ್ಥಾನದಲ್ಲಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆಗೆ ವಿರೋಧ , ಮೌಢ್ಯ ಪ್ರತಿಬಂಧಕ ಕಾಯ್ದೆ, ಕೇಂದ್ರದ ಅನುದಾನ ಸಮರ್ಪಕ ಬಳಕೆಯಲ್ಲಿ ವಿಫಲ, ರೈತರ ಆತ್ಮಹತ್ಯೆ ಸೇರಿದಂತೆ ಮತ್ತಿತರೆ ಪ್ರಚಲಿತ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಶಾಸಕಾಂಗ ಸಭೆಯಲ್ಲಿ ರಣತಂತ್ರ ರೂಪಿಸಲಿದೆ.

ಖಾಸಗಿ ವೈದ್ಯರ ಸಂಸ್ಥೆಗಳನ್ನು ನಿಯಂತ್ರಿಸಲು ಸರ್ಕಾರ ಹೊಸ ಕಾಯ್ದೆಯನ್ನು ಪ್ರಸಕ್ತ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದೆ. ಇದರಿಂದ ತಿರುಗಿಬಿದ್ದಿರುವ ವೈದ್ಯರು ಈಗಾಗಲೇ ಪ್ರತಿಭಟನೆ ಆರಂಭಿಸಿದ್ದಾರೆ. ಇದರ ಪರಿಣಾಮ ಮೂರು ರೋಗಿಗಳು ಮೃತಪಟ್ಟಿರುವುದು ಹಾಗೂ ಚಿಕಿತ್ಸೆ ಸಿಗದೆ ಸಾವಿರಾರು ಜನರು ಪರದಾಡುತ್ತಿದ್ದಾರೆ.

ಇಂದಿನಿಂದ ಪ್ರತಿಭಟನೆ ಕಾವು ಹೆಚ್ಚಾಗುತ್ತಿರುವುದರಿಂದ ಈ ಕಾಯ್ದೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ಸರ್ಕಾರದ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ. ಸಮಾಜದಲ್ಲಿ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಸಮಾಜ ಕಲ್ಯಾಣ ಇಲಾಖೆ ಸಿದ್ಧಪಡಿಸಿರುವ ಮೌಢ್ಯ ಪ್ರತಿಬಂಧಕ ಕಾಯ್ದೆಗೂ ಬಿಜೆಪಿ ಈಗಾಗಲೇ ವಿರೋಧ ವ್ಯಕ್ತಪಡಿಸಿದೆ. ಕೇವಲ ಒಂದು ಧರ್ಮವನ್ನು ಗುರಿಯಾಗಿಟ್ಟುಕೊಂಡು ಈ ಕಾಯ್ದೆಯನ್ನು ಸಿದ್ಧಪಡಿಸಲಾಗಿದೆ ಎಂಬುದು ಬಿಜೆಪಿ ಆರೋಪ.

ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಅವರು ಇದೇ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಿದ್ದಾರೆ. ಯಾವುದೇ ಕಾರಣಕ್ಕೂ ಈ ಮಸೂದೆ ಮಂಡನೆ ಮಾಡಬಾರದೆಂದು ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಲಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟಿರುವ ಅನುದಾನವನ್ನು ಬಳಕೆ ಮಾಡಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂದು ದೂರಿದ್ದರು. ಇದೀಗ ಉಭಯ ಸದನಗಳಲ್ಲೂ ಈ ವಿಷಯ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಿದ್ಧತೆ ನಡೆಸಿದೆ.

ಸಂಜೆ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲು ಏನೇನು ಕಾರ್ಯತಂತ್ರ ರೂಪಿಸಬೇಕು, ಸದನದಲ್ಲಿ ಶಾಸಕರ ಒಗ್ಗಟ್ಟು ಪ್ರದರ್ಶನ, ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗುವುದು ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆಯೂ ಶಾಸಕರಿಗೆ ಪಕ್ಷದ ಮುಖಂಡರು ಸಲಹೆ ಮಾಡಲಿದ್ದಾರೆ.

Facebook Comments

Sri Raghav

Admin