ಇಡೀ ಕುಟುಂಬವನ್ನೇ ಬಲಿ ಪಡೆದ ಕುಡಿತದ ಚಟ..!

ಈ ಸುದ್ದಿಯನ್ನು ಶೇರ್ ಮಾಡಿ

Train--01

ಬೆಂಗಳೂರು, ಜೂ.20- ಮನೆಯ ಯಜಮಾನನ ಕುಡಿತದ ಚಟ ಹಾಗೂ ಸಣ್ಣ ಕೋಪ ಇಡೀ ಕುಟುಂಬವನ್ನೇ ಬಲಿ ಪಡೆದ ಹೃದಯ ವಿದ್ರಾವಕ ಕಥೆ ಇದು. ದೇವನಹಳ್ಳಿ ಬಳಿ ವಾಸವಿದ್ದ ಸಂಸಾರ ನುಚ್ಚು ನೂರಾಗಿ ಎಲ್ಲವನ್ನೂ ಕಳೆದುಕೊಂಡು ಈಗ ಆ ಮನೆಯ ಯಜಮಾನ ರೋದನೆಯಲ್ಲೇ ಕಾಲ ಕಳೆಯುವುದೇ ಹಾದಿ.  ಇಂದು ಬೆಳಗ್ಗೆ ದೇವನಹಳ್ಳಿ ಸಮೀಪದ ಬೈಪಾಸ್ ರಸ್ತೆ ಬಳಿ ಇರುವ ರೈಲ್ವೆ ಹಳಿ ಮೇಲೆ ತಾಯಿ-ಮಗನ ಶವ ಕಂಡು ಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದಾಗ ಇಡೀ ವೃತ್ತಾಂತ ಬಯಲಿಗೆ ಬಂದಿದೆ.

ಘಟನೆಯ ವಿವರ:

ದೇವನಹಳ್ಳಿ ಪಟ್ಟಣದಲ್ಲಿ ವಾಸವಿರುವ ಸುಬ್ರಹ್ಮಣಿ ಮತ್ತು ಸುಜಾತಗೆ ಸೂರ್ಯ ತೇಜ ಮತ್ತು ಚಂದ್ರತೇಜ ಎಂಬ ಗಂಡು ಮಕ್ಕಳಿದ್ದರು. ಸಣ್ಣ ಪುಟ್ಟ ವ್ಯಾಪಾರ ನಡೆಸಿಕೊಂಡು ಆರಂಭದಲ್ಲೇ ಕುಟುಂಬ ಸಂತೋಷದಲ್ಲೇ ಇತ್ತು.  ಆದರೆ ಕಳೆದ ಎರಡು ಮೂರು ವರ್ಷದಿಂದ ಮನೆಯ ಯಜಮಾನ ಸುಬ್ರಮಣಿ ಕುಡಿತದ ಚಟಕ್ಕೆ ದಾಸನಾಗಿದ್ದ. ಇದರಿಂದ ಆಗಾಗ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಮಕ್ಕಳು ಇದನ್ನು ನೋಡಿ ಮುಮ್ಮಲ ಮರಗುತ್ತಿದ್ದರು. ಆದರೆ ಇತ್ತೀಚೆಗೆ ಕುಟುಂಬದಲ್ಲಿ ತಂದೆಯ ಈ ದುರ್ನಡತೆಯ ಬಗ್ಗೆ ಎಲ್ಲರಲ್ಲೂ ಬೇಸರ ಮೂಡಿಸಿತು. ಹಣೆಬರಹ ಬಲ್ಲವರಾರು ಎಂಬಂತೆ ಮೂರು ದಿನಗಳ ಹಿಂದೆ ಗಲಾಟೆ ನಡೆದಾಗ ಅಮ್ಮನನ್ನು ರಕ್ಷಿಸಲು ಕಿರಿಯ ಪುತ್ರ ಚಂದ್ರ ತೇಜ ಹೋಗಿದ್ದಾನೆ.

ಈ ವೇಳೆ ಮಗನ ಮೇಲೆ ಎರಗಿದ ಸುಬ್ರಮಣಿ ಮನ ಬಂದಂತೆ ಆತನನ್ನು ಥಳಿಸಿ ನಿಂದಿಸಿದ್ದಾನೆ. ಇದರಿಂದ ಮನ ನೊಂದು ಚಂದ್ರತೇಜ ಆತ್ಮಹತ್ಯೆ ಮಾಡಿಕೊಂಡಿದ್ದ. ಇದರಿಂದ ಇಡೀ ಕುಟುಂಬಕ್ಕೆ ಆಘಾತ ಉಂಟಾಗಿತ್ತು. ಆದರೆ ಇದರ ನೋವಿನಲ್ಲೇ ಬಳಲುತ್ತಿದ್ದ ತಾಯಿ ಕಳೆದ ರಾತ್ರಿ ತನ್ನ ಹಿರಿಯ ಪುತ್ರ ಸೂರ್ಯ ತೇಜನನ್ನು ಜತೆಗೆ ಕರೆದುಕೊಂಡು ಹೋಗಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಶವಗಳನ್ನು ನೋಡಿ ಸ್ಥಳೀಯರು ಗುರುತು ಪತ್ತೆ ಹಚ್ಚಿದ್ದಾರೆ. ಸ್ಥಳದಲ್ಲೇ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಸ್ಥಳಕ್ಕೆ ಮಾಜಿ ಶಾಸಕ ವೆಂಕಟಸ್ವಾಮಿ ಸೇರಿದಂತೆ ಹಲವರು ಭೇಟಿ ನೀಡಿ ಕಂಬನಿ ಮಿಡಿದಿದ್ದಾರೆ. ಬೆಳೆದ ಮಕ್ಕಳು ಈ ರೀತಿ ತಂದೆಯ ಕ್ರೂರತೆಗೆ ಬಲಿಯಾಗಿರುವುದ್ನನ್ನು ತಿಳಿದು ಸಂಬಂಧಿಕರು ಮಮ್ಮಲ ಮರುಗಿದ್ದಾರೆ. ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin