ಇತರರನ್ನು ಬಾವಿಗೆ ತಳ್ಳಿ ಆಳ ನೋಡುವ ಪ್ರತ್ಯೇಕತಾವಾದಿಗಳ ಇಬ್ಬಗೆ ನೀತಿ

ಈ ಸುದ್ದಿಯನ್ನು ಶೇರ್ ಮಾಡಿ

Gilani

ನವದೆಹಲಿ, ಆ.17-ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸದಾ ವಿವಾದವನ್ನು ಸೃಷ್ಟಿಸುತ್ತಿರುವ ಕಾಶ್ಮೀರ ಪ್ರತ್ಯೇಕತಾ ವಾದಿ ಸಂಘಟನೆಗಳು ಕಳೆದ ಮೂರು ತಿಂಗಳಿನಿಂದ ಇಡೀ ವಿಶ್ವದ ಗಮನ ಸೆಳೆದಿವೆ.   ಅದರಲ್ಲೂ ಹಿಜ್‍ಬುಲ್ ಮುಜಾಹಿದೀನ್ ಸಂಘಟನೆ ಮುಖಂಡ ವಾನಿಯನ್ನು ಭಾರತೀಯ ಸೇನಾಪಡೆ ಹತ್ಯೆ ಮಾಡಿದ ಬಳಿಕ ಈ ಪ್ರತ್ಯೇಕತಾವಾದಿಗಳು ಅಮಾಯಕ ಯುವಕರನ್ನು ಪ್ರಚೋದಿಸಿ ನಡೆಸಿದ ಪ್ರತಿಭಟನೆ ವೇಳೆ  ಸಂಭವಿಸಿದ ಹಿಂಸೆಗೆ ಸುಮಾರು 66ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಸುಮಾರು 5 ಸಾವಿರಕ್ಕೂ ಅಧಿಕ ನಾಗರಿಕರು ಗಾಯಗೊಂಡಿದ್ದಾರೆ.  ಕಾಶ್ಮೀರ ದೇಶದ ಅವಿಭಾಜ್ಯ ಅಂಗ ಎಂದು ಭಾರತ ಪದೇ ಪದೇ ಹೇಳುತ್ತಿದ್ದರೂ ನೆರೆಯ ಪಾಕಿಸ್ತಾನ ಮಾತ್ರ ಇದನ್ನು ಒಪ್ಪುತ್ತಿಲ್ಲ. ಹೀಗಾಗಿ ಎರಡು ರಾಷ್ಟ್ರಗಳ ನಡುವೆ ಸದಾ ಉದ್ವಿಗ್ನತೆಗೆ ಕಾರಣವಾಗುತ್ತಿರುವ ಕಾಶ್ಮೀರ ಎಂದೂ ಬಗೆಹರಿಯದ ಬಿಕ್ಕಟ್ಟಾಗಿ ಪರಿಣಮಿಸಿದೆ.

ಇನ್ನು ದೇಶದೊಳಗಿದ್ದುಕೊಂಡೇ ಪಾಕಿಸ್ತಾನ ಪರ ಏಜೆಂಟರಂತೆ ಕೆಲಸ ನಿರ್ವಹಿಸುವ ಪ್ರತ್ಯೇಕತಾ ವಾದಿಗಳು ಕಾಶ್ಮೀರ ವಿವಾದವನ್ನೇ ಮುಂದಿಟ್ಟುಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ.   ಪಾಕ್ ಪ್ರೇರಿತ ಐಎಸ್‍ಐ ಮತ್ತು ಕೆಲವು ಉಗ್ರಗಾಮಿ ಸಂಘಟನೆಗಳ ಜೊತೆ ಕೈ ಜೋಡಿಸುವ ಈ ಪ್ರತ್ಯೇಕತಾವಾದಿಗಳು ಯಾವಾಗಲೂ ಭಾರತ ವಿರೋಧಿ ನಿಲುವನ್ನೇ ತಾಳಿದ್ದಾರೆ. ಅದರಲ್ಲೂ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‍ಯು)ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕನ್ಹಯ್ಯಕುಮಾರ್ ಬಂಧನ ಹಾಗೂ ನಾಲ್ಕು ದಿನಗಳ ಹಿಂದೆಯಷ್ಟೆ ಥಿಯಾಲಜಿಕಲ್ ಕಾಲೇಜಿನಲ್ಲಿ ಭಾರತೀಯ ಸೇನೆ ವಿರುದ್ಧ ಮತ್ತು ಪಾಕಿಸ್ತಾನ ಪರ ಘೋಷಣೆ ಕೂಗಿದ್ದು, ಭಾರೀ ವಿವಾದವನ್ನೇ ಸೃಷ್ಟಿಸಿದೆ.  ಪ್ರತ್ಯೇಕತಾವಾದಿಗಳ ಜೊತೆ ಕೆಲವು ಸ್ವಯಂಘೋಷಿತ ಬುದ್ಧಿಜೀವಿಗಳು, ಪ್ರಗತಿಪರರು ಮತ್ತು ಕಮ್ಯುನಿಸ್ಟ್ಟ್ ಸಿದ್ಧಾಂತವನ್ನು ಅನುಸರಿಸುತ್ತಿರುವ ಕೆಲವರು ಪ್ರತ್ಯೇಕತಾವಾದಿಗಳ ಜೊತೆ ಕೈ ಜೋಡಿಸಿದ್ದಾರೆ.

ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ ಪಾಕಿಸ್ತಾನದಲ್ಲಿ ವಿಲೀನಗೊಳಿಸಬೇಕೆಂಬ ಹುನ್ನಾರವನ್ನು ಸ್ವಾತಂತ್ರ್ಯ ಬಂದಾಗಿನಿಂದಲೂ ಈ ಪ್ರತ್ಯೇಕತಾವಾದಿಗಳು ನಡೆಸುತ್ತಲೇ ಬಂದಿದ್ದಾರೆ.
ದೇಶದೊಳಗಿದ್ದುಕೊಂಡೇ ರಾಷ್ಟ್ರವಿರೋಧಿ ಚಟುವಟಿಕೆ ನಡೆಸುವ ಇವರದು ಯಾವಾಗಲೂ ದ್ವಂದ್ವ ನೀತಿ. ತಮ್ಮ ಮಕ್ಕಳನ್ನು ಭಾರತದ ಪ್ರಮುಖg ರಾಜ್ಯಗಳು ಹಾಗೂ ವಿದೇಶಗಳಿಗೆ ವ್ಯಾಸಂಗಕ್ಕೆ ಕಳುಹಿಸುವ ಇವರು ಅಮಾಯಕ ಕಾಶ್ಮೀರಿ ಯುವಕರ ಕೈಗೆ ಬಂದೂಕು ಕೊಟ್ಟು ಹೋರಾಟಕ್ಕೆ ಧುಮುಕುವಂತೆ ಪ್ರೇರಣೆ ನೀಡುತ್ತಾರೆ.  ಏನೂ ಅರಿಯದ ಕಾಶ್ಮೀರಿ ಯುವಕರಿಗೆ ತಲೆ ಕೆಡಿಸಿ ಉಗ್ರಗಾಮಿ ಚಟುವಟಿಕೆಗಳಿಗೆ ಕೈಜೋಡಿಸುವಂತೆ ಪ್ರೇರೇಪಿಸಿ ಭಾರತ ಮತ್ತು ಭಾರತೀಯ ಸೇನೆ ವಿರುದ್ಧ ಎತ್ತಿಕಟ್ಟಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಈ ಪ್ರತ್ಯೇಕತಾ ವಾದಿಗಳ ಒಂದಂಶದ ಕಾರ್ಯಕ್ರಮ.
ಪ್ರತ್ಯೇಕತಾವಾದಿಗಳು ಯಾರು?
ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕೆಂದು ಬಯಸುತ್ತಿರುವ ಸರ್ ಸೈಯ್ಯದ್ ಜಿಲಾನಿ, ಮಷರತ್ ಆಲಂ, ಉಮರ್ ಫಾರುಖ್, ಹಯಾಜ್ ಅಕ್ಬರ್ ಸೇರಿದಂತೆ ಮತ್ತಿತರ ಪ್ರತ್ಯೇಕತಾವಾದಿಗಳು ತಮ್ಮ ಮನೆಯನ್ನು ಭದ್ರಪಡಿಸಿಕೊಂಡು ಬೇರೊಬ್ಬರನ್ನು ಭಾರತದ ವಿರುದ್ಧ ಛೂ ಬಿಡುತ್ತಾರೆ.   ಜಮ್ಮು ಮತ್ತು ಕಾಶ್ಮೀರ ಆಲ್ ಪಾರ್ಟಿ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷರಾಗಿರುವ ಸೈಯ್ಯದ್ ಆಲಿ ಷಾ ಗಿಲಾನಿ ಪ್ರತ್ಯೇಕತಾವಾದಿಗಳಲ್ಲೇ ಅತ್ಯಂತ ಪ್ರಮುಖ.   ಭಾರತದ ವಿರುದ್ಧ ಸದಾ ಕತ್ತಿ ಮಸೆದು ಪಾಕಿಸ್ತಾನ ಪರ ತುತ್ತೂರಿ ಊದುವ ಗಿಲಾನಿ ತಮ್ಮ ಮಕ್ಕಳಾಗಲಿ, ಮೊಮ್ಮಕ್ಕಳಾಗಲಿ ಕಾಶ್ಮೀರ ಹೋರಾಟಕ್ಕೆ ಎಂದೂ ತೊಡಗಿಸಿಕೊಂಡವರಲ್ಲ. ಗಿಲಾನಿ ಅವರ ಹಿರಿಯ ಪುತ್ರ ನಹೀದ್ ಗಿಲಾನಿ, ಅವರ ಪತ್ನಿ ಬಾಜೀಯಾ ವೃತ್ತಿಯಲ್ಲಿ ವೈದ್ಯರಾಗಿದ್ದು, ಪಾಕಿಸ್ತಾನದ ರಾವಲ್‍ಪಿಂಡಿಯಲ್ಲಿದ್ದಾರೆ.
ಮತ್ತೋರ್ವ ಪುತ್ರ ದಕ್ಷಿಣ ದೆಹಲಿಯಲ್ಲಿದ್ದರೆ, ಪುತ್ರಿ ಫರಹತ್ ಗಿಲಾನಿ, ಅಳಿಯ ಜೆಡ್ಡಾದಲ್ಲಿ ಶಿಕ್ಷಕರಾಗಿದ್ದಾರೆ.  ಇಡೀ ಗಿಲಾನಿ ಕುಟುಂಬದ ಯಾವುದೇ ಸದಸ್ಯರು ಈವರೆಗೂ ಕಾಶ್ಮೀರಿ ಹೋರಾಟದಲ್ಲಿ ಭಾಗಿಯಾಗಿರುವ ಬಗ್ಗೆ ಒಂದೇ ಒಂದೂ ನಿದರ್ಶನವಿಲ್ಲ. ಗಿಲಾನಿ ಅವರ ಮೊಮ್ಮಕ್ಕಳೂ ಕೂಡ ದೆಹಲಿಯ ಕ್ರಿಶ್ಚಿಯನ್ ಮಿಷನರಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಗಿಲಾನಿ ಸಹೋದರ ಗುಲಾಮ್ ನಬಿ ಫಾಲ್ ಕೂಡ ಲಂಡನ್‍ನಲ್ಲಿ ವಾಸವಿದ್ದಾರೆ.  ಎಪಿಎಚ್‍ಸಿ ವಕ್ತಾರ ಅಯಾಜ್ ಅಕ್ಬರ್ ಪುತ್ರ ಸರ್ವರ್‍ಯಾಕೂಬ್ ಪುಣೆಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಮತ್ತೋರ್ವ ಪ್ರತ್ಯೇಕತಾವಾದಿ ಅಬ್ದುಲ್ ಅಜೀಜ್ ಧರ್ ಅಲಿಯಾಸ್ ಜನರಲ್ ಮೂಸಾ ಪೂನಾದಲ್ಲಿ ಪಶುಸಂಗೋಪನಾ ಕೋರ್ಸ್‍ಗಳ ಬಗ್ಗೆ ವ್ಯಾಸಂಗ ಮಾಡುತ್ತಿದ್ದಾನೆ.

ಆಸಿಯಾ ಅನ್‍ಡ್ರಾಬ್ ಎಂಬ ಮತ್ತೋರ್ವ ಪ್ರತ್ಯೇಕತಾವಾದಿ ಮಲೇಷ್ಯಾದಲ್ಲಿದ್ದರೆ, ಮೊಹಮ್ಮದ್ ಬಿನ್ ಕಾಸಿಮ್ ಮಲೇಷ್ಯಾದ ಇಸ್ಲಾಂ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕನಾಗಿದ್ದಾನೆ. ಅವರ ಹಿರಿಯ ಪುತ್ರ ಅಹಮ್ಮದ್ ಬಿನ್ ಕಾಸಿಮ್ ಮಲೇಷ್ಯಾದಲ್ಲಿ ಮರಿಯಂ ಎಂಬುವರನ್ನು ವಿವಾಹವಾಗಿ ಅಲ್ಲಿಯೇ ವಾಸವಿದ್ದಾನೆ.  ಮಷರತ್ ಆಲಂ ಅವರ ಪುತ್ರ ಅಮೆರಿಕದಲ್ಲಿದ್ದರೆ, ಸಹೋದರ ದೆಹಲಿಯಲ್ಲಿ ವಾಸವಾಗಿದ್ದಾನೆ. ಡಾ.ಉಮರ್ ಫಾರುಖ್ ಮಿರ್ವಾರ್ ಅಮೆರಿಕದಲ್ಲಿದ್ದರೆ, ಮತ್ತೋರ್ವ ಪುತ್ರ ರಾಬಿಯಾ ಫಾರುಖ್ ಕೂಡ ಲಂಡನ್‍ನಲ್ಲಿದ್ದಾರೆ.  ಹೀಗೆ ಬಹುತೇಕ ಪ್ರತ್ಯೇಕತಾ ವಾದಿಗಳು ತಮ್ಮ ಕುಟುಂಬಗಳನ್ನು ಭದ್ರಪಡಿಸಿಕೊಂಡು ಬೇರೆ ಮಕ್ಕಳನ್ನು ಎತ್ತಿಕಟ್ಟಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ದುರಂತವೇ ಸರಿ.
ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಮಜಾ ನೋಡುವುದೆಂದರೆ ಇದೇನಾ?

► Follow us on –  Facebook / Twitter  / Google+

Facebook Comments

Sri Raghav

Admin