ಬಿಬಿಎಂಪಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಏಕಕಾದಲ್ಲಿ 2300 ನೌಕರರ ಸಾಮೂಹಿಕ ವರ್ಗಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

BBMP

ಬೆಂಗಳೂರು,ಆ.8-  ಪಾಲಿಕೆಯ ಇತಿಹಾಸ ದಲ್ಲೇ ಭಾರೀ ಪ್ರಮಾಣದ  2300 ಅಧಿಕಾರಿಗಳ ಸಾಮೂಹಿಕ ವರ್ಗಾವಣೆಯ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಇಂದಿನಿಂದ ಮೂರು ದಿನಗಳ ಕಾಲ ಕೌನ್ಸೆಲಿಂಗ್ ನಡೆಯಲಿದೆ. ಪಾಲಿಕೆಯ ಕೇಂದ್ರ ಕಚೇರಿ, ಐಬಿಪಿ ಸೆಂಟರ್, ಮಲ್ಲೇಶ್ವರಂ ಪಾಲಿಕೆ ಕಚೇರಿಯಲ್ಲಿ ವರ್ಗಾವಣೆ ಸಂಬಂಧ ನೌಕರರಿಗೆ ಕೌನ್ಸಿಲಿಂಗ್ ನಡೆಯುತ್ತಿದ್ದು, ಅಲ್ಲಿಯೇ ವರ್ಗಾವಣೆ ಆದೇಶವನ್ನು ಸಂಬಂಧಿತ ಅಧಿಕಾರಿಗಳಿಗೆ ನೀಡಲಾಗುವುದು.  ಬಿಬಿಎಂಪಿ ಇತಿಹಾಸದಲ್ಲೇ ಇಷ್ಟು ಪ್ರಮಾಣದಲ್ಲಿ ವರ್ಗಾವಣೆ ನಡೆದಿರಲಿಲ್ಲ. ಏಕಕಾದಲ್ಲಿ 2300 ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿರುವುದು ಇದೇ ಪ್ರಪ್ರಥಮ ಬಾರಿ.

ಎರವಲು ಸೇವೆಯ ಮೇಲೆ ಬಿಬಿಎಂಪಿಗೆ ನಿಯೋಜನೆಗೊಂಡವರು ಮೂರು ವರ್ಷ ಮಾತ್ರ ಇಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ. ಆದರೆ, 8-10 ವರ್ಷ ಗಳಿಂದ ಇಲ್ಲಿಯೇ ಸೇವೆ ಸಲ್ಲಿಸುತ್ತಿ ರುವವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸ ಲಾಗುತ್ತಿದೆ.  ಉಳಿದ ಅಧಿಕಾರಿಗಳನ್ನು ವಲಯವಾರು ವರ್ಗಾವಣೆ ಮಾಡಲಾಗುತ್ತಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಈ ಸಂಜೆಗೆ ತಿಳಿಸಿದರು.  ಯಾವ ಲಾಬಿ, ಪ್ರಭಾವಕ್ಕೂ ಮಣಿಯದೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗು ತ್ತಿದ್ದು, ಎಲ್ಲೆಲ್ಲಿಗೆ ವರ್ಗಾವಣೆ ಮಾಡಲಾಗುತ್ತಿದೆ ಅಲ್ಲಿಗೆ ನೌಕರರು, ಅಧಿಕಾರಿಗಳು ಹೋಗಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.

ಈ ಹಿಂದೆಯೇ ವರ್ಗಾವಣೆ ಪಟ್ಟಿ ಸಿದ್ಧ ಗೊಂಡಿತ್ತು. ಅದರಲ್ಲಿ ಸಾಕಷ್ಟು ನ್ಯೂನತೆಗಳಿದ್ದವು. ನಿವೃತ್ತಿಹೊಂದಿದ್ದವರು, ಮೃತಪಟ್ಟವರನ್ನು ವರ್ಗಾವಣೆ ಮಾಡಲಾಗಿತ್ತು. ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸ್ಥಾಯಿ ಸಮಿತಿ ಅಧ್ಯಕ್ಷರು ಈ ಎಲ್ಲಾ ಗೊಂದಲಗಳನ್ನು ಸರಿ ಪಡಿಸಿ 2300 ನೌಕರರ ವರ್ಗಾವಣೆ ಪಟ್ಟಿಯನ್ನು ಸಿದ್ದಪಡಿಸಿ ಇಂದಿನಿಂದ ಕೌನ್ಸಿಲಿಂಗ್ ಆರಂಭಿಸಿದ್ದಾರೆ.  ಯಾರ ಪ್ರಭಾವ, ಲಾಬಿ, ಒತ್ತಡ ತರದೆ ತಮ್ಮ ಸ್ಥಳಕ್ಕೆ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದ್ದಾರೆ. ಇನ್ನು 50ರಿಂದ 100 ನೌಕರರು ವರ್ಗಾವಣೆ ಯಿಂದ ಹೊರಗುಳಿದಿದ್ದು, ಸದ್ಯದಲ್ಲೇ ಅವರನ್ನೂ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು. ಬಿಬಿಎಂಪಿ ಸುಗಮ ಆಡಳಿತಕ್ಕೆ ಅಧಿಕಾರಿಗಳ ವರ್ಗಾವಣೆ ಮಾಡಬೇಕೆಂದು ಮುಖ್ಯಮಂತ್ರಿಗಳ ಆದೇಶವಿತ್ತು. ಆದೇಶದ ಮೇರೆಗೆ
ವರ್ಗಾವಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

Facebook Comments

Sri Raghav

Admin