ಇತಿಹಾಸವನ್ನು ಬಿಂಬಿಸುವ ಗೊಂಬೆ ಹಬ್ಬ

ಈ ಸುದ್ದಿಯನ್ನು ಶೇರ್ ಮಾಡಿ

vijayapura6

ವಿಜಯಪುರ,ಅ.10- ಅದ್ಧೂರಿ ಆಚರಣೆಯ ನಾಡಹಬ್ಬ ದಸರಾ ಬಂತೆಂದರೆ ಗೊಂಬೆ ಕೂರಿಸುವುದು ಒಂದು ಸಂಪ್ರದಾಯವಾಗಿದೆ. ಗೊಂಬೆಗಳ ಹಬ್ಬವೆಂದೇ ಹೆಸರಾಗಿದ್ದು, ದಸರಾದಲ್ಲಿ ಗೊಂಬೆಗಳು ಮಾತನಾಡುತ್ತವೆ ಎನ್ನುತ್ತಾರೆ ಹಿರಿಯರು.ದಸರಾ ಆರಂಭಕ್ಕೆ ಮುನ್ನವೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಗೊಂಬೆಗಳನ್ನು ಅಲಂಕಾರ ಮಾಡಿಸುವ ಮೂಲಕ ರಾಮಾಯಣ, ಮಹಾಭಾರತ, ಐತಿಹಾಸಿಕ, ಪೌರಾಣಿಕ ಸನ್ನಿವೇಶಗಳನ್ನು ಈ ಗೊಂಬೆ ಹಬ್ಬ ನೆನಪಿಸುತ್ತದೆ.ಆರಂಭದ ದಿನದಲ್ಲಿ ಸ್ವಲ್ಪ ಗೊಂಬೆಗಳನ್ನು ಮಾತ್ರ ಕೂರಿಸಿ ನಂತರದ ಒಂಭತ್ತೂ ದಿನಗಳ ಕಾಲ ಗೊಂಬೆಗಳ ಸಂಖ್ಯೆಯನ್ನು ಹೆಚ್ಚಿಸುವುದು. ಪ್ರತಿದಿನವೂ ಒಂದೊಂದು ಶಕ್ತಿದೇವತೆಯ ಆರಾಧನೆ, ಗೊಂಬೆಗಳಿಗೆ ವಿಶೇಷಪೂಜೆ, ಮುತ್ತೈದೆಯರಿಗೆ ಫಲತಾಂಬೂಲ ವಿತರಣೆ, ಮಕ್ಕಳಿಗೆ ಗೊಂಬೆ ತಿಂಡಿ, ಪ್ರಸಾದ ವಿತರಣೆಯ ಮೂಲಕ ದಸರಾಗೆ ಮತ್ತಷ್ಟು ಕಳೆ ತರುತ್ತದೆ.
ಜನರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು  ಗೆ ಮಾರುಹೋಗಿ, ದೃಶ್ಯಮಾಧ್ಯಮಗಳಿಂದ ಮರುಳಾಗುತ್ತಿದ್ದರೂ ಸಾಂಪ್ರದಾಯಿಕ ಹಾಗೂ ಪಾರಂಪಾರಿಕವಾಗಿ ಕೆಲವರು ಉತ್ಸಾಹದಿಂದಲೇ ಗೊಂಬೆಪೂಜೆ ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ.ಬದಲಾವಣೆ: ಗೊಂಬೆಗಳಿಗೆ ಅಲಂಕಾರಿಕ ಉಡುಗೆ-ತೊಡುಗೆ ತೊಡಿಸಿ, ಸಿಂಗರಿಸಿ ಅಲಂಕಾರಿಕವಾಗಿ ಯಾವುದಾದರೊಂದು ಸನ್ನಿವೇಶವನ್ನು ಗೊಂಬೆಗಳ ಮೂಲಕ ತಿಳಿಸಲಾಗುತ್ತದೆ.ಗೊಂಬೆಗಳ ಜೋಡಣೆಯ ಮೂಲಕ ಶರಣ ಸಂಸ್ಕೃತಿಯನ್ನು  ಹೇಳುವಲ್ಲಿ ಪಟ್ಟಣದ ಮರಿಚನ್ನಪ್ಪ ಬಡಾವಣೆಯ ನಿವಾಸಿಗಳಾದ ಮೀನಾಸುರೇಶ್ ಯಶಸ್ವಿಯಾಗಿದ್ದಾರೆ.ಸಾವಿರಾರು ಗೊಂಬೆಗಳ ಮೂಲಕ ಪೌರಾಣಿಕ ಪಾತ್ರಗಳನ್ನು ತಿಳಿಸಿರುವುದಲ್ಲದೇ ಈ ವರ್ಷ ವಿಶೇಷವಾಗಿ ವಿವಿಧ ಮಠಾಧೀಶರು, ಶರಣರ ಚಿತ್ರಗಳು, ವಿಗ್ರಹಗಳು, ಶರಣರ ಜೀವನಚರಿತ್ರೆ, ವಚನಗಳ ಪುಸ್ತಕಗಳನ್ನು ಬಳಸಿ ಓರಣ ಮಾಡಿದ್ದಾರೆ. ಮಧ್ಯಭಾಗದಲ್ಲಿ ಶರಣಲಾಂಛನ, ಗುರುಬಸವ ಲಿಂಗಾಯ ಉಕ್ತಿಯನ್ನು ಸೃಷ್ಟಿಸಿದ್ದಾರೆ.
ಹತ್ತುದಿನಗಳ ಕಾಲ ಮಹಾಕಾಳಿ, ದುರ್ಗೆ, ಅಂಬೆ, ಚಾಮುಂಡಿ, ಮಹಾಲಕ್ಷ್ಮಿ, ಸರಸ್ವತಿ, ದೇವತೆಗಳನ್ನು ಪೂಜಿಸುವ ಮೂಲಕ ದುಷ್ಟಶಕ್ತಿಗಳು ಅಡಗಿ ದಿವ್ಯದೈವಿಶಕ್ತಿಗಳು ಲೋಕವನ್ನು ರಕ್ಷಿಸಲಿ ಎಂಬುದು ಹಬ್ಬದ ಉದ್ದೇಶ ಎನ್ನುತ್ತಾರೆ ಹಿರಿಯರಾದ ವೇದಾವತಮ್ಮನವರು.
ಪ್ರವಾಸ ಹೋದಾಗಲೆಲ್ಲಾ ಪವಿತ್ರ ಕ್ಷೇತ್ರಗಳಲ್ಲಿ ಜ್ಞಾಪಕಾರ್ಥವಾಗಿ ಇಷ್ಟವಾದ ಗೊಂಬೆ, ಪ್ರತಿಮೆ, ವಿಗ್ರಹಗಳನ್ನು ಕೊಂಡುತರುವುದು ಅಭ್ಯಾಸವಾಗಿದೆ. ಸುಮಾರು ಸಾವಿರಕ್ಕೂ ಹೆಚ್ಚು ಗೊಂಬೆಗಳನ್ನು ಸಂಗ್ರಹಿಸಿದ್ದೇವೆ ಎನ್ನುತ್ತಾರೆ ಮೀನಾಸುರೇಶ್.ಪ್ರತಿವರ್ಷವೂ ಒಂದೊಂದು ಸನ್ನಿವೇಶವನ್ನು ಸೃಷ್ಟಿಸುತ್ತಿದ್ದೇವೆ. ಈ ಬಾರಿ ಶರಣ ಸಂಸ್ಕೃತಿಯನ್ನು  ಬಿಂಬಿಸಬೇಕೆಂಬ ಉದ್ದೇಶದಿಂದ ಅಗತ್ಯ ವಿಗ್ರಹಗಳನ್ನು ಕಳೆದ ಒಂದು ತಿಂಗಳಿಂದ ಸಂಗ್ರಹಿಸಿದ್ದೆ. ಮನಸಿನ ಭಾವನೆಯನ್ನು ಗೊಂಬೆಹಬ್ಬದಲ್ಲಿ ಸಾಕಾರಮಾಡಿಕೊಂಡಿದ್ದೇನೆ ಎಂಬುದು ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಕವಿ ಮ.ಸುರೇಶ್‍ಬಾಬು ಅವರ ಅಭಿಪ್ರಾಯ.

 

► Follow us on –  Facebook / Twitter  / Google+

Facebook Comments

Sri Raghav

Admin