ಇದು ಕಮಾಲ್ ಕ್ಯಾಲೆಂಡರ್

ಈ ಸುದ್ದಿಯನ್ನು ಶೇರ್ ಮಾಡಿ

Calendar--01

ಅಂಗೈಯಲ್ಲಿ ವರ್ಷದ ಆದಿ-ಅಂತ್ಯಗಳನ್ನು ಬಿಂಬಿಸುವ ಕೈಗನ್ನಡಿ. ಇದು ಮ.ಯ.ದೊಡಮನಿ ಕೌಶಲ್ಯದ ಸಾಧನೆ. ಕುತೂಹಲದಿಂದ ಕಳೆದ 38 ವರ್ಷಗಳಿಂದಲೂ ಚಿಕ್ಕದೊಂದು ಹಾಳೆಯಲ್ಲಿ ವರ್ಷದ ಕ್ಯಾಲೆಂಡರ್ ಸಿದ್ಧಪಡಿಸಿ ಅವರು ಅಚ್ಚರಿ ಮೂಡಿಸುತ್ತ ಬಂದಿದ್ದಾರೆ. ಅವರು ಈ ಕಾರ್ಯದತ್ತ ಗಮನ ಹರಿಸಿದ ಸಂಗತಿ ಕೂಡ ಆಕಸ್ಮಿಕ. ಮೊದಲೆಲ್ಲ ಅವರಿಗೆ ಉಚಿತವಾಗಿ ಕ್ಯಾಲೆಂಡರ್ ನೀಡಲಾಗುತ್ತಿತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಉಚಿತ ಕ್ಯಾಲೆಂಡರ್ ಸಿಗಲಿಲ್ಲ. ಈ ಕಾರಣ ಖರ್ಚಿಲ್ಲದ ಸಂಯುಕ್ತ ದಿನದರ್ಶಿ ರೂಪಿಸುವತ್ತ ಗಮನ ಹರಿಸಿದ್ದಾರೆ. ನಿರಂತರ ಪರಿಶ್ರಮದಿಂದ ಕೊನೆಗೂ ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ.
ಆರಂಭದಲ್ಲಿ ಸುಮಾರು 15 ದಿನಗಳಲ್ಲಿ ಸಮರ್ಪಕ ಹಾಗೂ ಸರಳ ಕ್ಯಾಲೆಂಡರ್ ತಯಾರಿಸಿದ್ದಾಗಿ ಹೇಳುವ ಅವರು, ಈಗೆಲ್ಲ ಒಂದೆರಡು ದಿನಗಳಲ್ಲಿ ಅದನ್ನು ಮಾಡಿ ಮುಗಿಸುತ್ತೇನೆ ಎನ್ನುತ್ತಾರೆ.

ಈಗ ಅವರ ಕ್ಯಾಲೆಂಡರ್‍ನಲ್ಲಿ ಸಾಕಷ್ಟು ಸುಧಾರಣೆಯನ್ನೂ ಮಾಡಿರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಕರಪತ್ರದಷ್ಟು ಅಗಲದ ಹಾಳೆಯಲ್ಲಿ ವರ್ಷದ ದಿನದರ್ಶಿಕೆಯನ್ನು ಸೆರೆ ಹಿಡಿಯುವ ಮ.ಯ.ದೊಡಮನಿ ಅವರು ಮೂಲತಃ ಅಧ್ಯಾಪಕರು. ಕೆಲವು ವರ್ಷ ಪಿಯು ಮಂಡಳಿಯ ಉಪನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಈಗ ಸದ್ಯ ರಾಜ್ಯ ಭಾಷಾ ಆಯೋಗದ ಸದಸ್ಯರಾಗಿದ್ದಾರೆ. ಅವರು ಸಿದ್ಧಪಡಿಸಿದ ಸಂಯುಕ್ತ ದಿನದರ್ಶಿಯಲ್ಲಿ ವರ್ಷದ 12 ತಿಂಗಳ ತಾರೀಖನ್ನು ನಿಖರವಾಗಿ ತಿಳಿಯಬಹುದು. ಇದರಿಂದ ಹಾಳೆ ಹಾಗೂ ಸಮಯದ ಜತೆಗೆ ಹಣದ ಉಳಿತಾಯವೂ ಆಗುತ್ತದೆ.

ಸಾಕಷ್ಟು ಕೌಶಲ್ಯದಿಂದ ರೂಪಿಸಿರುವ ಈ ದಿನದರ್ಶಿಕೆ ಸರಳತೆ ಹಾಗೂ ಸಂಕ್ಷಿಪ್ತತೆಯ ಕಾರಣಕ್ಕೆ ತುಂಬಾ ಅನುಕೂಲ ವಾಗುತ್ತದೆ. ಸರಳ ಕ್ಯಾಲೆಂಡರ್ ಬೇಕು ಎಂದು ಕೇಳಿದವರಿಗೆ ಅವರು ಉಚಿತವಾಗಿ ನೀಡುತ್ತಾರೆ. ಕನ್ನಡ ಅಂಕಿಯಲ್ಲಿ ತಯಾರಿಸುವ ಈ ಕ್ಯಾಲೆಂಡರ್ ಪ್ರತಿ ವರ್ಷ ರಾಜ್ಯ ಸರ್ಕಾರದ ಡೇರಿಯಲ್ಲಿಯೂ ಅಚ್ಚಾಗುತ್ತಾ ಬಂದಿದೆ.

ಅಂಕಿ ಆಟದ ವಿನೋದ: ದೊಡಮನಿಯವರು 2018ನೆ ಸಾಲಿನ ಕ್ಯಾಲೆಂಡರ್‍ನಲ್ಲಿ ಅಂಕಿ ಆಟಕ್ಕೂ ಅವಕಾಶ ಕೊಟ್ಟಿದ್ದಾರೆ. ಅದಕ್ಕಾಗಿ ಅವರು ಪ್ರತ್ಯೇಕ ಎರಡು ಕೋಷ್ಠಕಗಳನ್ನು ರಚಿಸಿದ್ದಾರೆ.  ವರ್ಷದ ಯಾವ ತಾರೀಖು ಯಾವ ದಿನ ಬರುತ್ತದೆ ಎಂಬುದನ್ನು ಥಟ್ ಅಂತ ಹೇಳಲು ಅನುಕೂಲವಾಗುವಂತೆ ತಂತ್ರವನ್ನು ರೂಪಿಸಿದ್ದಾರೆ. ಇದು ಅಂಕಿ ಆಟದ ವಿನೋದವನ್ನು ಉಂಟು ಮಾಡುತ್ತದೆ. ಅವರು ತಿಂಗಳು ಹಾಗೂ ದಿನಗಳಿಗೆ ಪ್ರತ್ಯೇಕವಾಗಿ ಒಂದು ಸಂಖ್ಯೆಯನ್ನು ನಿಗದಿಪಡಿಸಿದ್ದಾರೆ. ಅದು ಕೂಡ ಒಂದು ವಾರದಲ್ಲಿ ಬರುವ ಏಳು ದಿನಗಳಿಗೆ ಹೊಂದಿಕೆಯಾಗುವಂತಿದೆ. ಆದ್ದರಿಂದ ಸುಲಭವಾಗಿ ನೆನಪಿಡಬಹುದು. ಉದಾಹರಣೆಗೆ ಆಗಸ್ಟ್ ಹದಿನೈದು ಯಾವ ದಿನ ಬರಬಹುದು ಎಂದರೆ, ಭಾನುವಾರ ಬರುತ್ತದೆ ಎಂದು ನಿಖರವಾಗಿ ಹೇಳಬಹುದು. ಹೀಗೆ ಹೇಳಬೇಕೆಂದರೆ ಆಗಸ್ಟ್ 15ಕ್ಕೆ ಕೋಷ್ಠಕದಲ್ಲಿ ಸಂಕೇತಿಸಿರುವಂತೆ ಆಗಸ್ಟ್ ತಿಂಗಳ ಸಂಖ್ಯೆ 2ನ್ನು ಕೂಡಿಸಬೇಕು. ಆಗ ಅದರ ಮೊತ್ತ 17 ಆಗುತ್ತದೆ. ನಂತರ ಒಂದು ವಾರಕ್ಕೆ ಏಳು ದಿನಗಳು. ಆದ್ದರಿಂದ ಆ ಸಂಖ್ಯೆಯನ್ನು ಏಳರಿಂದ ಭಾಗಿಸಬೇಕು.  ಉಳಿಯುವ ಶೇಷವನ್ನು ದಿನದ ಕೋಷ್ಠಕದಲ್ಲಿ ಸಂಕೇತಿಸಿರುವ ಸಂಖ್ಯೆಗೆ ತಾಳೆ ನೋಡಿದರೆ ಯಾವ ದಿನ ಎಂದು ನಿಖರವಾಗಿ ಗೊತ್ತಾಗುತ್ತದೆ. ಹೀಗೆ ಯಾವ ದಿನವನ್ನಾದರೂ ಕಂಡುಹಿಡಿಯಬಹುದು.

ಇದನ್ನು ಒಂದು ಹವ್ಯಾಸವಾಗಿ ಮಾಡಿಕೊಂಡು ಬಂದಿರುವ ದೊಡಮನಿ ಅವರು ಈ ಕಾರ್ಯದಿಂದ ಆತ್ಮತೃಪ್ತಿ ಪಡೆಯುತ್ತಿರುವುದಾಗಿ ಹೇಳುತ್ತಾರೆ. ಅವರ ದೂರವಾಣಿ ಸಂಪರ್ಕ: 080-23493474. ಮೊಬೈಲ್ ನಂ.9449518349.

ಸೂಚನೆ: 7ಕ್ಕಿಂತ ಕಡಿಮೆ ಸಂಖ್ಯೆಯಾಗಿದ್ದರೆ ಭಾಗಿಸದೆ ವಾರ ಪತ್ತೆ ಮಾಡಿ.

Facebook Comments

Sri Raghav

Admin