ಇದು ಮನಸುಗಳಿಗೆ ಸಂಬಂಧಿಸಿದ ವಿಷಯ ..!

ಈ ಸುದ್ದಿಯನ್ನು ಶೇರ್ ಮಾಡಿ

Mind-Life-Style--01

ಮನಸ್ಸು ಸದಾ ಕಾಲ ಕ್ರಿಯಾಶೀಲವಾಗಿರುತ್ತದೆ. ಚುರುಕು, ಸಶಕ್ತ, ದಿವಸದ 24 ಗಂಟೆಯೂ ಅದು ದಣಿವರಿಯದೆ ದುಡಿಯಬಲ್ಲದು. ಇಂತಹ ಮನಸ್ಸನ್ನು ಪವಿತ್ರ ಕಾರ್ಯದಲ್ಲಿ ತೊಡಗಿಸಿದರೆ ನಮ್ಮ ಜೀವನ ಸಾರ್ಥಕವಾದಂತೆ. ಪಾವನವಾದಂತೆ ಈ ಮನಸ್ಸು ಪ್ರಪಂಚದ ಸೂಕ್ಷ್ಮಾತಿ ಸೂಕ್ಷ್ಮ ಸಂಗತಿಗಳನ್ನು ಅರಿಯಬಲ್ಲದಾಗಿದೆ. ಬಯಸಿದ ಎನೆಲ್ಲವನ್ನು ಕರತಲಾಮಲಕ ಮಾಡಿಕೊಳ್ಳಬಲ್ಲದು. ಇಂತಹ ಮನಸ್ಸು ಮುಖ್ಯ ವಾಗಿ ಅರಿತಿರಬೇಕಾದ ಸಂಗತಿ ಗಳೆಂದರೆ ಇಂದ್ರಿಯಗಮ್ಯವಾದ ಲೌಕಿಕ ಹಾಗೂ ಅಲೌಕಿಕ ಜಗತ್ತು. ಒಂದು ಗೋಚರಿಸುವುದು, ಇನ್ನೊಂದು ಅಗೋಚರ, ಗೋಚರವಾದುದು ಸತ್ಯವಾದರೆ ಆಗೋಚರವಾದದು ಪರಮ ಸತ್ಯವಾದದು !!!


ಒಂದು ಹೂವನ್ನು ನೋಡಬಹುದು. ಆದರೆ, ಸುಗಂಧ ಕಣ್ಣಿಗೆ ಕಾಣಲಾರದು. ಅದನ್ನು ಅನುಭವಿಸಬೇಕಷ್ಟೆ. ಆದರೆ, ಎರಡು ಕೂಡಾ ಇಂದ್ರಿಯ ಗೋಚರವೇ ವಿಷಯ ವಸ್ತುಗಳಲ್ಲಿ ಸ್ಥೂಲ, ಸೂಕ್ಷ್ಮ ಎಂದು ಎರಡು ಪ್ರಕಾರ, ಭೂಮಿ ಸ್ಥೂಲ, ಗಾಳಿ ಸೂಕ್ಷ್ಮ, ಗುರುತ್ವಾಕರ್ಷಣ ಶಕ್ತಿ ಸೂಕ್ಷ್ಮಾತೀತ ಅದು ಕಣ್ಣಿಗೆ ಕಾಣಲಾರದು, ಕೈಗೆ ಸಿಗಲಾರದು. ಕಿವಿಗೆ ಕೇಳಿಸಲಾರದು. ಅದು ಅನುಭವಕ್ಕೆ ಬರುವುದು. ಇದು ತೀರಾ ಸೂಕ್ಷ್ಮಾತಿ ಸೂಕ್ಷ್ಮ.ಅತಿ ಸೂಕ್ಷ್ಮವಾದ ಸಂಗತಿಗಳಿಂದ ತುಂಬಿದ ಜೀವನದ ಎಲ್ಲಾ ಆಗು ಹೋಗುಗಳಿಗೂ ಸಹ ಮನಸ್ಸೆ ಮೂಲ ಮಂತ್ರ. ಮನಸ್ಸಿನ ಶುದ್ಧೀಕರಣ ಮತ್ತು ಏಕಾಗ್ರತೆಗೆ ಮಹತ್ವ ನೀಡಿದ ಶರಣರು, ಸಂತರು ಅದರಿಂದ ಮಹಾನ್ ಸಾಧನೆಗಳನ್ನು ಮಾಡಿದರು.


ಅವರ ಮಾತುಗಳು ಮತ್ತು ಅನುಭವಗಳು ನಮಗೆ ಈಗಲೂ ಆದರ್ಶಪ್ರಾಯ. ಮನಸ್ಸೆಂಬ ಮರ್ಕಟವನ್ನು ನಿಯಂತ್ರಿಸುವುದರಲ್ಲೇ ಜೀವನದ ಶಾಂತಿ ಅಡಿಗದೆ. ಶಾಂತಿ, ಸಮಾಧಾನ ಬೇಕಾದಲ್ಲಿ ಮನಸ್ಸನ್ನು ನಿಯಂತ್ರಿಸಿ, ದೇಹದ ಚಲನೆಗೆ ಇತಿಮಿತಿಗಳು ಎಂಬುದಿಲ್ಲ. ಮನಸ್ಸು ವರ್ತ ಮಾನ ಕಾಲದಲ್ಲಿ ಮಾತ್ರ ಸುಳಿದಾಡುವುದಿಲ್ಲ. ಅದು ಭೂತಕಾಲಕ್ಕೂ ಮತ್ತು ಭವಿಷ್ಯತ್ ಕಾಲಕ್ಕೂ ಚಲಿಸಬಲ್ಲದು. ಅದು ಮನಸ್ಸಿನಾಚೆಯ ಅನಂತತೆಯಲ್ಲೂ ಸಾಗಬಹುದಾಗಿದೆ. ಅಂತಹ ಮನಸ್ಸಿನ ಶುದ್ಧೀಕರಣ ಮತ್ತು ಏಕಾಗ್ರತೆಯನ್ನು ಶಾಂತ ಚಿತ್ತರಾಗಿ ಸಾಧಿಸಬೇಕು.

ಜಗತ್ತನ್ನು ನೋಡುವ ನಮ್ಮ ದೃಷ್ಟಿಯೂ ಬದಲಾಗಬೇಕು. ಜಗತ್ತನ್ನು ಸುಧಾರಣೆಗೊಳಿಸುವ ಬದಲು ಮೊದಲು ನಮ್ಮನ್ನು ನಾವೇ ಬದಲಾಯಿಸಿ ಸುಧಾರಿಸಿಕೊಳ್ಳುವುದು ಉತ್ತಮ. ಆಗ ಜಗತ್ತು ಕೂಡಾ ಶಾಂತಿ, ಸಮಾಧಾನದಿಂದ ಸುಂದರವಾಗಿ ಕಂಡು ಬರುವುದು….. “ಸರ್ವೇ ಜನಃ ಸುಖಿನೋ ಭವಂತು ಸರ್ವಂ ಸನ್ಮಂಗಳಾನಿ ಭವಂತು”

– ಶಾಂತಿ ಪ್ರವೀಣ್ ರಾವ್, ಸಾಗರ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin