ಇದು ಸಿನಿಮಾ ಕಥೆಯನ್ನೇ ಮೀರಿಸುವ ‘ಗಿರೀಶ್-ಗಾನವಿ’ ದುರಂತ ಪ್ರೇಮಕತೆ

ಈ ಸುದ್ದಿಯನ್ನು ಶೇರ್ ಮಾಡಿ

Love-Story--01

ಗೌರಿಬಿದನೂರು, ಡಿ. 13- ಆಕೆ ಇನ್ನೂ ಹೈಸ್ಕೂಲ್ ವಿದ್ಯಾರ್ಥಿನಿ. ಆತ ಪಿಯುಸಿ ಓದುತ್ತಿದ್ದ ಚಿಗುರು ಮೀಸೆ ಯುವಕ..! ಇಬ್ಬರಿಗೂ ಬಸ್ಸಿನಲ್ಲೇ ಲವ್ವಾಯ್ತು. ಆದ್ರೆ ಈ ಯುವ ಪ್ರೇಮಿಗಳಿಗೆ ಮನೆಯವರೇ ಖಳನಾಯಕರಾದ ಪರಿಣಾಮ ಎರಡು ಜೀವಗಳು ಒಂದೇ ಹಗ್ಗಕ್ಕೆ ಜೋಡಿಯಾಗಿ ಕೊರಳೊಡ್ಡಿ ಜೀವ ಕಳೆದುಕೊಂಡಿದ್ದಾರೆ.ಇದು ಯಾವುದೋ ಲವ್ ಟ್ರಾಜಿಡಿ ಸಿನಿಮಾದ ಸ್ಟೋರಿ ಅಲ್ಲ… ಗೌರಿಬಿದನೂರಿನ ನಗರಗೆರೆ ಹೋಬಳಿಯ ಪೆದ್ದನಹಳ್ಳಿ ಗ್ರಾಮದಲ್ಲಿ ನಡೆದ ನೈಜ ಘಟನೆ. ಮನೆಯವರ ವಿರೋಧದಿಂದ ಮನನೊಂದ ಯುವ ಪ್ರೇಮಿಗಳಾದ ಗಿರೀಶ್ (18) ಮತ್ತು ಗಾನವಿ (16) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಸಾಯುವ ಮುನ್ನ ನಮ್ಮಿಬ್ಬರನ್ನು ಒಂದೇ ಗುಂಡಿಯಲ್ಲಿ ಮಣ್ಣು ಮಾಡಿ ಎಂಬ ಈ ಯುವ ಜೋಡಿಗಳ ಕೊನೆ ಆಸೆಯನ್ನು ಪೋಷಕರು ಈಡೇರಿಸದೆ ನಾವಿನ್ನು ಬದಲಾಗಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಪ್ರೇಮಪ್ರಯಣ ಆರಂಭ:

ಪೆದ್ದನಹಳ್ಳಿ ಗ್ರಾಮದ ಸುಬ್ರಹ್ಮಣಿ ಎಂಬುವವರ ಪುತ್ರಿ ಗಾನವಿ ಪಟ್ಟಣದ ಎಸ್‍ಎಸ್‍ಇ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಚಿಕ್ಕಬಳ್ಳಾಪುರ ತಾಲ್ಲೂಕಿನ ಜಡೇಲತಿಮ್ಮನಹಳ್ಳಿ ವಾಸಿ ಗಂಗಾಧರಪ್ಪ ಎಂಬುವವರ ಮಗ ಗಿರೀಶ್ ನ್ಯಾಷನಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು , ಪೆದ್ದನಹಳ್ಳಿಯಲ್ಲಿರುವ ತಮ್ಮ ತಾತನ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತಿದ್ದ. ಗಾನವಿ ಮತ್ತು ಗಿರೀಶ್ ಪ್ರತಿನಿತ್ಯ ಒಂದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ಸಿನಲ್ಲಿ ಆರಂಭವಾದ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ನಮ್ಮದು ಪ್ರೀತಿಸುವ ವಯಸ್ಸಲ್ಲ ಎಂಬ ಅರಿವಿದ್ದರೂ ಕುರುಡು ಪ್ರೇಮಕ್ಕೆ ಇಬ್ಬರು ಸಿಲುಕಿಕೊಂಡಿದ್ದರು.

ನೋಡುಗರ ಕಣ್ಣುಕುಕ್ಕುವಂತಿದ್ದ ಈ ಯುವ ಪ್ರೇಮಿಗಳ ಲವ್ ವಿಚಾರ ಗಾನವಿ ಶಾಲೆಯ ವಿದ್ಯಾರ್ಥಿಗಳೂ ಮತ್ತು ಗಿರೀಶ್‍ನ ಕಾಲೇಜಿನ ಸಹಪಾಠಿಗಳೆಲ್ಲರಿಗೂ ತಿಳಿದಿತ್ತು. ಎಲ್ಲರೂ ಈ ಯುವ ಪ್ರೇಮಿಗಳು ತಮ್ಮ ವಿದ್ಯಾಭ್ಯಾಸ ಮುಗಿಸಿ ಮದುವೆ ಮಾಡಿಕೊಂಡು ಸುಖವಾಗಿರಲಿ ಎಂದು ಹಾರೈಸಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಈ ಪ್ರೇಮಿಗಳ ವಿಚಾರ ಇಬ್ಬರು ಮನೆಯ ಹಿರಿಯರಿಗೂ ತಿಳಿದು ರಾದ್ದಾಂತವಾಯಿತು. ಯಾವುದೇ ಕಾರಣಕ್ಕೂ ನೀವಿಬ್ಬರೂ ಪ್ರೀತಿಸಬಾರದೆಂದು ಎಚ್ಚರಿಕೆ ಕೂಡ ನೀಡಿದ್ದರು. ಆದರೆ ಯಾವುದೇ ಬೆದರಿಕೆಗೂ ಅಂಜದ ಈ ಯುವ ಜೋಡಿ ಕಳೆದ ವಾರ ಗೂಡಿನಿಂದ ಹಾರಿಬಿಟ್ಟ ಹಕ್ಕಿಗಳಂತೆ ಮನೆ ಬಿಟ್ಟು ದೊಡ್ಡಬಳ್ಳಾಪುರಕ್ಕೆ ಪರಾರಿಯಾದವು.  ಅಲ್ಲಿಂದಲೇ ಮನೆಯವರಿಗೆ ದೂರವಾಣಿ ಕರೆ ಮಾಡಿದ ಗಿರೀಶ, ನಮ್ಮ ಪ್ರೀತಿಗೆ ಯಾರೂ ಅಡ್ಡಿ ಮಾಡಬೇಡಿ ನಾವಿಬ್ಬರೂ ಮದುವೆ ಆಗುತ್ತಿದ್ದೇವೆ ಎಂದು ಗಾನವಿ ತಂದೆ ಸುಬ್ರಮಣಿಗೆ ತಿಳಿಸಿದ್ದ.

ತಕ್ಷಣ ಎಚ್ಚೆತ್ತುಕೊಂಡ ಸುಬ್ರಮಣಿ ಯುವ ಪ್ರೇಮಿಗಳನ್ನು ಪತ್ತೆ ಹಚ್ಚಿ ನೀವಿಬ್ಬರೂ ಇನ್ನೂ ಅಪ್ರಾಪ್ತರು ನಿಮಗಿನ್ನೂ ಮದುವೆ ವಯಸ್ಸಾಗಿಲ್ಲ , ಕಾಲ ಬಂದಾಗ ನಾವೇ ಮುಂದೆ ನಿಂತು ಮದುವೆ ಮಾಡಿಸುತ್ತೇವೆ ಎಂದು ಮನವೊಲಿಸಿ ಮನೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಒಲ್ಲದ ಮನಸ್ಸಿನಿಂದಲೇ ಬೇರೆ ಬೇರೆ ಆದ ಯುವ ಪ್ರೇಮಿಗಳಿಗೆ ಅದ್ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ . ಏಕಾಏಕಿ ಗಾನವಿಯನ್ನು ಕರೆದುಕೊಂಡ ಹೋದ ಗಿರೀಶ ಗ್ರಾಮದ ಹೊರವಲಯದಲ್ಲಿರುವ ನಾರಾಯಣಪ್ಪ ಎಂಬುವವರಿಗೆ ಸೇರಿದ ಜಮೀನಿನಲ್ಲಿದ್ದ ಹುಣಸೆ ಮರಕ್ಕೆ ಇಬ್ಬರೂ ಒಂದೇ ಹಗ್ಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಯುವ ಮುನ್ನ ಡೆತ್‍ನೋಟ್ ಬರೆದಿಟ್ಟಿದ್ದ ಈ ಯುವ ಪ್ರೇಮಿಗಳು ನಮ್ಮಿಬ್ಬರನ್ನೂ ಒಂದೇ ಗುಂಡಿಯಲ್ಲಿ ಹಾಕಿ ಮಣ್ಣು ಮಾಡಿ ಪೋಸ್ಟ್ ಮಾರ್ಟಂ ಮಾಡಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಈ ಯಾವುದನ್ನೂ ಪರಿಗಣಿಸದ ಗ್ರಾಮಸ್ಥರು ಕಾನೂನಿನ ಪ್ರಕಾರ ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ಎರಡೂ ದೇಹಗಳನ್ನು ಪ್ರತ್ಯೇಕವಾಗಿ ಸಂಸ್ಕಾರ ಮಾಡಿಸಿದ್ದಾರೆ. ಪ್ರತಿನಿತ್ಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಈ ಯುವ ಪ್ರೇಮಿಗಳ ಪ್ರೇಮ ಯಶಸ್ವಿಯಾಗಲಿ ಎಂದು ಹಾರೈಸುತ್ತಿದ್ದ ನೂರಾರು ಮಂದಿ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ಈ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲವೆಂಬುದಕ್ಕೆ ಪ್ರೇಮಿಗಳ ಶವಸಂಸ್ಕಾರ ನಡೆಯುತ್ತಿದ್ದ ಶವಾಗಾರದ ಮುಂದೆ ಜಮಾಯಿಸಿದ್ದ ಜನಸಮೂಹವೇ ಸಾಕ್ಷಿಯಂತಿತ್ತು.

Facebook Comments

Sri Raghav

Admin