ಇದೆಲ್ಲಾ ಬೇಕಿತ್ತಾ ಮರಿಗೌಡ್ರೆ….?

ಈ ಸುದ್ದಿಯನ್ನು ಶೇರ್ ಮಾಡಿ

asdgSDGsgಬೆಂಗಳೂರು,ಆ.4-ಪ್ರತಿಷ್ಠೆ ದುರಾಹಂಕಾರಗಳನ್ನು ಬದಿಗಿಟ್ಟು ಕಾನೂನಿಗೆ ಗೌರವ ಕೊಟ್ಟು ಪೊಲೀಸರ ಮುಂದೆ ಶರಣಾಗಿದ್ದರೆ ಸಿಎಂ ಆಪ್ತ ಮರಿಗೌಡನಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರಿಗೆ ಧಮ್ಕಿ ಹಾಕಿ ತಲೆಮರೆಸಿಕೊಂಡು ಒಂದು ತಿಂಗಳಿನಿಂದ ನಿರೀಕ್ಷಣಾ ಜಾಮೀನು ಪಡೆಯಲು ನಡೆಸಿದ ಯತ್ನ ವಿಫಲವಾಗಿ ಕೊನೆಗೂ ಪೊಲೀಸರಿಗೆ ಮರಿಗೌಡ ಶರಣಾಗಬೇಕಾಯಿತು.  ನಾನು ಮುಖ್ಯಮಂತ್ರಿಗಳ ಆಪ್ತ ನನಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂಬ ಅಹಂ ತಲೆಗೆ ಹೊಕ್ಕ ಪರಿಣಾಮ, ವಕೀಲರು, ಸಲಹೆಗಾರರು ಸರಿಯಾದ ಸಲಹೆ ನೀಡದ ಪರಿಣಾಮ ಮಾನ ಮರ್ಯಾದೆಯನ್ನು ಹರಾಜು ಹಾಕಿಕೊಂಡು ಜೈಲಿಗೆ ಹೋಗಬೇಕಾಯಿತು.

ಜಿಲ್ಲಾಧಿಕಾರಿಗೆ ನಿಂದನೆ ಮಾಡಿ ಆ ಪ್ರಕರಣ ಸಂಬಂಧ ದೂರು ದಾಖಲಾದಾಗ ಅದರ ಗಂಭೀರತೆಯನ್ನು ಅರಿತು ಸ್ವಯಂಪ್ರೇರಣೆಯಿಂದಪೊಲೀಸರ ಮುಂದೆ ಶರಣಾಗಿದ್ದರೆ ಮರಿಗೌಡ ಅವರಿಗೆ ಈ ವೇಳೆಗಾಗಲೇ ಜಾಮೀನು ದೊರಕುತಿತ್ತೇನೋ.. ಈ ಪ್ರಕರಣವೇನು ಜಾಮೀನು ಸಿಗದಂತಹ ಪ್ರಕರಣವಲ್ಲ.  ಆದರೆ ಪ್ರತಿಷ್ಠೆಗೆ ಬಿದ್ದು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಮಾಡಿದ ಪ್ರಯತ್ನ ರಾಜ್ಯಾದ್ಯಂತ ಸುದ್ದಿಯಾಗಿ ಮುಖ್ಯಮಂತ್ರಿಗಳ ಗೌರವಕ್ಕೂ ಧಕ್ಕೆ ತಂದಿದ್ದಲ್ಲದೆ ಸರ್ಕಾರದ ಘನತೆಗೂ ಕುತ್ತು ತಂದಿತ್ತು. ಪೊಲೀಸರ ವೈಫಲವನ್ನು ಎತ್ತಿ ತೋರಿಸಿತ್ತು.

ಉಳ್ಳವರನ್ನು ಏನೂ ಮಾಡಲು ಸಾಧ್ಯವಿಲ್ಲವೇನೋ ಎಂದು ಸಾರ್ವಜನಿಕರು ಮಾತನಾಡಿಕೊಳ್ಳ ತೊಡಗಿದರು. ಆದರೆ ಘನವೆತ್ತ ನ್ಯಾಯಾಲಯ ಇದಕ್ಕೆ ಅವಕಾಶ ನೀಡಲಿಲ್ಲ. ನಮ್ಮ ಸಂವಿಧಾನದಲ್ಲಿ ಎಲ್ಲರೂ ನ್ಯಾಯಾಲಯಕ್ಕೆ ತಲೆ ಬಾಗಲೇಬೇಕು.   ಹೌದು. ತನ್ನನ್ನು ತಾನು ರಕ್ಷಿಸಿಕೊಳ್ಳಲು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು, ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸುವುದು ತಪ್ಪಲ್ಲ.  ಅಂಥ ಪ್ರಯತ್ನವನ್ನು ಮರಿಗೌಡರೂ ಕೂಡ ಮಾಡಿದ್ದಾರೆ. ಆದರೆ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗೆ ಇರಿಸುಮುರಿಸು ಉಂಟು ಮಾಡಿದಂತಹ ಇಂಥ ಪ್ರಕರಣದಲ್ಲಿ ಅವರು ಮುಖ್ಯಮಂತ್ರಿಗಳ ಆಪ್ತರಾಗಿದ್ದರೆ ಸ್ವತಃ ತಾವೇ ಬಂದು ಶರಣಾಗಿ ಮುಜುಗರವನ್ನು ತಪ್ಪಿಸಬಹುದಿತ್ತು.

ಮರಿಗೌಡ ಈ ರೀತಿ ವರ್ತಿಸಬಾರದಿತ್ತೆಂದು ಮುಖ್ಯಮಂತ್ರಿಗಳ ಕೆಲ ಆಪ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಯಾದ ಶಿಖಾ ಅವರು ತಮ್ಮ ನಿಲುವಿನಿಂದ ಹಿಂದೆ ಸರಿಯದೆ ಉತ್ತಮ ಕೆಲಸವನ್ನು ಮಾಡಿದ್ದಾರೆ. ತಮಗೆ ನಿಂದನೆ ಮಾಡಿದವರು ಯಾರೇ  ಆಗಲಿ, ಎಷ್ಟೇ ಪ್ರಭಾವಗಳಾಗಲಿ ಅವರ ವಿರುದ್ಧ ದೂರು ನೀಡಿದ್ದಾರೆ.  ಸಂಧಾನಕ್ಕಾಗಿ ಮಾಡಿದ ಪ್ರಯತ್ನಗಳಿಗೆ ಜಗ್ಗಿಲ್ಲ. ಅಕಸ್ಮಾತ್ ಇವರೇನಾದರೂ ಸಂಧಾನಕ್ಕೆ ಒಪ್ಪಿದ್ದರೆ ತಪ್ಪು ಸಂದೇಶ ರವಾನೆಯಾಗುತ್ತಿತ್ತು. ಮರಿಗೌಡರಂತಹ ಅನೇಕರು ಮತ್ತೆ ತಲೆ ಎತ್ತುತ್ತಿದ್ದರು. ಇಂಥವರಿಗೆ ಬುದ್ದಿ ಬರಬೇಕಾದರೆ ಈ ರೀತಿಯ ಘಟನೆಗಳು ನಡೆಯಬೇಕು.

ಸೆಷನ್ ಕೋರ್ಟ್, ಹೈಕೋರ್ಟ್‍ನಲ್ಲಿ ಜಾಮೀನು ಸಿಗದೆ ಕೊನೆಗೂ ಪೊಲೀಸರಿಗೆ ಶರಣಾಗಿರುವ ಮರಿಗೌಡ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.  ಇಂದಲ್ಲ ನಾಳೆ ಜಾಮೀನಿನ ಮೇಲೆ ಹೊರಬಂದು ವಿಚಾರಣೆ ಎದುರಿಸುತ್ತಾರೆ. ಆದರೆ ಮುಜುಗರ ಉಂಟು ಮಾಡುವ ಸನ್ನಿವೇಶಗಳನ್ನು ಮಾಡಬಾರದು.   ಮೊದಲೇ ಯೋಚಿಸಿ ಶರಣಾಗಿದ್ದರೆ ಮಾಧ್ಯಮಗಳು ಇಷ್ಟು ಪ್ರಮಾಣದಲ್ಲಿ ಸುದ್ದಿ ಮಾಡುತ್ತಿರಲಿಲ್ಲ. ಮುಖ್ಯಮಂತ್ರಿಗಳ ಗೌರವವೂ ಉಳಿಯುತಿತ್ತು. ನ್ಯಾಯಾಲಯಗಳ ಸಮಯವೂ ಉಳಿಯುತಿತ್ತು. ಪ್ರಭಾವಿಗಳು ಪ್ರತಿಷ್ಠೆಯನ್ನು ಬದಿಗಿಟ್ಟು ಈ ನಿಟ್ಟಿನಲ್ಲಿ ಯೋಚಿಸುವುದು ಉತ್ತಮ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin