ಇದೆ ಮೊದಲ ಬಾರಿಗೆ ತಮ್ಮ ಶಾಲೆ ಬಿಟ್ಟು ಬೇರೆ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು

ಈ ಸುದ್ದಿಯನ್ನು ಶೇರ್ ಮಾಡಿ

SSLC-Exam

ಬೆಂಗಳೂರು,ಮಾ.23- ಇದೇ 30ರಿಂದ ಏಪ್ರಿಲ್ 12ರವರೆಗೆ ರಾಜ್ಯಾದ್ಯಂತ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆಗೆ ಮೊಟ್ಟ ಮೊದಲ ಬಾರಿಗೆ ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲೆಗಳಲ್ಲಿ ಪರೀಕ್ಷೆ ಬರೆಯದೆ ಬೇರೊಂದು ಶಾಲೆಗೆ ಹಾಜರಾಗಬೇಕು.   ಹೆಚ್ಚುತ್ತಿರುವ ನಕಲು ಪ್ರಮಾಣ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಡಳಿ ಇದೇ ಮೊದಲ ಬಾರಿಗೆ ಇಂಥ ದಿಟ್ಟ ನಿರ್ಧಾರ ಕೈಗೊಂಡಿದೆ.   ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಸೂಚನೆಯಂತೆ ವಿದ್ಯಾರ್ಥಿಗಳಿಗೆ ತಮ್ಮ ಶಾಲೆಗಳನ್ನೇ ಪರೀಕ್ಷಾ ಕೇಂದ್ರಗಳನ್ನಾಗಿ ಮಾಡದೆ ಬೇರೊಂದು ಕೇಂದ್ರಗಳಿಗೆ ಕಳುಹಿಸಬೇಕೆಂದು ಸೂಚಿಸಲಾಗಿದೆ.

6 ಕಿ.ಮೀ ವ್ಯಾಪ್ತಿಯೊಳಗೆ ಪರೀಕ್ಷಾ ಕೇಂದ್ರವಿರಬೇಕು, ವಿದ್ಯಾರ್ಥಿಗಳ ಪ್ರಯಾಣಕ್ಕೆ ತೊಂದರೆಯಾಗಬಾರದು ಹಾಗೂ ಈಗಾಗಲೇ ಸೂಚಿಸಿರುವಂತೆ ಉಚಿತವಾಗಿ ಬಸ್‍ನಲ್ಲಿ ಕರೆದೊಯ್ಯಬೇಕೆಂದು ನಿರ್ದೇಶಿಸಲಾಗಿದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಂದ ಸಾರಿಗೆ ಇಲಾಖೆಯವರು ಹಣ ಪಡೆಯಬಾರದು,  ಪರೀಕ್ಷೆ ಅವಧಿ ಮುಗಿಯುವವರೆಗೂ ಕರೆದೊಯ್ಯಬೇಕು. ವಿದ್ಯಾರ್ಥಿಗಳು ಪ್ರವೇಶ ಪತ್ರ ಹಾಗೂ ಬಸ್‍ಪಾಸ್ ಹಾಜರುಪಡಿಸಬೇಕೆಂದು ಸೂಚಿಸಲಾಗಿದೆ.
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 8,76,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯಾದ್ಯಂತ ಒಟ್ಟು 2770 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ನಗರ ಪ್ರದೇಶದಲ್ಲಿ 6 ಕಿ.ಮೀ ವ್ಯಾಪ್ತಿಯೊಳಗೆ ಪರೀಕ್ಷಾ ಕೇಂದ್ರಗಳಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ 10 ಕಿ.ಮೀ ವ್ಯಾಪ್ತಿಯೊಳಗೆ ಪರೀಕ್ಷಾ ಕೇಂದ್ರ ತೆರೆಯಲಾಗಿದೆ.

ಭಾರೀ ಭದ್ರತೆ:

ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷಾ ವೇಳೆ ಕೆಲ ಅವಾಂತರಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಈ ಬಾರಿ ಭಾರೀ ಬಿಗಿಭದ್ರತೆಯನ್ನು ಕೈಗೊಳ್ಳಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ.  ಜಿಲ್ಲಾ ಖಜಾನೆ ಕೇಂದ್ರಗಳಿಗೆ ಸಿಸಿ ಟಿವಿ ಅಳವಡಿಸಲಾಗಿದೆ.  ಜೊತೆಗೆ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ. ಪ್ರತಿದಿನ ಆಯಾ ಪತ್ರಿಕೆಗಳನ್ನು ಡಿಡಿಪಿಐ ಸಮ್ಮುಖದಲ್ಲಿ ಬಂಡಲ್‍ಗಳನ್ನು ಭದ್ರತೆ ನಡುವೆ ತೆಗೆದುಕೊಂಡು ಹೋಗಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.   ಒಟ್ಟಿನಲ್ಲಿ ವಿದ್ಯಾರ್ಥಿ ಜೀವನದ ಮೊದಲ ಘಟ್ಟ ಎನಿಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಇಲಾಖೆ ಈ ಬಾರಿ ಹಿಂದೆಂದಿಗಿಂತಲೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin