ಇದ್ದಕ್ಕಿದ್ದಂತೆ ಕನ್ನಡಿಗರನ್ನು ತೆರವುಗೊಳಿಸಿ ಮತ್ತೊಮ್ಮೆ ಗೋವಾ ಸರ್ಕಾರ ದಬ್ಬಾಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಪಣಜಿ, ಸೆ.26-ಸದಾ ಕನ್ನಡಿಗರ ವಿರುದ್ಧ ಕತ್ತಿ ಮಸೆಯುವ ಗೋವಾ ಸರ್ಕಾರ ಕಳೆದ ಹಲವು ವರ್ಷಗಳಿಂದ ಇಲ್ಲಿ ವಾಸವಿರುವ ಕನ್ನಡಿಗರನ್ನು ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ತೆರವುಗೊಳಿಸುವ ಮೂಲಕ ಮತ್ತೊಮ್ಮೆ ದಬ್ಬಾಳಿಕೆ ಪ್ರದರ್ಶಿಸಿದೆ. ಇಲ್ಲಿನ ಬೈನಾ ಬೀಚ್‍ನಲ್ಲಿ ಕಳೆದ 40 ವರ್ಷಗಳಿಂದ ವಾಸ ಮಾಡುತ್ತಿದ್ದ ಬಹುತೇಕ ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಮತ್ತಿತರ ಕನ್ನಡಿಗರನ್ನು ಬೆಳಗ್ಗೆ ಮನೆಯಿಂದ ಹೊರಹಾಕುವ ಮೂಲಕ ಗೋವಾ ಸರ್ಕಾರ ತನ್ನ ಅಟ್ಟಹಾಸದ ದುಷ್ಕøತ್ಯ ಮುಂದುವರೆಸಿದೆ.
ಬೈನಾ ಬೀಚ್‍ನಲ್ಲಿ ಮನೆ, ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದ ಕನ್ನಡಿಗರನ್ನು ಮುಂಜಾನೆ 5 ಗಂಟೆ ಸಮಯದಲ್ಲಿ ಬಲವಂತವಾಗಿ ಜಿಲ್ಲಾಡಳಿತ ಹೊರಹಾಕಿದೆ ಎಂದು ಸ್ಥಳೀಯರು ದೂರಿದ್ದಾರೆ. ಜಿಲ್ಲಾಧಿಕಾರಿ, ತಹಶೀಲ್ದಾರ್, ಮಹಾನಗರಪಾಲಿಕೆ ಸೇರಿದಂತೆ ಮತ್ತಿತರ ಸ್ಥಳೀಯ ಅಧಿಕಾರಿಗಳು ಇದ್ದಕ್ಕಿದ್ದಂತೆ ಜೆಸಿಬಿ ವಾಹನ ತಂದು ಮಕ್ಕಳು, ಮಹಿಳೆಯರು, ವಯೋವೃದ್ಧರು ಯಾರನ್ನೂ ಲೆಕ್ಕಿಸದೆ ಮನೆಗಳಲ್ಲಿದ್ದ ಸಾಮಾನುಗಳನ್ನು ಹೊರಹಾಕಿ, ಮನೆಗಳನ್ನು ಒಡೆದು ಹಾಕಿದ್ದಾರೆ. ನಮಗೆ ಯಾವುದೇ ಮುನ್ಸೂಚನೆ ಕೊಡದೆ ಸ್ಥಳೀಯ ಅಧಿಕಾರಿಗಳು ಮನೆಯನ್ನು ತೆರವುಗೊಳಿಸಿದ್ದಾರೆ. ಈಗ ನಾವು, ನಮ್ಮ ಕುಟುಂಬ, ಮಕ್ಕಳು, ವಯಸ್ಸಾದ ತಂದೆ ತಾಯಿ ಬೀದಿಪಾಲಾಗಿದ್ದೇವೆ. ನಮಗೆ ಈಗ ಯಾವುದೇ ಆಶ್ರಯ ಇಲ್ಲ ಎಂದು ಸೂರು ಕಳೆದುಕೊಂಡ ನೂರಾರು ಮಂದಿ ಕನ್ನಡಿಗರು ಕಣ್ಣೀರು ಹಾಕಿದ್ದಾರೆ.

ಮೂಲಗಳ ಪ್ರಕಾರ 6 ಜೆಸಿಬಿ, 10 ಟಿಪ್ಪರ್‍ಗಳ ಮೂಲಕ ಮನೆಗಳನ್ನು ತೆರವುಗೊಳಿಸಲಾಗಿದೆ. ಮನೆಗಳನ್ನು ಒಡೆದು ಹಾಕಬೇಡಿ ಎಂದು ಕನ್ನಡಿಗರು ಪರಿಪರಿಯಾಗಿ ಬೇಡಿಕೊಂಡರೂ ಯಾವುದಕ್ಕೂ ಕರುಣೆ ತೋರದೆ ಮನೆಗಳನ್ನು ತೆರವುಗೊಳಿಸಿದ್ದಾರೆ. ಬೈನಾ ಬೀಚ್ ಸಮೀಪ ಉತ್ತರ ಕರ್ನಾಟಕದಿಂದ ಆಶ್ರಯಕ್ಕಾಗಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅನೇಕ ನಿರಾಶ್ರಿತ ಕನ್ನಡಿಗರಿಗೆ ಇದೀಗ ಇಲ್ಲಿನ ಬಸವಣ್ಣ ದೇವಸ್ಥಾನವೇ ಆಶ್ರಯತಾಣವಾಗಿದೆ.
ಮನೆಗಳನ್ನು ಕಟ್ಟಿಕೊಂಡಿದ್ದ ಜಾಗದಲ್ಲಿ ಚರ್ಚ್ ನಿರ್ಮಿಸಲು ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಹೀಗಾಗಿ ಕನ್ನಡಿಗರೇ ಹೆಚ್ಚಾಗಿರುವ ಈ ಸ್ಥಳವನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿತ್ತು. ಆದರೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ತೆರವು ಮಾಡಿ ಉದ್ಧಟತನ ತೋರಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡಿಗರ ಆಕ್ರೋಶ: ಇನ್ನು ಬೀದಿಪಾಲಾಗಿರುವ ನೂರಾರು ಕುಟುಂಬಗಳು ಬೀದಿಗೆ ಬಿದ್ದಿದ್ದರೂ ಕರ್ನಾಟಕ ಸರ್ಕಾರ ಯಾವುದೇ ನೆರವು ನೀಡಿಲ್ಲ ಎಂದು ನೊಂದ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಸಚಿವರು, ಸ್ಥಳೀಯ ಶಾಸಕರು, ಅಧಿಕಾರಿಗಳ ಜೊತೆ ಕರ್ನಾಟಕ ಸರ್ಕಾರ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಗೊಳಿಸಬಹುದಿತ್ತು. ಕಡೇ ಪಕ್ಷ ಮನೆಗಳನ್ನು ತಾತ್ಕಾಲಿಕವಾಗಿಯಾದರೂ ತೆರವುಗೊಳಿಸದಂತೆ ಒತ್ತಡ ಹೇರಿದ್ದರೆ ಇಂತಹ ದುಸ್ಥಿತಿ ಎದುರಾಗುತ್ತಿರಲಿಲ್ಲ. ಮನೆ ಕಳೆದುಕೊಂಡಿರುವ ನಮಗೆ ಸ್ವಂತ ಊರಿನಲ್ಲಿ ಸೂರು ಇಲ್ಲ, ಜೀವನ ನಡೆಸಲು ಜಮೀನು ಇಲ್ಲ. ನಮ್ಮನ್ನು ದೇವರೇ ಕಾಪಾಡಬೇಕೆಂದು ಕಣ್ಣೀರಿಡುತ್ತಿದ್ದಾರೆ.  ಇನ್ನು ಇಷ್ಟೆಲ್ಲಾ ನಡೆದಿದ್ದರೂ ಕರ್ನಾಟಕ ಸರ್ಕಾರ ಮಾತ್ರ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸುವ ಈವರೆಗೆ ಸೌಜನ್ಯವನ್ನೂ ತೋರಿಲ್ಲ.

Facebook Comments

Sri Raghav

Admin