ಇನ್ನು ಮುಂದೆ ಎಲ್ಲಾ ವಾಣಿಜ್ಯ ವಾಹನಗಳಿಗೆ ಜಿಪಿಎಸ್ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

GPS-01

ಬೆಂಗಳೂರು, ಜ.23-ನ್ಯಾಯಾಲಯದ ಆದೇಶದಂತೆ ಇನ್ನು ಮುಂದೆ ಎಲ್ಲಾ ವಾಣಿಜ್ಯ ಬಳಕೆಯ ವಾಹನಗಳು ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿಕೊಳ್ಳಬೇಕು. ಈ ಸಂಬಂಧ ಕೇಂದ್ರ ಸರ್ಕಾರ ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಸಂಚರಿಸುವ ವಾಣಿಜ್ಯ ಬಳಕೆಯ ವಾಹನಗಳು ಜಿಪಿಎಸ್‍ನ್ನು ಚಾಚೂ ತಪ್ಪದೆ ಅಳವಡಿಸಬೇಕಾಗುತ್ತದೆ. ಈಗಾಗಲೇ ಕೇಂದ್ರ ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಎಲ್ಲಾ ರಾಜ್ಯಗಳ ಸಾರಿಗೆ ಸಚಿವರ ಸಭೆ ನಡೆಸಿದ್ದಾರೆ. ಜಿಪಿಎಸ್ ಅಳವಡಿಸುವ ಸಂಬಂಧ ಸಾಧಕ-ಬಾಧಕಗಳ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ.

ವಾಣಿಜ್ಯ ಬಳಕೆಯ ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಸಿಕೊಳ್ಳಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. ಇದರಿಂತೆ ಲಾರಿ, ಕಾರು, ಬಸ್‍ಗಳು, ಟ್ಯಾಕ್ಸಿ, ಆಟೋ ರಿಕ್ಷಾ ಸೇರಿದಂತೆ ಸರಕು ಸಾಗಾಣಿಕೆಯ ವಾಹನಗಳು ಜಿಪಿಎಸ್ ಅಳವಡಿಸಿಕೊಳ್ಳಲೇಬೇಕು.  ಈಗಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೆಲ ವಾಹನಗಳಿಗೆ ಜಿಪಿಎಸ್ ಅಳವಡಿಸಿರುವುದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ, ಕಾನೂನು ಬಾಹಿರ ಚಟುವಟಿಕೆಗಳಿಗೂ ಕಡಿವಾಣ ಬಿದ್ದಿದೆ. ವಾಹನಗಳಿಗೆ ಜಿಪಿಎಸ್ ಅಳವಡಿಸುವ ಕಡಿಮೆ ವೆಚ್ಚದಲ್ಲಿ ಯಾರೊಬ್ಬರಿಗೂ ಹೊರೆಯಾಗದಂತೆ ಉತ್ಪಾದಿಸಲು ಖಾಸಗಿ ಕಂಪೆನಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಈ ಹಿಂದೆ ಕರ್ನಾಟಕದಲ್ಲಿ ವಾಹನಗಳಿಗೆ ಜಿಪಿಎಸ್ ಅಳವಡಿಸಲು ರಾಜ್ಯ ಸರ್ಕಾರ ಮುಂದಾದಾಗ ಭಾರೀ ವಿರೋಧ ವ್ಯಕ್ತವಾಗಿತ್ತು. ನಗರದಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿತ್ತು.  ಜಿಪಿಎಸ್ ಹಾಕುವುದರಿಂದ ನಿಗದಿತ ಸಮಯದಲ್ಲಿ ನಾವು ಸ್ಥಳ ತಲುಪಲು ಆಗುವುದಿಲ್ಲ. ಹೆದ್ದಾರಿಗಳಲ್ಲಿ ವೇಗವಾಗಿ ಚಲಿಸಲು ಸಾಧ್ಯವಿಲ್ಲ ಎಂಬ ವಾದವನ್ನು ಮುಂದಿಟ್ಟುಕೊಂಡು ಲಾರಿ ಮಾಲೀಕರ ಸಂಘ ಪ್ರತಿಭಟನೆಗೆ ಮುಂದಾಗಿತ್ತು. ಇದರಿಂದಾಗಿ ಇದು ತಾತ್ಕಾಲಿಕವಾಗಿ ನೆನೆಗುದಿಗೆ ಬಿದ್ದಿತ್ತು. ಒಂದು ವೇಲೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕೆಂಬ ನಿಯಮ ಜಾರಿಯಾದರೆ ಬೆಂಗಳೂರಿನಲ್ಲಿ 6,400 ಬಿಎಂಟಿಸಿ ಬಸ್, 2000 ಕೆಎಸ್‍ಆರ್‍ಟಿಸಿ ಬಸ್‍ಗಳು ಸೇರಿದಂತೆ ಒಟ್ಟು 1.6 ಕೋಟಿ
ವಾಹನಗಳಿಗೆ ಅನ್ವಯವಾಗಲಿದೆ.

ಅನುಕೂಲವೇನು?

ಜಿಪಿಎಸ್ ಅಳವಡಿಸಿಕೊಳ್ಳುವುದರಿಂದ ವಾಹನ ಚಾಲಕರಿಗೆ ಅನುಕೂಲತೆಗಳು ಹೆಚ್ಚಾಗಿವೆ. ಚಾಲಕರು ತಮ್ಮ ವೇಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದಾಗಿದೆ. ವೇಗದ ಮಿತಿ ಅಳವಡಿಸುವುದರಿಂದ ಏನೇ ಹರಸಾಹಸ ಪಟ್ಟರೂ ವೇಗ ಹೆಚ್ಚಿಸಲು ಸಾಧ್ಯವಿಲ್ಲ. ಅಲ್ಲದೆ, ಇದರಿಂದ ವಾಹನಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಬಹುದು. ಮಾಲ್‍ಗಳನ್ನು ಕದಿಯುವುದು, ಕಳ್ಳಸಾಗಣೆ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin