ಇನ್ನು ಮುಂದೆ ಎಲ್ಲೆಂದರಲ್ಲಿ ಸೆಲ್ಫೀ ತೆಗೆದೀರಿ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

Selfie--01

ಬೆಂಗಳೂರು, ಸೆ.26- ಇನ್ನು ಮುಂದೆ ಎಲ್ಲೆಂದರಲ್ಲಿ ಇಲ್ಲವೆ ಅಪಘಾತ ವಲಯಗಳಲ್ಲಿ ಸೆಲ್ಫೀ ತೆಗೆದೀರಿ ಜೋಕೆ..! ಏಕೆಂದರೆ, ಪ್ರವಾಸೋದ್ಯಮ ಇಲಾಖೆ ಮಾರ್ಗಸೂಚಿಯೊಂದನ್ನು ಜಾರಿ ಮಾಡಲು ಮುಂದಾಗಿದೆ. ಈ ಪ್ರಕಾರ, ಅತಿ ಅಪಘಾತ ವಲಯ ಹಾಗೂ ನಿರ್ಬಂಧಿತ ಪ್ರದೇಶಗಳಲ್ಲಿ ಇನ್ನು ಮುಂದೆ ಸೆಲ್ಫೀ ತೆಗೆಯುವುದು ಶಿಕ್ಷಾರ್ಹ ಅಪರಾಧ.  ರಾಜ್ಯದಲ್ಲಿ ಹೆಚ್ಚುತ್ತಿರುವ ಸೆಲ್ಫೀ ಹುಚ್ಚಾಟಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಪ್ರವಾಸೋದ್ಯಮ ಇಲಾಖೆ ಕೆಲವು ಕಡೆ ಅಂದರೆ ಅತೀ ಅಪಾಯದ ಸ್ಥಳಗಳಲ್ಲಿ ಸೆಲ್ಫೀ ತೆಗೆಯದಂತೆ ನಿರ್ಬಂಧ ವಿಧಿಸಿದೆ.

Selfie--02

ನಿನ್ನೆಯಷ್ಟೆ ಕನಕಪುರ ಸಮೀಪ ವಿದ್ಯಾರ್ಥಿಯೊಬ್ಬ ಸೆಲ್ಫೀ ಹುಚ್ಚಿಗಾಗಿ ನೀರಿಗೆ ಬಿದ್ದು ಪ್ರಾಣವನ್ನೇ ಕಳೆದುಕೊಂಡಿದ್ದ. ಜತೆಗೆ ಇತ್ತೀಚೆಗೆ ರಾಜ್ಯದಲ್ಲಿ ಸೆಲ್ಫೀ ಹುಚ್ಚಾಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಕೆಲವೇ ಕೆಲವು ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ಮೈಸೂರು, ಕೊಡಗು, ಬೆಂಗಳೂರು, ಹಂಪಿ, ಜೋಗ್‍ಫಾಲ್ಸ್, ಬಾದಾಮಿ, ಐಹೊಳೆ, ಪಟ್ಟದ ಕಲ್ಲು, ನಂದಿಬೆಟ್ಟ, ಕರಾವಳಿ ತೀರ ಪ್ರದೇಶ, ಶಿವಮೊಗ್ಗ, ಬೆಳಗಾವಿ ಮತ್ತಿತರ ಕಡೆ ದಿನಂಪ್ರತಿ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಜಲಪಾತ, ನದಿ, ದೇವಸ್ಥಾನ, ಪರಿಸರ ವೀಕ್ಷಣೆ ಸೇರಿದಂತೆ ಹತ್ತು-ಹಲವು ಸ್ಥಳಗಳಿಗೆ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಆದರೆ, ಇತ್ತೀಚೆಗೆ ಅತ್ಯಾಧುನಿಕ ಮೊಬೈಲ್‍ಗಳು ಬಂದಿರುವ ಪರಿಣಾಮ ಸೆಲ್ಫೀ ತೆಗೆದುಕೊಳ್ಳುವುದು ಹೆಚ್ಚಾಗಿದೆ.

Selfie--03

ಕೆಲವು ಅಪಘಾತ ಸ್ಥಳಗಳಲ್ಲಿ ಸೆಲ್ಫೀ ತೆಗೆದುಕೊಳ್ಳದಂತೆ ಸೂಚಿಸಿದರೂ ಹುಚ್ಚಾಟಕ್ಕೆ ಬೀಳುವ ಕೆಲವರು ನೀರಿನಲ್ಲಿ ಈಜಾಟಕ್ಕೆ ಬಿದ್ದ ವೇಳೆ, ವನ್ಯಜೀವಿಗಳ ಸಮೀಪ, ನಂದಿಬೆಟ್ಟ, ಜೋಗ್‍ಫಾಲ್ಸ್, ಆಗುಂಬೆ, ಯಾಣ, ಗಗನಚುಕ್ಕಿ, ಭರಚುಕ್ಕಿ ಸೇರಿದಂತೆ ಅನೇಕ ಕಡೆ ಅಪಘಾತ ಸ್ಥಳಗಳಲ್ಲೇ ಸೆಲ್ಫೀಗೆ ಜೋತುಬೀಳುತ್ತಾರೆ.

ಇನ್ನು ಮುಂದೆ ಅಪಾಯದ ಸ್ಥಳಗಳಲ್ಲಿ ಸೆಲ್ಫೀ ತೆಗೆದುಕೊಳ್ಳದಂತೆ ಕಡಿವಾಣ ಹಾಕಲು ಅಲ್ಲಿನ ಅಧಿಕಾರಿಗಳಿಗೆ ಪ್ರವಾಸೋದ್ಯಮ ಇಲಾಖೆ ಸೂಚನೆ ಕೊಟ್ಟಿದೆ. ಈ ಸೂಚನೆ ಪ್ರಕಾರ, ಅತೀ ಅಪಾಯದ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಅನುಮತಿ ಪಡೆಯದೆ ಸೆಲ್ಫೀ ತೆಗೆಯುವಂತಿಲ್ಲ. ಪ್ರಾಣಿ-ಪಕ್ಷಿಗಳು, ನದಿ, ಜಲಪಾತ, ಸಮುದ್ರ ಸೇರಿದಂತೆ ಎಲ್ಲೇ ಸೆಲ್ಫೀ ತೆಗೆಯಬೇಕಾದರೆ ಅನುಮತಿ ಕಡ್ಡಾಯ.

Selfie--04

ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯದ ನಾನಾ ಕಡೆ ಸೆಲ್ಫೀಗಾಗಿ ಅನೇಕರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ನಿನ್ನೆಯಷ್ಟೆ ಕನಕಪುರ ಸಮೀಪ ವಿದ್ಯಾರ್ಥಿ ಸಾವನ್ನಪ್ಪಿದ್ದ. ಕೆಲ ತಿಂಗಳ ಹಿಂದೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಬಳಿ ವ್ಯಕ್ತಿಯೋರ್ವ ಸೆಲ್ಫೀ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ. ಮಂಡ್ಯ ಸಮೀಪದ ಹುಲಿವಾಣ ಸಮೀಪ ಸೆಲ್ಫೀ ತೆಗೆದುಕೊಳ್ಳಲು ಹೋಗಿ ಹರಿಯುವ ಚಾನಲ್‍ಗೆ ಬಿದ್ದು ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಕೊನೆಯುಸಿರೆಳೆದಿದ್ದರು. ಚಾರ್ಮುಡಿಘಾಟ್‍ನ ಕಂದಕದಲ್ಲೂ ಇಬ್ಬರು ಸಾವನ್ನಪ್ಪಿದರೆ ಮಂಗಳೂರಿನ ಆಳ್ವ ಕಾಲೇಜಿನ ವಿದ್ಯಾರ್ಥಿನಿಯು ಸಮುದ್ರದಲ್ಲಿ ಸೆಲ್ಫೀ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿದ್ದಳು. ಬಹುತೇಕ ಕಡೆ ಇಂತಹ ಅವಘಡಗಳು ಪದೇ ಪದೇ ಸಂಭವಿಸುತ್ತಲೇ ಇರುವುದರಿಂದ ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಕೆಲ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

Selfie--01

Facebook Comments

Sri Raghav

Admin