ಇನ್ನೂ ಮುಗಿಯದ ಗೃಹ ಸಚಿವರ ನೇಮಕದ ರಗಳೆ

ಈ ಸುದ್ದಿಯನ್ನು ಶೇರ್ ಮಾಡಿ

CM-Siddaramaiah--Ramanath-R

ಬೆಂಗಳೂರು, ಜು.27- ಗೃಹ ಸಚಿವರ ನೇಮಕದ ರಗಳೆ ಇನ್ನೂ ಮುಗಿದಿಲ್ಲ. ಹಿರಿಯ ಸಚಿವರುಗಳಿಗೆ ಈ ಹುದ್ದೆ ಜವಾಬ್ದಾರಿ ವಹಿಸುವ ಮುಖ್ಯಮಂತ್ರಿಗಳ ನಿಲುವಿಗೆ ಹಿರಿಯರು ಮನ್ನಣೆ ನೀಡಿದಂತೆ ಕಂಡುಬಂದಿಲ್ಲ. ಚುನಾವಣಾ ಸಂದರ್ಭದಲ್ಲಿ ದಕ್ಷರೊಬ್ಬರು ಗೃಹ ಸಚಿವರಾಗಿರಬೇಕು. ಕಾನೂನು ಸುವ್ಯವಸ್ಥೆ ಸಮರ್ಥವಾಗಿ ನಿಭಾಯಿಸುವಂತಿರಬೇಕು ಎಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಸಚಿವರಾದ ರಮೇಶ್‍ಕುಮಾರ್, ದೇಶಪಾಂಡೆ, ರಾಮಲಿಂಗಾರೆಡ್ಡಿ ಅವರೊಂದಿಗೆ ಸಮಾಲೋಚಿಸಿ ಈ ಖಾತೆ ವಹಿಸಿಕೊಳ್ಳುವಂತೆ ಸೂಚಿಸಿದ್ದಕ್ಕೆ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ಯಾರೊಬ್ಬರೂ ಈ ಖಾತೆ ಹೊಣೆ ಹೊರಲು ಸಿದ್ಧರಿದ್ದಂತಿಲ್ಲ. ಹಾಲಿ ಇರುವ ಖಾತೆ ಜತೆಗೆ ಹೆಚ್ಚುವರಿಯಾಗಿ ನೀಡಿದರೆ ನಿರ್ವಹಿಸಲು ಸಿದ್ಧರಿರುವುದಾಗಿ ರಾಮಲಿಂಗಾರೆಡ್ಡಿಯವರು ತಿಳಿಸಿದ್ದಾರೆ ಎಂದು ತಿಳಿದುಬಂದಿದ್ದು, ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಲಿ ರಾಮಲಿಂಗಾರೆಡ್ಡಿಯವರ ಬಳಿ ಇರುವ ಸಾರಿಗೆ ಖಾತೆಯನ್ನು ಬೇರೆಯವರಿಗೆ ವಹಿಸಿ ಗೃಹಖಾತೆ ನಿರ್ವಹಿಸುವಂತೆ ಚರ್ಚೆ ನಡೆಸಿದರಾದರೂ ಇದಕ್ಕೆ ರಾಮಲಿಂಗಾರೆಡ್ಡಿಯವರು ಒಪ್ಪಿದಂತೆ ಕಂಡುಬಂದಿಲ್ಲ. ಅದೇ ರೀತಿ ರಮೇಶ್‍ಕುಮಾರ್ ಅವರು ಕೂಡ ಗೃಹಖಾತೆ ನಿರ್ವಹಿಸಲು ಸಾಧ್ಯವಿಲ್ಲ ಎಂಬ ಮಾಹಿತಿ ತಿಳಿಸಿದ್ದಾರೆ ಎನ್ನಲಾಗಿದೆ. ದೇಶಪಾಂಡೆಯವರು ಈಗಿರುವ ಕೈಗಾರಿಕಾ ಖಾತೆಯಲ್ಲೇ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಅದನ್ನು ಪೂರೈಸುತ್ತೇನೆ. ನನಗೆ ಗೃಹ ಖಾತೆ ಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಹಿರಿಯ ಸಚಿವರಾದ ರಮಾನಾಥ ರೈ ಅವರು ಈ ಖಾತೆ ನಿರ್ವಹಿಸಲು ಒಪ್ಪಿಕೊಂಡಿದ್ದರಾದರೂ ಮುಖ್ಯಮಂತ್ರಿಗಳಿಗೆ ಇದರ ಜವಾಬ್ದಾರಿಯನ್ನು ಅವರಿಗೆ ವಹಿಸಲು ಮನಸ್ಸಿಲ್ಲ. ರಮಾನಾಥ ರೈ ಅವರಿಗೆ ಗೃಹಖಾತೆ ನೀಡಿದರೆ ಪ್ರತಿಪಕ್ಷ ಬಿಜೆಪಿಯ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ. ದಕ್ಷಿಣ ಕನ್ನಡ, ಕರಾವಳಿ ಪ್ರದೇಶದಲ್ಲಿ ಮೊದಲೇ ರಮಾನಾಥ ರೈ ಹಾಗೂ ಬಿಜೆಪಿ ನಡುವೆ ಬೆಂಕಿ ಹೊತ್ತಿ ಉರಿಯುತ್ತಿದೆ. ಈ ಸಂದರ್ಭದಲ್ಲಿ ಗೃಹ ಖಾತೆಯನ್ನು ಅವರಿಗೆ ನೀಡಿದರೆ ಮತ್ತಷ್ಟು ಸಮಸ್ಯೆಗಳು ಉಂಟಾಗುತ್ತವೆ ಎಂಬ ಲೆಕ್ಕಾಚಾರ ಮುಖ್ಯಮಂತ್ರಿಯವರು ಹಾಕಿದ್ದು, ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಯಂಗ್ ಅಂಡ್ ಎನರ್ಜಿಟಿಕ್ ಆಗಿದ್ದು, ಅದನ್ನು ನೀವು ನಿರ್ವಹಿಸಿ ಎಂದು ಕೇಳಿದ್ದಾರೆ. ಅವರು ಕೂಡ ಈ ಖಾತೆಯನ್ನು ನಿಭಾಯಿಸಲು ಹಿಂದೇಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರಖಂಡದಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ ಅಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರನ್ನು ಕರೆತರುವಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದ ಸಂತೋಷ್ ಲಾಡ್ ಅವರು ಗೃಹ ಖಾತೆ ವಹಿಸಿಕೊಂಡರೆ ಅವರಿಗೆ ನೀಡಲು ಮುಖ್ಯಮಂತ್ರಿಗಳು ಸಿದ್ಧರಿದ್ದರಾದರೂ ಸ್ವತಃ ಸಂತೋಷ್‍ಲಾಡ್ ಅವರೇ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.ಹಾಗಾಗಿ ಗೃಹಖಾತೆಯ ರಾಮಾಯಣ ಇನ್ನೂ ಮುಗಿದಿಲ್ಲ. ಚುನಾವಣೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಸಮರ್ಥರೊಬ್ಬರು ಖಾತೆಯನ್ನು ನಿರ್ವಹಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಚಿಂತನೆ ನಡೆಸಿ ಹಲವರೊಂದಿಗೆ ನಡೆಸಿರುವ ಮಾತುಕತೆ ಫಲ ನೀಡಿಲ್ಲ ಎಂದು ತಿಳಿದುಬಂದಿದ್ದು, ಸದ್ಯ ಈಗ ಆ ಖಾತೆಯನ್ನು ಅವರೇ ಹೊಂದಿದ್ದಾರೆ.

ಗೃಹ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್ ಅವರು ರಾಜೀನಾಮೆ ನೀಡಿದ ನಂತರ ದಕ್ಷಿಣ ಕನ್ನಡದಲ್ಲಿ ನಡೆದ ಕೋಮುಗಲಭೆ, ಜೈಲು ಅವ್ಯವಹಾರ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ಸಿಎಂಗೆ ತಲೆನೋವಾಗಿ ಪರಿಣಿಸಿದ್ದು, ಗೃಹಖಾತೆ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಲು ನಡೆಸಿದ ಪ್ರಯತ್ನ ಈವರೆಗೆ ಫಲ ನೀಡದಿರುವುದು ತಲೆನೋವಾಗಿ ಪರಿಣಮಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin