‘ಇನ್ನೆರಡು ದಿನಗಳಲ್ಲಿ ಮತ್ತಿಬ್ಬರು ಸಚಿವರು ಮತ್ತು ಪರಿಷತ್ ಸದಸ್ಯರ ಬಣ್ಣ ಬಯಲಾಗುತ್ತೆ’ : ಬಿಎಸ್ವೈ ಬಾಂಬ್

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-01

ಮೈಸೂರು, ಡಿ.20- ಇನ್ನೆರಡು ದಿನಗಳಲ್ಲಿ ಇಬ್ಬರು ಸಚಿವರು ಮತ್ತು ವಿಧಾನ ಪರಿಷತ್ ಸದಸ್ಯರ ಬಣ್ಣ ಬಯಲಾಗುತ್ತದೆ. ನೀವೇ ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ.  ಮಡಿಕೇರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಾಸ್ತ್ರ ಹೇಳುತ್ತಿಲ್ಲ, ಗಿಳಿಪಾಠವನ್ನೂ ಮಾಡುತ್ತಿಲ್ಲ. ಎರಡೇ ಎರಡು ದಿನ ಕಾದು ನೋಡಿ. ಎಲ್ಲವೂ ಬಯಲಾಗುತ್ತದೆ ಎಂದು ಸೂಚ್ಯವಾಗಿ ಹೇಳುವುದರ ಮೂಲಕ ಇನ್ನಷ್ಟು ಕುತೂಹಲ ಕೆರಳಿಸಿದರು.
ನಾನು ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಎಂತಹ ಭ್ರಷ್ಟರಿದ್ದಾರೆ ಎಂಬುದನ್ನು ಹೇಳಿದ್ದೆ. ನಾನು ಹೇಳುತ್ತಿರುವ ಮಾತು ನೂರಕ್ಕೆ ನೂರರಷ್ಟು ಸತ್ಯವಾಗುತ್ತದೆ ಎಂದು ಹೇಳಿದರು.

ನಾನು ಹಿಟ್ ಅಂಡ್ ರನ್ ಮಾಡುತ್ತಿಲ್ಲ. ಮುಂದೆ ಏನಾಗಲಿದೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದೆ. ಆದರೆ, ಕೆಲವರು ನನ್ನ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಗಿಳಿಪಾಠ ಹೇಳುತ್ತಿದ್ದೇನೆಂದು ಮನಬಂದಂತೆ ಮಾತನಾಡಿದರು.  ಕೆಲವರು ನಾನು ಸಂಸತ್ತಿನಲ್ಲಿ ಮಾತನಾಡಿದರೆ ಭೂಕಂಪವಾಗುತ್ತದೆ ಎಂದು ಹೇಳುತ್ತಿದ್ದಾರೆ. ಸದ್ಯದಲ್ಲೇ ಅವರ ಮನೆಯಲ್ಲೇ ಭೂಕಂಪವಾಗುತ್ತದೆ. ಏಕೆ, ಯಾವ ಕಾರಣಕ್ಕಾಗಿ ಎಂಬುದನ್ನು ನಾನು ಹೇಳುವುದಿಲ್ಲ. ಈಗ ನಡೆಯುತ್ತಿರುವ ಎಲ್ಲ ವಿದ್ಯಮಾನಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಡಕ್ಕೆ ಆಪತ್ತು ತರುತ್ತಿದೆ ಎಂದು ಭವಿಷ್ಯ ನುಡಿದರು.

ಇನ್ನೂ ಕೆಲವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ನಾನು ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಮಾನನಷ್ಟ ಮೊಕದ್ದಮೆ ಹೂಡಿದರೆ ಎದುರಿಸಲು ಸಿದ್ಧ ಎಂದು ಸವಾಲು ಹಾಕಿದರು. ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಪುತ್ರ ಸ್ಪರ್ಧಿಸುವುದಿಲ್ಲ. ಏಕೆ ಎಂಬುದಕ್ಕೆ ಕಾರಣ ಹೇಳುವುದಿಲ್ಲ. ನಾನು ಏನು ಹೇಳುತ್ತಿದ್ದೇನೋ ಅದು ಇನ್ನೆರಡು ದಿನಗಳಲ್ಲಿ ತಿಳಿಯುತ್ತದೆ. ಸ್ವಲ್ಪ ತಾಳ್ಮೆ ವಹಿಸಿ ಎಂದು ಮಾಧ್ಯಮದವರಿಗೆ ಮನವಿ ಮಾಡಿದರು.

ಸಚಿವರು ಮತ್ತು ವಿಧಾನ ಪರಿಷತ್ ಸದಸ್ಯರ ಹೆಸರು ಬಹಿರಂಗಪಡಿಸುವಂತೆ ಮಾಧ್ಯಮದವರು ಪದೇ ಪದೇ ಪ್ರಶ್ನಿಸಿದಾಗ ನೀವು ತಾಳ್ಮೆ ಕಳೆದುಕೊಳ್ಳಬೇಡಿ. ಎರಡು-ಮೂರು ದಿನಗಳಲ್ಲೇ ಬಣ್ಣ ಬಯಲಾಗುತ್ತದೆ. ನಂಜನಗೂಡು ಕ್ಷೇತ್ರದಲ್ಲಿ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಏಕೆ ಸ್ಪರ್ಧಿಸುವುದಿಲ್ಲ ಎಂಬುದು ನಿಮಗೆ ಚೆನ್ನಾಗಿ ತಿಳಿಯುತ್ತದೆ. ಸ್ವಲ್ಪ ಕಾದು ನೋಡಿ ಎಂದು ಪುನಃ ಮಾರ್ಮಿಕವಾಗಿ ಹೇಳಿದರು. ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಬಿಜೆಪಿಗೆ ಸೇರುವುದು ನೂರಕ್ಕೆ ನೂರರಷ್ಟು ಖಚಿತ. ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ. ನಮ್ಮ ಗೆಲುವು ನೂರಕ್ಕೆ ನೂರರಷ್ಟು ಖಚಿತ ಎಂದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin