ಇಬ್ಬರು ಕಾರು ಖದೀಮರ ಬಂಧನ
ರಾಯಚೂರು,ಆ.31-ಚಾಲಕನನ್ನು ಥಳಿಸಿ ಸಿನಿಮೀಯ ರೀತಿಯಲ್ಲಿ ಕಾರು ಕದ್ದು ಹೋಗುತ್ತಿದ್ದ , ಇಬ್ಬರು ದರೋಡೆಕೋರರನ್ನು ಬಂಧಿಸುವಲ್ಲಿ ಜಿಲ್ಲೆಯ ಮಾನ್ವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಂಜಾಬ್ ಮೂಲದ ಜಗದೀಪ್ ಮತ್ತು ರಂಜಿತ್ಸಿಂಗ್ ಬಂಧಿತ ಆರೋಪಿಗಳು. ಇವರು ರಾಯಚೂರಿನ ವೈ.ಐ.ಪಿ.ಎಸ್ ಕಾರ್ಖಾನೆಯಲ್ಲಿ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಕಬ್ಬಿಣದ ರಾಡುಗಳನ್ನು ಕಳ್ಳತನ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಕೆಲಸ ಕಳೆದುಕೊಂಡಿದ್ದರು. ಅದಾದ ನಂತರ ಇಬ್ಬರು ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದರು.
ರಾಯಚೂರಿನಿಂದ ಲಿಂಗಸುಗೂರು ಕಡೆಗೆ ಹೋಗುವಂತೆ ಬಾಡಿಗೆ ನೆಪದಲ್ಲಿ ಇನ್ನೋವಾ ಕಾರೊಂದನ್ನು ಬಾಡಿಗೆಗೆ ಪಡೆದಿದ್ದರು. ಮಾರ್ಗದ ಮಧ್ಯೆ ಹೋಗುತ್ತಿದ್ದಾಗ ಚಾಲಕ ಅನ್ವರ್ಗೆ ಮಾರಕಾಸ್ತ್ರಗಳನ್ನು ತೋರಿಸಿ, ಬಲವಾಗಿ ಥಳಿಸಿ ಮತ್ತು ಮರಕ್ಕೆ ಕಟ್ಟಿ ಹಾಕಿ ಇನ್ನೋವಾ ಕಾರನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ವಿಷಯ ತಿಳಿದ ಮಾನ್ವಿ ಪೊಲೀಸರು ಕಾರು ಕದ್ದು ಪರಾರಿಯಾಗುತ್ತಿದ್ದ ಇಬ್ಬರು ದರೋಡೆಕೋರರನ್ನು ಅಟ್ಟಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.
► Follow us on – Facebook / Twitter / Google+