ಇರೋಮ್ ಶರ್ಮಿಳಾ ಉಪವಾಸ ಸತ್ಯಾಗ್ರಹ ಅಂತ್ಯ

ಈ ಸುದ್ದಿಯನ್ನು ಶೇರ್ ಮಾಡಿ

irom

ಇಂಫಾಲ ಆ.09 :   ಮಣಿಪುರದಲ್ಲಿ ಜಾರಿಯಲ್ಲಿರುವ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್ಪಿಎ) ರದ್ದುಮಾಡಬೇಕೆಂದು ಆಗ್ರಹಿಸಿ 16 ವರ್ಷಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹಕ್ಕೆ ಮಣಿಪುರದ ಇರೋಮ್ ಶರ್ಮಿಳಾ ಮಂಗಳವಾರ  ಅಂತ್ಯಗೊಳಿಸಿದ್ದಾರೆ.  ಶರ್ಮಿಳಾ ಅವರನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ನಂತರ ಅವರು ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟಿರುವುದಾಗಿ ಘೋಷಣೆ ಮಾಡಿದರು.   ಕಳೆದ 16 ವರ್ಷದಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೂ ಯಾವುದೇ ಫಲ ಸಿಕ್ಕಿಲ್ಲ. ಹಾಗಾಗಿ ನಾನೀಗ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಲು ನಿರ್ಧರಿಸಿದ್ದೇನೆ. ಅದರಲ್ಲೊಂದು ನಾನು ಚುನಾವಣೆಗೆ ಸ್ಪರ್ಧಿಸಿ, ಮಣಿಪುರದ ಮುಖ್ಯಮಂತ್ರಿಯಾಗಿ, ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ರದ್ದುಪಡಿಸುವ ಇಚ್ಛೆ ನನ್ನದಾಗಿದೆ ಎಂದು ಶರ್ಮಿಳಾ ಉಪವಾಸ ಅಂತ್ಯಗೊಳಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.  ಮೂಗಿಗೆ ಅಳವಡಿಸಿರುವ ನಳಿಕೆಯ ಮೂಲಕ ಕೇವಲ ದ್ರವಾಹಾರ ಸೇವನೆ ಮಾಡುತ್ತಿರುವ 44 ವರ್ಷದ ಶರ್ಮಿಳಾ ಉಪವಾಸವನ್ನು ಅಂತ್ಯಗೊಳಿಸುತ್ತಿರುವುದಾಗಿ 15 ದಿನಗಳ ಹಿಂದೆ ಪ್ರಕಟಿಸಿದ್ದರು.

ಬಿಗಿ ಭದ್ರತೆಯಲ್ಲಿ ಆಂಬ್ಯುಲೆನ್ಸ್ ನಲ್ಲಿ ಶರ್ಮಿಳಾ ಅವರನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದರು. ತಾನು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವ ನಿರ್ಧಾರ ಕೈಗೊಂಡಿದ್ದೇನೆ. ಹಾಗಾಗಿ ತನ್ನನ್ನು ಬಿಡುಗಡೆ ಮಾಡಬೇಕು ಎಂದು ಶರ್ಮಿಳಾ ಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದರು.  ಬಳಿಕ ಕೋರ್ಟ್ ಶರ್ಮಿಳಾ ಬಿಡುಗಡೆಗೆ ಒಪ್ಪಿ, 10 ಸಾವಿರ ರೂಪಾಯಿ ಬೇಲ್ ಬಾಂಡ್ ಗೆ ಸಹಿ ಹಾಕುವಂತೆ ಸೂಚಿಸಿತ್ತು. ಆರಂಭದಲ್ಲಿ ಶರ್ಮಿಳಾ ಬಾಂಡ್ ಗೆ ಸಹಿ ಹಾಕಲು ನಿರಾಕರಿಸಿದ್ದರು. ತದನಂತರ ಸಹಿ ಹಾಕುವ ಮೂಲಕ ಶರ್ಮಿಳಾ ಅವರನ್ನು ಬಿಡುಗಡೆ ಮಾಡಲಾಯಿತು.  ಶರ್ಮಿಳಾ ಅವರನ್ನು 10 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆಗೊಳಿಸಿರುವುದನ್ನು ವಕೀಲರು ಖಚಿತಪಡಿಸಿದ್ದಾರೆ.

 

Facebook Comments

Sri Raghav

Admin