ಇಲ್ಲಿ ಹನಿ ನೀರು ಅಮೃತಕ್ಕೆ ಸಮಾನ…! ಬೆಂಗಳೂರಿನಲ್ಲೊಂದಿದೆ ನತದೃಷ್ಟ ವಾರ್ಡ್

ಈ ಸುದ್ದಿಯನ್ನು ಶೇರ್ ಮಾಡಿ

Bengaluru-Water-issue
ಬೆಂಗಳೂರು, ಮಾ.8-ಇಲ್ಲಿ ಹನಿ ನೀರು ಅಮೃತಕ್ಕೆ ಸಮಾನ…. ಇಲ್ಲಿನ ಮಹಿಳೆಯರು ಬೆಳಗ್ಗೆ ಎದ್ದು ಹಾಲಿಗಾಗಿ ಪರಿತಪಿಸುವುದಿಲ್ಲ. ಡ್ಯೂಟಿ ಮುಗಿಸಿ ಮನೆಗೆ ಬರುವ ಪುರುಷರು ಎಣ್ಣೆಯಂಗಡಿ ಕಡೆ ತಲೆ ಹಾಕೋದೂ ಇಲ್ಲ. ಇವರಿಗೆಲ್ಲ ಒಂದೇ ಕನವರಿಕೆ ನೀರು… ನೀರು… ನೀರು…  ಹೌದು, ಇಂತಹ ಪರಿಸ್ಥಿತಿ ಇರುವುದು ವಿಶ್ವ ಭೂಪಟದಲ್ಲಿ ಸಿಲಿಕಾನ್ ವ್ಯಾಲಿ, ನಿವೃತ್ತರ ಸ್ವರ್ಗ, ಉದ್ಯಾನನಗರಿ ಎಂಬೆಲ್ಲಾ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಅಂದರೆ ನೀವು ನಂಬಲೇಬೇಕು.  ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ವಾರ್ಡ್ ನಗರದ ಹೃದಯಭಾಗದ ಕೂಗಳತೆ ದೂರದಲ್ಲಿದೆ. ನಗರದ ಒಂದು ಭಾಗದ ಕುಡಿಯುವ ನೀರಿನ ದಾಹ ತಣಿಸುವ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ತೆರಳುವ ಮಾಗಡಿರಸ್ತೆಯಲ್ಲಿರುವುದೇ ಈ ನತದೃಷ್ಟ ವಾರ್ಡ್.
ಈ ವಾರ್ಡ್‍ನ ವಿಘ್ನೇಶ್ವರ ನಗರ, ಮಹದೇಶ್ವರ ನಗರ, ಮುನೇಶ್ವರ ನಗರ, ತುಂಗಾನಗರ, ನಾಗರಹೊಳೆ ನಗರ ಮತ್ತಿತರ ಪ್ರದೇಶಗಳಲ್ಲಿ ಕಳೆದ 15 ವರ್ಷಗಳಿಂದಲೂ ಕುಡಿಯುವ ನೀರಿಗೆ ಹಾಹಾಕಾರವಿದೆ.

ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಈ ವಾರ್ಡ್‍ನ ಹಲವಾರು ಪ್ರದೇಶ 110 ಹಳ್ಳಿ ವ್ಯಾಪ್ತಿಗೂ ಒಳಪಟ್ಟಿದೆ. ಇಲ್ಲಿ ಬೇಸಿಗೆಯಿರಲಿ ವರ್ಷದ 12 ತಿಂಗಳೂ ಕುಡಿಯುವುದಕ್ಕೆ ನೀರೇ ಸಿಗಲ್ಲ.   ಇನ್ನು ಬೇಸಿಗೆ ಬಂತೆಂದರೆ ಇವರ ಕಥೆ ಅಷ್ಟೆ. ದಿನಪೂರ್ತಿ ನೀರಿಗಾಗಿ ಪರದಾಡುವುದೇ ಇವರ ಕಾಯಕ. ಟ್ಯಾಂಕರ್‍ನಲ್ಲಿ ಬರುವ ನೀರು ಸಿಕ್ಕರೆ ಅವರ ಅದೃಷ್ಟ. ಇಲ್ಲದಿದ್ದರೆ, ಅವರ ಪಾಡು ಆ ದೇವರಿಗೆ ಪ್ರೀತಿ.

Bengaluru-Water-issue-1

+ ಬತ್ತಿಹೋದ ಕೊಳವೆಬಾವಿ:

ಬಿಬಿಎಂಪಿಗೆ ಹೇರೋಹಳ್ಳಿ ವಾರ್ಡ್ ಸೇರ್ಪಡೆಗೊಳ್ಳುವ ಮುನ್ನ ನಗರಸಭೆ ವ್ಯಾಪ್ತಿಗೆ ಒಳಪಟ್ಟಿತ್ತು. ಅಂದಿನ ನಗರಸಭೆ ಅಧಿಕಾರಿಗಳು ಇಲ್ಲಿನ ಜನರಿಗೆ ಕುಡಿಯುವ ನೀರು ಕಲ್ಪಿಸಲು ಹರಸಾಹಸ ಪಟ್ಟಿದ್ದರು. ಈ ವಾರ್ಡ್ ಬಿಬಿಎಂಪಿಗೆ ಸೇರ್ಪಡೆಗೊಂಡ ನಂತರ ನಮ್ಮ ಕಷ್ಟ ಪರಿಹಾರವಾಗಲಿದೆ ಎಂದೇ ಇಲ್ಲಿನ ಜನ ಭಾವಿಸಿದ್ದರು.   ಆದರೆ ಆದದ್ದೇ ಬೇರೆ. ಈ ಪ್ರದೇಶ ಬಿಬಿಎಂಪಿಗೆ ಒಳಪಟ್ಟು 8 ವರ್ಷಗಳು ಕಳೆದರೂ ಕುಡಿಯುವ ನೀರಿನ ಬವಣೆ ಮಾತ್ರ ಇನ್ನೂ ತಪ್ಪಿಲ್ಲ. ನೀರಿನ ಅಭಾವ ತಪ್ಪಿಸಲು ಈ ವಾರ್ಡ್‍ನಲ್ಲಿ 300ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ.
ಆರಂಭದಲ್ಲಿ ಈ ಭಾಗದ ಕುಡಿಯುವ ನೀರಿನ ಬವಣೆ ತಪ್ಪಿಸುವಲ್ಲಿ ಕಿಂಚಿತ್ತು ಸಹಕಾರಿಯಾಗಿದ್ದ 300 ಕೊಳವೆಬಾವಿಗಳು ಬತ್ತಿ ಹೋಗಿವೆ. ಹೀಗಾಗಿ ಇಲ್ಲಿನ ಜನರಿಗೆ ಇಂದಿಗೂ ಆಧಾರಸ್ತಂಭವಾಗಿರುವುದು ಟ್ಯಾಂಕರ್‍ಗಳು ಮಾತ್ರ.

+ ಶುದ್ಧ ಕುಡಿಯುವ ನೀರಿನ ಘಟಕ:
ಇಲ್ಲಿನ ಜನರ ಬವಣೆ ತಪ್ಪಿಸುವ ಉದ್ದೇಶದಿಂದ ಹೇರೋಹಳ್ಳಿ ವಾರ್ಡ್‍ನ ಬಿಬಿಎಂಪಿ ಸದಸ್ಯ ರಾಜಣ್ಣ 8 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದಾರೆ. ಇನ್ನೂ ಎರಡು ಘಟಕಗಳ ಕಾಮಗಾರಿ ಪ್ರಗತಿಯಲ್ಲಿದೆ. ಆದರೂ ನೀರಿನ ಬವಣೆ ಮಾತ್ರ ನೀಗಿಲ್ಲ.   ಈಗಂತೂ ನೀರಿನ ಬವಣೆ ಇನ್ನೂ ಹೆಚ್ಚಾಗಿದ್ದು, ಪ್ರತಿಯೊಂದು ಮನೆಗೂ ಟ್ಯಾಂಕರ್‍ಗಳ ಮೂಲಕವೇ ನೀರು ಸರಬರಾಜು ಮಾಡಲಾಗುತ್ತಿದೆ. ಸಣ್ಣ ಟ್ಯಾಂಕರ್‍ಗಳ ಬದಲಿಗೆ ಬೃಹತ್ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದರೂ ಎಲ್ಲರಿಗೂ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.

Bengaluru-Water-issue-3

+ ಕಾಮಗಾರಿ ಪ್ರಗತಿಯಲ್ಲಿದೆ:

ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡ 110ಹಳ್ಳಿ ಮತ್ತು 7 ನಗರಸಭೆಗಳಿಗೆ ಕಾವೇರಿ ನೀರು ಸರಬರಾಜು ಮಾಡುವ ನಾಲ್ಕನೇ ಹಂತದ ಯೋಜನೆ ಪ್ರಗತಿಯಲ್ಲಿದೆ.
ಹೇರೋಹಳ್ಳಿ ವಾರ್ಡ್‍ಗೂ ಕಾವೇರಿ ನೀರು ಸಂಪರ್ಕ ಕಲ್ಪಿಸುವ 46 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಇನ್ನು ಒಂದು ವರ್ಷವಾದರೂ ಬೇಕು.   ಕಾಮಗಾರಿ ಪೂರ್ಣಗೊಂಡರೂ ಬತ್ತಿ ಹೋಗಿರುವ ಕಾವೇರಿ ಒಡಲಿನಿಂದ ಇಲ್ಲಿನ ಜನರಿಗೆ ಕುಡಿಯುವ ನೀರು ಒದಗಿಸುವ ಮಾತಂತೂ ಸತ್ಯಕ್ಕೆ ದೂರವಾದದ್ದು.

+ ಬೇಸತ್ತು ಹೋಗಿದ್ದೇವೆ:

ಸಾರ್… ನಮ್ಮೂರು ಮಾಗಡಿ ಸಮೀಪದ ಸಣ್ಣ ಹಳ್ಳಿ. ಕೂಲಿನಾಲಿ ಮಾಡಿ ಜೀವನ ಸಾಗಿಸುವ ಉದ್ದೇಶದಿಂದ ವಿಘ್ನೇಶ್ವರ ನಗರದಲ್ಲಿ ಬಂದು ನೆಲೆಸಿದ್ದೇನೆ. ಆದರೆ ಇಲ್ಲಿನ ಕುಡಿಯುವ ನೀರಿನ ಬವಣೆಯಿಂದ ಬೇಸತ್ತು ಹೋಗಿದ್ದೇವೆ. ಈ ಊರಿನ ಸಹವಾಸವೇ ಬೇಡ ಮತ್ತೆ ಹಳ್ಳಿಗೆ ಹೋಗಿ ನೆಮ್ಮದಿ ಜೀವನ ಸಾಗಿಸುವುದೇ ಲೇಸು ಎನ್ನುತ್ತಾರೆ ಸ್ಥಳೀಯ ನಿವಾಸಿ ನಂಜೇಗೌಡ.

+ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ:

ನಾನು ಹೇರೋಹಳ್ಳಿ ವಾರ್ಡ್ ಸದಸ್ಯನಾಗಿ ಆರಿಸಿ ಬಂದ ನಂತರ ಇಲ್ಲಿನ ಕುಡಿಯುವ ನೀರಿನ ಬವಣೆ ನೀಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಈಗಾಗಲೇ ಕಾವೇರಿ ನಾಲ್ಕನೇ ಹಂತದ ಕಾಮಗಾರಿಗೆ ಶಾಸಕ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದ್ದಾರೆ. ಪ್ರತಿನಿತ್ಯ ಟ್ಯಾಂಕರ್ ಮೂಲಕ ಪ್ರತಿ ಮನೆಗೂ ನೀರು ತಲುಪಿಸುತ್ತಿದ್ದೇವೆ. ಬೇರೆಲ್ಲಾ ಕಾಮಗಾರಿಗಳನ್ನು ಬದಿಗೊತ್ತಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತಿದ್ದೇವೆ. ನಮ್ಮ ಅವಧಿಯೊಳಗೆ ಈ ಭಾಗಕ್ಕೆ ನೀರು ಒದಗಿಸುವುದೇ ನಮ್ಮ ಗುರಿ. ಆದರೆ ಕಾಲಾವಕಾಶ ಬೇಕು ಎನ್ನುತ್ತಾರೆ ಬಿಬಿಎಂಪಿ ಸದಸ್ಯ ರಾಜಣ್ಣ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin