ಇಸ್ರೋ ಮತ್ತೊಂದು ಮೈಲುಗಲ್ಲು : ಏಕ ಕಾಲದಲ್ಲಿ 104 ಉಪಗ್ರಹಗಳ ಯಶಸ್ವೀ ಉಡಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

ISro--01

ಶ್ರೀಹರಿಕೋಟಾ, ಫೆ.15-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಒಂದೇ ರಾಕೆಟ್‍ನಲ್ಲಿ ಏಕ ಕಾಲಕ್ಕೆ 104 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾವಣೆ ಮಾಡುವ ಮೂಲಕ ಹೊಸ ವಿಶ್ವ ವಿಕ್ರಮದ ಸಾಧನೆ ಮಾಡಿದೆ. ಇದರೊಂದಿಗೆ ಭಾರತದ ಹೆಮ್ಮೆಯ ಇಸ್ರೋ ಮುಕುಟಕ್ಕೆ ಮತ್ತೊಂದು ಐತಿಹಾಸಿಕ ದಾಖಲೆಯ ಗರಿ ಸೇರ್ಪಡೆಯಾಗಿದೆ.   ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಂದು ಬೆಳಗ್ಗೆ 9.28ರಲ್ಲಿ 104 ಉಪಗ್ರಹಗಳನ್ನು ಹೊತ್ತ ಪಿಎಸ್‍ಎಲ್‍ವಿ-ಸಿ37 ರಾಕೆಟ್ ಬೆಂಕಿಯನ್ನು ಕಾರುತ್ತ ನಭಕ್ಕೆ ಹಾರುತ್ತಿದ್ದಂತೆ ಇಸ್ರೋ ವಿಜ್ಞಾಗಳು ರೋಮಾಂಚಿತರಾಗಿ ಕುಣಿದು ಕುಪ್ಪಳಿಸಿದರು. ಒಂದೇ ರಾಕೆಟ್‍ನಲ್ಲಿ 100ಕ್ಕೂ ಹೆಚ್ಚು ಉಪಗ್ರಹಗಳನ್ನು ಅಂತರಿಕ್ಷಕ್ಕೆ ರವಾನಿಸಿದ ವಿಶ್ವದ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಯೊಂದಿಗೆ ಬಾಹ್ಯಾಕಾಶ ರಂಗದಲ್ಲಿ ಭಾರತ ಹೊಸ ಭಾಷ್ಯ ಬರೆದಿದೆ. ಭಾರತೀಯ ವಿಜ್ಞಾನಿಗಳ ಈ ಮಹಾ ಸಾಹಸಕ್ಕೆ ಇಡೀ ವಿಶ್ವವೇ ನಿಬ್ಬೆರಗಾಗಿದೆ.

ಭೂ ವೀಕ್ಷಣಾ ಉಪಗ್ರಹವಾದ ಕಾರ್ಟೊಸ್ಯಾಟ್-2 ಹಾಗೂ 103 ಪುಟ್ಟ ಉಪಗ್ರಹಗಳನ್ನು ನಭಕ್ಕೆ ಚಿಮ್ಮಿಸಲಾಗಿದ್ದು, ಇದರಲ್ಲಿ ಅಮೆರಿಕದ 94 ಮತ್ತು ಭಾರತದ 4 ಉಪ್ರಗಹಗಳು ಸೇರಿವೆ. ಇವುಗಳ ಒಟ್ಟು ತೂಕ 1500 ಕೆಜಿ. ಈ ಉಪಗ್ರಹಗಳು ಅಂತರಿಕ್ಷ ಕಕ್ಷೆಗೆ ಸುರಕ್ಷಿತವಾಗಿ ತಲುಪಿವೆ.   ಇದುವರೆಗೂ ವಿಶ್ವದ ಯಾವೊಂದು ರಾಷ್ಟ್ರವೂ ಈ ಸಾಧನೆ ಮಾಡಿಲ್ಲ. ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ 2013ರಲ್ಲಿ 29 ಉಪಗ್ರಹಗಳ ಉಡ್ಡಯನ ನಡೆಸಿತ್ತು. ರಷ್ಯಾ 2014ರಲ್ಲಿ 39 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಿ ದಾಖಲೆ ನಿರ್ಮಿಸಿತ್ತು.

ಈ ಉಪಗ್ರಹಗಳ ಉಡ್ಡಯನವು ಸೌರಮಂಡಲದ ಅತ್ಯಂತ ಪ್ರಕಾಶಮಾನ ಶುಕ್ರ ಗ್ರಹ ಮತ್ತು ಮಂಗಳ ಗ್ರಹದ ಸಂಶೋಧನೆಗೆ ನೆರವಾಗಲಿದೆ. ಅಲ್ಲದೆ ಇಸ್ರೋಗೂ ಇದರಿಂದ ಆರ್ಥಿಕ ಲಾಭವಾಗಲಿದೆ. ಜೊತೆಗೆ ಹವಾಮಾನ ಮುನ್ಸೂಚನೆ, ನೈಸರ್ಗಿಕ ವಿಕೋಪಗಳ ಬಗ್ಗೆ ಮುನ್ನವೇ ಮಾಹಿತಿ ಪಡೆಯಲು ಸಾಧ್ಯವಾಗಲಿದೆ.   ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯಿಂದ ಕೊರಿಯಾ, ಜರ್ಮನಿ, ಬೆಲ್ಜಿಯಂ, ಇಂಡೋನೆಷ್ಯಾ, ಅರ್ಜೆಂಟೈನಾ, ಜಪಾನ್, ಇಟಲಿ, ನೆದರ್‍ಲೆಂಡ್ಸ್, ಅಲ್ಜೀರಿಯಾ, ಸಿಂಗಪುರ್, ಮತ್ತು ಇಸ್ರೇಲ್ ದೇಶಗಳ ಉಪಗ್ರಹಗಳೂ ಉಡ್ಡಯನವಾಗಿ ಸೇವೆ ಪಡೆಯುತ್ತಿರುವುದು ಸಹ ಒಂದು ದಾಖಲೆಯೇ ಆಗಿದೆ.

ಪ್ರಧಾನಿ, ಗಣ್ಯರ ಅಭಿನಂದನೆ:   ಇಸ್ರೋ ಐತಿಹಾಸಿಕ ಸಾಧನೆ ಬಗ್ಗೆ ರಾಷ್ಟ್ರಫತಿ ಪ್ರಣವ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin