ಇಸ್ಲಾಮಿಕ್ ಧರ್ಮಗುರು ಝಾಕೀರ್‍ ಸಂಸ್ಥೆಗಳ ಮೇಲೆ NIA ದಾಳಿ, FIR ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

Zakir-Naik

ಮುಂಬೈ, ನ.19-ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಧರ್ಮಗಳ ನಡುವೆ ವಿದ್ವೇಷ ಬಿತ್ತಿ ಸಾಮಾಜಿಕ ಶಾಂತಿ ಕದಡಲು ಯತ್ನಿಸಿದ ಆರೋಪದಡಿ ವಿವಾದಾತ್ಮಕ ಇಸ್ಲಾಮಿಕ್ ಧರ್ಮಗುರು ಮತ್ತು ಸಂಶೋಧಕ ಝಾಕೀರ್ ನಾಯಕ್‍ಗೆ ಸಂಬಂಧಿಸಿದ 10 ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ.
ಇದೇ ವೇಳೆ, ಝಾಕೀರ್ ನಾಯ್ಕ್‍ಗೆ ಸೇರಿದ ಸರ್ಕಾರೇತರ ಸಂಸ್ಥೆ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ (ಐಆರ್‍ಎಫ್) ಹಾಗೂ ಇತರರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿ ಅಧಿಕಾರಿಗಳು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಝಾಕೀರ್‍ಗೆ ಸೇರಿದ ನಿಷೇಧಿತ ಐಆರ್‍ಎಫ್ ಜೊತೆ ಸಂಪರ್ಕ ಹೊಂದಿದ್ದ 10 ಸ್ಥಳಗಳ ಮೇಲೆ ಎನ್‍ಐಎ ಆಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಕೆಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.  ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 20 ಜನರನ್ನು ಬಲಿ ತೆಗೆದುಕೊಂಡ ಕೆಫೆ ಬಾಂಬ್ ಸ್ಫೋಟ ಕೃತ್ಯ ಎಸಗಲು ಝಾಕೀರ್ ಭಾಷಣಗಳು ಪ್ರಚೋದನೆ ನೀಡಿದ್ದವು ಎಂದು ಬಾಂಗ್ಲಾ ಸರ್ಕಾರ ಆರೋಪಿಸಿತ್ತು. ಇದರ ಬೆನ್ನಲ್ಲೆ ಕೇಂದ್ರ ಸರ್ಕಾರವು ಆತನಿಗೆ ಸೇರಿದ ಐಆರ್‍ಎಫ್ ಐದು ವರ್ಷ ನಿಷೇಧಿಸಿತ್ತು. ಈಗ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಜೊತೆ ಸಂಪರ್ಕ ಹೊಂದಿರುವ 10 ಸ್ಥಳಗಳ ಮೇಲೆ ದಾಳಿ ನಡೆಸುವ ಮೂಲಕ ಕೇಂದ್ರ ಸರ್ಕಾರ ಭಯೋತ್ಪಾದನೆ ನಿಗ್ರಹಕ್ಕಾಗಿ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ.

ಇಸ್ಲಾಮ್ ಧರ್ಮಪ್ರಚಾರಕ ಝಾಕೀರ್ ಈಗ ಸೌದಿ ಅರೇಬಿಯಾದಲ್ಲಿದ್ದು, ಭಾರತಕ್ಕೆ ಹಿಂದಿರುಗಲು ನಿರಾಕರಿಸಿದ್ದಾನೆ. ಯುವಕರಿಗೆ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ಆತ ಈ ಹಿಂದೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳೂ ಸಹ ದಾಖಲಾಗಿವೆ.  ಒಂದು ವಾರದ ಹಿಂದಷ್ಟೇ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಮೇಲೆ ಐಆರ್‍ಎಫ್‍ಗೆ ಐದು ವರ್ಷಗಳ ನಿರ್ಬಂಧ ವಿಧಿಸಿ ಅವನ ಸಂಘಟನೆಗಳ ಎಲ್ಲ ಚಟುವಟಿಕೆಗಳ ಮೇಲೆ ತೀವ್ರ ಕಣ್ಗಾವಲು ಇರಿಸಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin