ಈಗಿರುವ ನಾಡ ಧ್ವಜವನ್ನೇ ಮುಂದುವರಿಸಿ : ವಾಟಾಳ್ ನಾಗರಾಜ್

ಈ ಸುದ್ದಿಯನ್ನು ಶೇರ್ ಮಾಡಿ

Vatal-Nagaraj--01

ಬೆಂಗಳೂರು, ಜು.20- ಕನ್ನಡ ನಾಡಿನ ಧ್ವಜ ವಿನ್ಯಾಸಕ್ಕಾಗಿ ರಾಜ್ಯ ಸರ್ಕಾರ ರಚಿಸಿರುವ ಸಮಿತಿಯನ್ನು ರದ್ದು ಮಾಡಿ ಈಗ ಬಳಕೆಯಲ್ಲಿರುವ ಹಳದಿ-ಕೆಂಪು ಮಿಶ್ರಿತ ಧ್ವಜವನ್ನೇ ಯಥಾ ರೀತಿ ಮುಂದುವರಿಸುವಂತೆ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಧ್ವಜದ ಬಗ್ಗೆ ಚರ್ಚಿಸುತ್ತಿರುವವರಿಗೆ ಇತಿಹಾಸ ಮತ್ತು ವಾಸ್ತವಾಂಶಗಳು ಗೊತ್ತಿಲ್ಲ. 1966ರ ಆ.21ರಂದು ಮೊದಲ ಬಾರಿಗೆ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿಯಲ್ಲಿ ರಾಷ್ಟ್ರಧ್ವಜದ ಜತೆಯಲ್ಲೇ ನಾಡ ಹಾರಿಸಲಾಯಿತು ಎಂದರು.

ಮೊದಲು ವಿನ್ಯಾಸಗೊಳಿಸಿದ ಧ್ವಜ ಹಳದಿ ಬಣ್ಣದಿಂದ ಕೂಡಿದ್ದು, ಅದರಲ್ಲಿ ಕೆಂಪು ಗೆರೆಯಿಂದ ಕರ್ನಾಟಕ ನಕ್ಷೆ ಬಿಡಿಸಲಾಗಿತ್ತು. ನಕ್ಷೆಯೊಳಗೆ ಹಸಿರು ಬಣ್ಣದಲ್ಲಿ ಏಳು ದಳಗಳ ಪೈರನ್ನು ಚಿತ್ರಿಸಲಾಗಿತ್ತು. ಕರ್ನಾಟಕ ಏಳು ಸಾಮಂತ ರಾಜ್ಯಗಳ ಒಕ್ಕೂಟವಾಗಿದ್ದರಿಂದ ಆ ಹಸಿರು ಪೈರಿನಲ್ಲಿ ಏಳು ದಳಗಳನ್ನು ಸೇರಿಸಲಾಗಿತ್ತು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದಾಗಿ ಮೊದಲ ಬಾರಿ ರೂಪಿಸಿದ್ದ ಧ್ವಜವನ್ನು ಬದಲಾವಣೆ ಮಾಡಿ 1967ರಲ್ಲಿ ಹಳದಿ-ಕೆಂಪು ಮಿಶ್ರಿತ ಧ್ವಜ ರೂಪಿಸಲಾಯಿತು ಎಂದು ವಿವರಿಸಿದರು.

ಆ ಧ್ವಜದ ಮಧ್ಯದಲ್ಲಿ ಭುವನೇಶ್ವರಿ ತಾಯಿಯ ಚಿತ್ರವನ್ನು ಬಿಡಿಸಲಾಗಿದೆ. ಈ ಧ್ವಜ ಕಳೆದ 50 ವರ್ಷಗಳಿಂದ ಜನರ ಮನ್ನಣೆಗೆ ಪಾತ್ರವಾಗಿದೆ. ಡಾ.ರಾಜ್‍ಕುಮಾರ್ ಸೇರಿದಂತೆ ಎಲ್ಲ ಕಲಾವಿದರ, ರಂಗಭೂಮಿ, ಗಣ್ಯರ, ಸಾಹಿತಿಗಳ ಮೆಚ್ಚುಗೆ ಗಳಿಸಿದೆ ಎಂದು ಹೇಳಿದರು.   ಅಮೆರಿಕ, ನೇಪಾಳ ಸೇರಿದಂತೆ ವಿದೇಶಗಳಲ್ಲಿರುವ ಕನ್ನಡ ಸಂಘಗಳು ಹಳದಿ-ಕೆಂಪು ಮಿಶ್ರಿತ ಧ್ವಜ ಬಳಸುತ್ತಿವೆ. ಕಳೆದ 25 ವರ್ಷಗಳಿಂದ ಸರ್ಕಾರ ಅಧಿಕೃತವಾಗಿ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವದಲ್ಲೂ ಇದೇ ಧ್ವಜ ಬಳಸಲಾಗುತ್ತಿದೆ ಎಂದರು.  ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡದ ಧ್ವಜಕ್ಕೆ ಕಾನೂನಿನ ಮಾನ್ಯತೆ ನೀಡಿದ್ದಾರೆ. ಇಷ್ಟೆಲ್ಲ ಆದ ನಂತರ ರಾಜ್ಯ ಸರ್ಕಾರ ಈಗ ಧ್ವಜದ ವಿನ್ಯಾಸ ಬದಲಾವಣೆಗೆ ಸಾಹಿತಿ ಪಾಟೀಲ ಪುಟ್ಟಪ್ಪ ಹೇಳಿದರು ಎಂಬ ಕಾರಣಕ್ಕೆ ಸಮಿತಿ ರಚಿಸಲಾಗಿದೆ. ಈ ಸಮಿತಿ ಅನಗತ್ಯವಾಗಿತ್ತು ಎಂದು ವಾಟಾಳ್ ಅಭಿಪ್ರಾಯಪಟ್ಟರು.

ಈ ಮೊದಲು ರೂಪಿಸಿದ್ದ ಎರಡು ಧ್ವಜಗಳನ್ನು ನಾನು ಮತ್ತು ಮ.ರಾಮಮೂರ್ತಿ ರೂಪಿಸಿದ್ದರು. ರಾಜ್ಯ ಸರ್ಕಾರ ಈಗ ಧ್ವಜ ವಿನ್ಯಾಸ ಬದಲಾವಣೆಗೆ ಸಮಿತಿ ರಚಿಸುವ ಮೊದಲು 57 ವರ್ಷಗಳಿಂದ ಕನ್ನಡಕ್ಕಾಗಿ ಹೋರಾಟ ನಡೆಸುತ್ತಿರುವ ನನ್ನನ್ನಾಗಲಿ, ಇತರೆ ಸಂಘಟನೆ ಜತೆಯಲ್ಲಾಗಲಿ ಚರ್ಚೆ ನಡೆಸಿಲ್ಲ ಎಂದು ಆರೋಪಿಸಿದರು. ಈ ಸಮಿತಿಗೆ ಯಾವ ಮಾನದಂಡ ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಕನಿಷ್ಠ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶಾಸನ ಸಭೆಯಲ್ಲಿ ಅಂಗೀಕಾರ ಪಡೆದಿದ್ದರೆ ಸಮಿತಿಗೆ ಸಾಂವಿಧಾನಿಕ ಅಧಿಕಾರವಾದರೂ ಇರುತ್ತಿತ್ತು. ಈಗ ರಚಿಸಿರುವ ಸಮಿತಿಗೆ ಯಾವುದೇ ಮಾನ್ಯತೆ ಇಲ್ಲ ಎಂದು ಹೇಳಿದರು.

ಅದೇನೇ ಇರಲಿ, ಯಾವುದೇ ಕಾಲಕ್ಕೂ ಹಳದಿ-ಕೆಂಪು ಮಿಶ್ರಿತ ಧ್ವಜದಲ್ಲಿ ಸಣ್ಣ ಗೆರೆಯನ್ನೂ ಬದಲಾಯಿಸಬಾರದು. ಈ ಕುರಿತು ಜನಜಾಗೃತಿ ಮೂಡಿಸಲು ಜು.29ರಂದು ರಾಜ್ಯದಲ್ಲಿ ಬಾವುಟ ಸಮ್ಮೇಳನ ಹಮ್ಮಿಕೊಳ್ಳಲಾಗುವುದು. ಇದರಲ್ಲಿ ಸುಮಾರು 1 ಲಕ್ಷ ಮಂದಿ ಭಾಗವಹಿಸಲಿದ್ದಾರೆ. ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲೂ ಧ್ವಜಾರೋಹಣ ನೆರವೇರಲಿದೆ ಎಂದರು.  ಸರ್ಕಾರ ಸಮಿತಿ ರಚಿಸಿರುವ ಉದ್ದೇಶ ಕುರಿತು ಒಂದು ರೀತಿಯ ಚರ್ಚೆ ನಡೆಯುತ್ತಿದ್ದರೆ, ಕನ್ನಡಕ್ಕೆ ಪ್ರತ್ಯೇಕ ಧ್ವಜವೇ ಬೇಡ ಎಂಬ ಮಾತುಗಳೂ ಕೇಳಿಬರುತ್ತಿವೆ. ಇದು ಅಪ್ರಸ್ತುತ. ಬಿಜೆಪಿ ಸೇರಿದಂತೆ ಯಾವುದೇ ಪಕ್ಷಕ್ಕೆ ಧ್ವಜದ ಕುರಿತು ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin