ಈಜಿಪುರ ಕಟ್ಟಡ ಕುಸಿತ ದುರಂತದಲ್ಲಿ ಸತ್ತವರ ಸಂಖ್ಯೆ 7ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.16- ನಗರದ ಈಜಿಪುರದಲ್ಲಿ ಇಂದು ಮುಂಜಾನೆ 6.50ರ ಸಮಯದಲ್ಲಿ ಎರಡು ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ ಏಳು ಮಂದಿ ಮೃತಪಟ್ಟು, 11ಮಂದಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ಮಾಲಾಶ್ರೀ, ಕಲಾವತಿ, ರವಿಚಂದ್ರ, ಹರಿಪ್ರಸಾದ್, ಪವನ್ ಕಲ್ಯಾಣ್ ಮತ್ತು ಅಶ್ವಿನಿ ಎಂದು ಗುರುತಿಸಲಾಗಿದೆ.  ಕಟ್ಟಡ ಕುಸಿತದಿಂದಾಗಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.   ಈ ದುರಂತದ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆ ಇದ್ದು, ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಮನೆ ಕುಸಿತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಒಂದು ಮೂಲದ ಪ್ರಕಾರ ಇದು ಹಳೆ ಮನೆಯಾಗಿದ್ದು, ಒಂದು ತಿಂಗಳಿನಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮತ್ತಷ್ಟು ಶಿಥಿಲಗೊಂಡು ಈ ಕಟ್ಟಡ ಕುಸಿದಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ಮೂಲದ ಪ್ರಕಾರ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕಟ್ಟಡ ಕುಸಿದಿದೆ ಎಂದು ಹೇಳಲಾಗುತ್ತಿದೆ.

Building-Collapse-Ijipura--

ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಈಜಿಪುರದ ಗುಂಡಪ್ಪ ರಸ್ತೆ, ಗ್ರೀನ್‍ವ್ಯೂ ಆಸ್ಪತ್ರೆ ಸಮೀಪದ 7ನೇ ಕ್ರಾಸ್‍ನಲ್ಲಿ ಗುಣೇಶ್ ಎಂಬುವರು ಎರಡು ಅಂತಸ್ತಿನ ಕಟ್ಟಡದಲ್ಲಿ 6 ಮನೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದ್ದು, ಈ ಕಟ್ಟಡ 20×30 ಅಡಿ ಅಳತೆಯಿದ್ದು, 25 ವರ್ಷಗಳ ಹಿಂದೆ ಕಟ್ಟಲಾಗಿದೆ.
ಗುಣೇಶ್ ಅವರು ಸಮೀಪದಲ್ಲೇ ಬೇರೆ ಮನೆಯಲ್ಲಿ ವಾಸವಾಗಿದ್ದ್ದಾರೆ. ಈ ಎರಡು ಅಂತಸ್ತಿನ ಕಟ್ಟಡದಲ್ಲಿ 6ಮನೆಗಳ ಪೈಕಿ ಐದು ಮನೆಗಳಲ್ಲಿ ಐದು ಕುಟುಂಬಗಳು ಬಾಡಿಗೆಗೆ ವಾಸವಾಗಿದ್ದರೆ, ಒಂದು ಮನೆ ಮಾತ್ರ ಖಾಲಿ ಇತ್ತು.

Building-Collapse-Ijipura-0

ಇಂದು ಬೆಳಗ್ಗೆ ಸುಮಾರು 6.50ರಲ್ಲಿ ಈ ಎರಡು ಅಂತಸ್ತಿನ 6 ಮನೆಗಳಿದ್ದ ಕಟ್ಟಡ ಕುಸಿದು ಬಿದ್ದಿದೆ. ಸುದ್ದಿ ತಿಳಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಕೇಂದ್ರ ವಿಭಾಗದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈಜಿಪುರ ಕಟ್ಟಡ ಕುಸಿತಕ್ಕೆ ಕಾರಣ ತನಿಖೆಯ ನಂತರ ತಿಳಿಯಲಿದೆ : ರಾಮಲಿಂಗಾರೆಡ್ಡಿ

Ijipura-Building-Collapse--

ಈಜಿಪುರದಲ್ಲಿ ನಡೆದಿರುವ ಘಟನೆ ಸಿಲಿಂಡರ್ ಬ್ಲಾಸ್ಟ್ ನಿಂದ ಸಂಭವಿಸಿರಲು ಸಾಧ್ಯವಿಲ್ಲ. ಬಹುಷಃ ಕಟ್ಟಡ ಹಳೆದಾಗಿರುವುದರಿಂದ ಕುಸಿದಿರಬಹುದು. ತನಿಖೆಯ ನಂತರ ಕಾರಣ ತಿಳಿದುಬರಲಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಈಜಿಪುರ ಕಟ್ಟಡ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಈ ಸಂಜೆಯೊಂದಿಗೆ ಮಾತನಾಡಿದ ಅವರು, ಎರಡಂತಸ್ತಿನ ಕಟ್ಟಡ ಕುಸಿದಿದೆ. ಈ ಘಟನೆ ಸಿಲಿಂಡರ್ ಬ್ಲಾಸ್ಟ್‍ನಿಂದ ಸಂಭವಿಸಿದೆ ಎಂದು ಕೆಲವರು ಹೇಳುತ್ತಾರೆ. ಬಾಡಿಗೆದಾರರು ಹಳೆಯ ಕಟ್ಟಡವಾಗಿರುವುದರಿಂದ ಕುಸಿದಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ತನಿಖೆಯ ನಂತರ ನಿಖರ ಕಾರಣ ತಿಳಿದುಬರಲಿದೆ. ನಮ್ಮ ಅಧಿಕಾರಿಗಳು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಗ್ಯಾಸ್ ಸಿಲಿಂಡರ್ ಬ್ಲಾಸ್ಟ್‍ನಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆ ಇಲ್ಲ. ಸ್ಫೋಟ ಸಂಭವಿಸಿದ್ದರೆ ಬೆಂಕಿ, ಹೊಗೆ ಎಲ್ಲ ಇರಬೇಕಾಗಿತ್ತು. ಏನಾಗಿದೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು. ಈ ದುರಂತದಲ್ಲಿ ಐವರು ಮೃತಪಟ್ಟಿದ್ದಾರೆ. ಮಗುವೊಂದು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದೆ. ನಮ್ಮ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ತಲಾ 5 ಲಕ್ಷ ಪರಿಹಾರ :

ಬೆಂಗಳೂರು,ಅ.16-ಈಜಿಪುರ ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರಿಗೆ 50 ಸಾವಿರ ರೂ.ಗಳ ಪರಿಹಾರ ನೀಡಲಾಗುವುದು ಎಂದು ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಈ ವಿಷಯ ಪ್ರಕಟಿಸಿದರು. ಕಟ್ಟಡ ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸೂಚಿಸಿದ ಅವರು, ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.

ಗಾಯಗೊಂಡಿರುವ ಆರು ಮಂದಿಯಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದರು. ಘಟನಾ ಸ್ಥಳದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ , ಮೇಯರ್ ಸಂಪತ್ ರಾಜ್, ಪೊಲೀಸ್ ಆಯುಕ್ತ ಟಿ.ಸುನೀಲ್‍ಕುಮಾರ್ ಬೀಡುಬಿಟ್ಟು ತೆರವು ಕಾರ್ಯಾಚರಣೆ ವೀಕ್ಷಿಸಿದರು.

ಸಾವು ಗೆದ್ದ ಸಂಜನಾ : 

ಬೆಂಗಳೂರು, ಅ.16- ಈಜಿಪುರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಅವಶೇಷದಡಿ ಸಿಲುಕಿಕೊಂಡಿದ್ದ ಮೂರು ವರ್ಷದ ಕಂದಮ್ಮ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದೆ. ಅವಶೇಷದಡಿ ಸಿಲುಕಿಕೊಂಡಿದ್ದ ಸಂಜನಾ ಸಾವು ಗೆದ್ದ ಪುಣ್ಯವತಿ. ಕುಸಿದು ಬಿದ್ದ ಕಟ್ಟಡದಲ್ಲಿ 6 ಕುಟುಂಬ ವಾಸಿಸುತ್ತಿತ್ತು. ಕಾರ್ಯಾಚರಣೆ ಕೈಗೊಂಡ ಅಗ್ನಿಶಾಮಕ ಮತ್ತು ಎನ್‍ಡಿಆರ್‍ಎಫ್ ಸಿಬ್ಬಂದಿ ತೆರವು ಕಾರ್ಯಾಚರಣೆ ಕೈಗೊಂಡಿತ್ತು.

ಅವಶೇಷದಡಿ ಸಿಲುಕಿ ಆರು ಮಂದಿ ಮೃತಪಟ್ಟಿದ್ದಾರೆ ಎಂದೇ ಎಲ್ಲಾ ಭಾವಿಸಿದ್ದರು. 5 ದೇಹಗಳನ್ನು ಹೊರ ತೆಗೆಯಲಾಗಿತ್ತು. ಆದರೆ ಸಂಜನಾ ಮಾತ್ರ ಪತ್ತೆಯಾಗಿರಲಿಲ್ಲ. ಇದ್ದಕ್ಕಿದ್ದಂತೆ ಅವಶೇಷದಡಿಯಿಂದ ಮಗು ಅಳುವ ಶಬ್ದ ಕೇಳಿಸಿ ಎಚ್ಚೆತ್ತುಕೊಂಡ ಅಗ್ನಿಶಾಮಕ ದಳದ ಸಿಬ್ಬಂದಿ ಅವಶೇಷಗಳನ್ನು ಸೂಕ್ಷ್ಮವಾಗಿ ಹೊರ ತೆಗೆದಾಗ ಆಳದಲ್ಲಿ ಹುದುಗಿ ಹೋಗಿದ್ದ ಸಂಜನಾ ಬದುಕಿ ಬಂದಿದ್ದಾಳೆ.

ಕಟ್ಟಡ ಕುಸಿದ ರಭಸಕ್ಕೆ ಮಗುವಿನ ಮುಖದಲ್ಲಿ ಮಾತ್ರ ಸಣ್ಣ ಪುಟ್ಟ ಗಾಯಗಳಾಗಿದ್ದು, ಉಳಿದಂತೆ ಮಗುವಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಅದೃಷ್ಟವಶಾತ್ ಬದುಕುಳಿದು ಬಂದ ಸಂಜನಾಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಪ್ರಾಣಾಪಾಯದಿಂದ ಬಚಾವಾಗಿದ್ದಾಳೆ.

Facebook Comments

Sri Raghav

Admin