ಈವಾರ ತೆರೆಗೆ ಬರುತ್ತಿದೆ ವಿಜಯ ರಾಘವೇಂದ್ರ ಅಭಿನಯದ ‘ಜಾನಿ’

ಈ ಸುದ್ದಿಯನ್ನು ಶೇರ್ ಮಾಡಿ

jaani
ಚಿತ್ರರಂಗದಲ್ಲಿ ತನ್ನ ಕ್ಯಾಮೆರಾ ಕೈಚಳಕದ ಮೂಲಕ ಅದ್ಧೂರಿ ದೃಶ್ಯಗಳನ್ನು ಸೆರೆ ಹಿಡಿದಂತಹ ರಾಜ್ಯಪ್ರಶಸ್ತಿ ವಿಜೇತ, ಹಿರಿಯ ಛಾಯಾಗ್ರಾಹಕ ಪಿ.ಕೆ.ಎಚ್.ದಾಸ್ ನಿರ್ದೇಶನದ ಮೊದಲ ಚಿತ್ರ ಜಾನಿ ತೆರೆ ಮೇಲೆ ಈ ವಾರ ಬರುತ್ತಿದೆ.  ಚೌಕ, ಎರಡು ಕನಸು ಚಿತ್ರಗಳ ಬಳಿಕ ನಟ ವಿಜಯ್ ರಾಘವೇಂದ್ರ ನಾಯಕನಾಗಿ ಕಾಣಿಸಿ  ಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಜಾನಿ ಚಿತ್ರದ ಹಾಡುಗಳು ಮತ್ತು ಟ್ರೇಲರ್‍ಗಳು ಸ್ಯಾಂಡಲ್‍ವುಡ್‍ನಲ್ಲಿ ಒಂದಷ್ಟು ನಿರೀಕ್ಷೆ ಮೂಡಿಸಲು ಯಶಸ್ವಿಯಾಗಿದ್ದು, ಜಾನಿ ಹೇಗಿರಲಿದ್ದಾನೆ ಎಂಬ ಪ್ರೇಕ್ಷಕರ ಕುತೂಹಲಕ್ಕೆ ಈ ವಾರ ತೆರೆ ಬೀಳಲಿದೆ.  ಇಂದಿನ ಆಡಿಯನ್ಸ್‍ಗೆ ಇಷ್ಟವಾಗುವ ಲವ್, ಆ್ಯಕ್ಷನ್, ರೊಮ್ಯಾನ್ಸ್, ಸೆಂಟಿಮೆಂಟ್, ಕಾಮಿಡಿ, ಪಾಲಿಟಿಕ್ಸ್ ಹೀಗೆ ಹಲವು ಅಂಶಗಳು ಸಿನಿಮಾದಲ್ಲಿದೆ. ಜಾನಿ ಕಂಪ್ಲೀಟ್ ಫ್ಯಾಮಿಲಿ ಎಂಟರ್‍ಟೈನ್ಮೆಂಟ್ ಚಿತ್ರವಂತೆ.

ಮೊದಲ ಬಾರಿಗೆ ನಟ ವಿಜಯ್ ರಾಘವೇಂದ್ರ ಜಾನಿ ಎಂಬ ಜಾಲಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಅವರ ಸಿನಿ ಕೆರಿಯರ್‍ನ ಉತ್ತಮ ಚಿತ್ರಗಳಲ್ಲೊಂದಾಗಲಿದೆ. ಡ್ಯಾನ್ಸ್, ಡೈಲಾಗ್ಸ್, ಆ್ಯಕ್ಷನ್ ಮೂಲಕ ವಿಜಯ್ ರಾಘವೇಂದ್ರ ಪ್ರೇಕ್ಷಕರಿಗೆ ಇನ್ನಷ್ಟು ಇಷ್ಟವಾಗುತ್ತಾರೆ.  ಇನ್ನು ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.   ಗೋಲ್ಡನ್‍ಸ್ಟಾರ್ ಗಣೇಶ್ ಅಭಿನಯದ ಹುಡುಗಾಟ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಜಸ್ಸಿ ಗಿಫ್ಟ್ ಸಂಗೀತ ಸಂಯೋಜನೆಯಲ್ಲಿ ಮೂಡಿಬರುತ್ತಿರುವ 25ನೇ ಚಿತ್ರ ಇದಾಗಿದ್ದು, ಚಿತ್ರದ ಹಾಡುಗಳಿಗೆ ಉದಿತ್ ನಾರಾಯಣ್, ಶ್ರೇಯಾ ಘೋಷಾಲ್, ಚಂದನ್ ಶೆಟ್ಟಿ , ಶಶಾಂಕ್ ಶೇಷಗಿರಿ, ಜೆಸ್ಸಿ ಗಿಫ್ಟ್ ದನಿಯಾಗಿದ್ದಾರೆ. ಚಂದನ್ ಶೆಟ್ಟಿ, ರಾಜ ಕಿರಣ್, ಶಿವನಂಜೇಗೌಡ ಚಿತ್ರದ ಹಾಡುಗಳಿಗೆ ಸಾಹಿತ್ಯವನ್ನು ರಚಿಸಿದ್ದಾರೆ.

ಈ ಚಿತ್ರದಲ್ಲಿ ನಟ ವಿಜಯ್ ರಾಘವೇಂದ್ರ ಜೊತೆ ನಾಯಕಿಯರಾಗಿ ಜನನಿ ಮತ್ತು ಮಿಲನ ನಾಗರಾಜ್ ಎಂಬ ಇಬ್ಬರು ಚೆಲುವೆಯರು ಅಭಿನಯಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಸಾಧು ಕೋಕಿಲ, ಸುಮನ್, ಮುಗೂರು ಸುಂದರಂ ಮುಂತಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಚಿತ್ರದ ಹಾಡುಗಳಿಗೆ ಹಿರಿಯ ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ನೃತ್ಯ ಸಂಯೋಜನೆ   ಮಾಡಿದ್ದಾರೆ.  ಬೆಂಗಳೂರು ಹಾಗೂ ಮಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಮತ್ತು ಮಲೇಷಿಯಾದ ಸುಂದರ ತಾಣಗಳಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಜಾನಿ ಚಿತ್ರವನ್ನು ಜೆ.ಜಾನಕಿರಾಮ್, ಎಸ್.ಪುರುಷೋತ್ತಮ್ ಮತ್ತು ಎಂ. ಅರವಿಂದ್ ಸೇರಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.   ಈ ಜಾನಿಯ ಜೋಶ್ ಯಾವ ಪರಿ ಪ್ರೇಕ್ಷಕರನ್ನು ಸೆಳೆಯಲಿದೆ ಎಂಬುದನ್ನು ಬೆಳ್ಳಿ ಪರದೆ ಮೇಲೆ ನೋಡಿ ಆನಂದಿಸ ಬೇಕಿದೆ.

 

Facebook Comments

Sri Raghav

Admin