ಈ ಕಾರಣಗಳಿಗೆ ನಿಮ್ಮದೇ ಆದ ಒಂದು ಇ-ಮೇಲ್ ಐಡಿ ಇರಲೇಬೇಕು
ಇಂದು ಎಷ್ಟೋ ಕೆಲಸಗಳನ್ನು ನಾವು ಕೂತ ಜಾಗದಲ್ಲೇ, ಬೆರಳ ತುದಿಯಲ್ಲೇ ಮಾಡಿ ಮುಗಿಸುತ್ತಿದ್ದೇವೆ. ಅದಕ್ಕೆ ಕಾರಣ ಅಂತರ್ಜಾಲ. ಎಲ್ಲೆಡೆ ವ್ಯಾಪಕವಾಗಿ ಆವರಿಸಿಕೊಂಡಿರುವ ಈ ಜಾಲ ಇಂದಿನ ದಿನಗಳಲ್ಲಿ ಅನಿವಾರ್ಯವಾಗಿಬಿಟ್ಟಿದೆ. ಒಂದು ದಿನ ಇಂಟರ್ನೆಟ್ ಇಲ್ಲವಾದರೆ ಇಡೀ ಪ್ರಪಂಚವೇ ನಿಂತಂತೆ ಭಾಸವಾಗಿಬಿಡುತ್ತದೆ. ಯಾರು ಯಾರಿಗೂ ಸಂಪರ್ಕವಿಲ್ಲದಂತಾಗಿ ಬಿಡುತ್ತದೆ. ಒಂದರ್ಥದಲ್ಲೀ ಅಂತರ್ಜಾಲ ನಮ್ಮೆಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅದಿಲ್ಲದೇ ನಾವು ಬದುಕಲಾರೆವು ಎನ್ನುವಷ್ಟರ ಮಟ್ಟಿಗೆ ಆ ಜಾಲ ನಮ್ಮನ್ನಾವರಿಕೊಂಡಿದೆ. ಆದರೆ, ಇಂದಿಗೂ ಸಹ ಇಂಟರ್ನೆಟ್ ಎಂದರೆ ಏನು? ಇ-ಮೇಲ್ ಎಂದರೆ ಏನು? ಎಂಬುದರ ಬಗ್ಗೆ ಗೊತ್ತಿಲ್ಲದ ಅದೇಷ್ಟೋ ಜನರಿದ್ದಾರೆ. ಅವರೆಲ್ಲ ವೇಗವಾಗಿ ಓಡುತ್ತಿರುವ ಈ ಆಧುನಿಕ ಪ್ರಪಂಚಲ್ಲಿ ಹಿಂದೆಬಿದ್ದಿದ್ದಾರೆ. ಅವರಿಗೆ ಅಂತರ್ಜಾಲದ ಒಂದು ಬಹುಮುಖ್ಯ ಅಂಗವಾಗಿರುವ ಇ-ಮೇಲ್ ವಿಳಾಸ ಎಷ್ಟು ಮುಖ್ಯ ಎಂಬುದನ್ನು ತಿಳಿಸುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ.
ಹಳ್ಳಿಯಲ್ಲೇ ಕುಳಿತುಕೊಂಡು ದೂರದ ಅಮೆರಿಕ ಅಥವಾ ಲಂಡನ್ನಲ್ಲಿರುವ ತಮ್ಮ ಮಗ/ಮಗಳೊಂದಿಗೆ ನೇರವಾಗಿ ಮಾತನಾಡುವಂತಾದರೆ? ಹೀಗೆ ಇಂಟರ್ನೆಟ್ ಮೂಲಕ ಮಾತುಕತೆ (ಚಾಟಿಂಗ್), ವೀಡಿಯೋ ಸಂವಾದ ನಡೆಸಬೇಕಿದ್ದರೆ ಇ-ಮೇಲ್ ಖಾತೆ ಅವಶ್ಯ.
ಮನೆಯಲ್ಲೇ ಕುಳಿತು ಬ್ಯಾಂಕ್ ಖಾತೆ ನಿಬಾಯಿಸಲು, ಒಂದು ಖಾತೆಯಿಂದ ಇನ್ನೊಂದಕ್ಕೆ ಹಣ ವರ್ಗಾವಣೆ ಹಾಗೂ ಮೊಬೈಲ್ ರೀಚಾರ್ಜಿಂಗ್ ಡಿಟಿಎಚ್ ಟಿವಿ ಸಂಪರ್ಕಗಳಿಗೆ ರೀಚಾರ್ಜಿಂಗ್ ಮತ್ತು ಇತ್ಯಾದಿಗಳಿಗೆ ಅನುಕೂಲಕರವಾದ ಇಂಟರ್ನೆಟ್ ಬ್ಯಾಂಕ್ ಸೌಲಭ್ಯ ಹೊಂದಬೇಕಿದ್ದರೆ ಇ-ಮೇಲï ಅತ್ಯಗತ್ಯ.
ಕೆಲವು ನಗರಗಳಲ್ಲಿ ಕರೆಂಟ್ ಬಿಲ್, ನೀರಿನ ಬಿಲ್ ಅಥವಾ ದೂರವಾಣಿ ಬಿಲ್ ಕಟ್ಟಲು ಉದ್ದ ಕ್ಯೂನಲ್ಲಿ ನಿಲ್ಲಬೇಕಾಗುತ್ತದೆ. ಇದು ತಪ್ಪಿಸಬೇಕಿದ್ದರೆ, ಮನೆಯಲ್ಲೇ ಕುಳಿತು ಆಯಾ ಸರಕಾರಿ ಇಲಾಖೆಗಳ ವೆಬ್ಸೈಟ್ ಮೂಲಕ ಬಿಲ್ ಪಾವತಿ ವ್ಯವಸ್ಥೆ ಇರುತ್ತದೆ. ಇದಕ್ಕೆ ಇ-ಮೇಲ್ ಮತ್ತು ದೂರವಾಣಿ ಸಂಖ್ಯೆಯೇ ಮೂಲ ಆಧಾರ. ಉದ್ಯೋಗ ಹುಡುಕಾಟಕ್ಕಾಗಲೀ, ಇಂಟರ್ನೆಟ್ ಮೂಲಕ ವೈವಾಹಿಕ ಸಂಬಂಧಗಳನ್ನು ಕುದುರಿಸುವುದಕ್ಕಾಗಲೀ, ಆಯಾ ವೆಬï ಸೈಟ್ಗಳಲ್ಲಿ ನೋಂದಾಯಿಸಬೇಕಿದ್ದರೆ ಇ-ಮೇಲ್ ಐಡಿ ಕಡ್ಡಾಯವಾಗಿರುತ್ತದೆ.
ಈಗ ಜನಪ್ರಿಯವಾಗುತ್ತಿರುವ ಸಾಮಾಜಿಕ ಅಂತರ್ಜಾಲ ತಾಣಗಳಾದ ಫೇಸ್ಬುಕ್, ಟ್ವಿಟರ್ ಮುಂತಾದವುಗಳಲ್ಲಿ ಖಾತೆ ತೆರೆಯಲು ಕೂಡ ಇ-ಮೇಲ್ ಬೇಕೇಬೇಕು. ಬಸ್ಸು, ರೈಲು ಅಥವಾ ವಿಮಾನ ಪ್ರಯಾಣಕ್ಕೆ ಮನೆಯಲ್ಲೇ ಕುಳಿತು ಸೀಟು ಕಾದಿರಿಸಬೇಕಿದ್ದರೆ ಇ-ಮೇಲ್ ಖಾತೆ ಅವಶ್ಯ. ಈಗಿನ ಅತ್ಯಾಧುನಿಕ ಸ್ಮಾರ್ಟ್ಫೋನ್/ಟ್ಯಾಬ್ಲೆಟ್ ಖರೀದಿಸಿದರೆ, ಆಯಾ ಕಂಪನಿಗಳ ತಂತ್ರಾಂಶಗಳ ಪರಿಪೂರ್ಣ ಪ್ರಯೋಜನ ಪಡೆದುಕೊಳ್ಳಲು, ಅಪ್ಲಿಕೇಶನ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳಲು, ಸಾಫ್ಟ್ವೇರ್ ಅಪ್ಗ್ರೇಡ್ ಮಾಡಿಕೊಳ್ಳಲು ಇ-ಮೇಲ್ ಅತ್ಯಗತ್ಯ. ಅಂತರ್ಜಾಲದಲ್ಲಿ ನಿಮ್ಮದೇ ಆದ ಬ್ಲಾಗ್ ತೆರೆಯಲು ಇ-ಮೇಲ್ ಐಡಿಯೇ ಮೂಲಾಧಾರ. ಇ-ಮೇಲ್ ಖಾತೆ ಹೊಂದಲು ಯಾವುದೇ ರೀತಿ ಹಣ ಖರ್ಚು ಮಾಡಬೇಕಾಗಿಲ್ಲ, ಇಂಟರ್ನೆಟ್ ಸಂಪರ್ಕ, ಹೆಸರು ಮತ್ತು ಮೊಬೈಲ್ ಫೋನ್ ಸಂಖ್ಯೆ ಇದ್ದರೆ ಸಾಕಾಗುತ್ತದೆ. ಬೇಕಿದ್ದರೆ ವಿಳಾಸ, ವಯಸ್ಸು, ಜನ್ಮದಿನ ಇತ್ಯಾದಿ ವಿವರ-ಪ್ರವರ ನಮೂದಿಸಬಹುದು ಅಷ್ಟೇ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS