ಈ ಕಾರ್ ಚಾಲಕನಿಗೆ ಒಂದು ಹ್ಯಾಟ್ಸಾಫ್ ಹೇಳಿ
ಬೆಂಗಳೂರು, ಜ.25- ಆಟೋ, ಟ್ಯಾಕ್ಸಿ ಮತ್ತಿತರ ವಾಹನಗಳ ಚಾಲಕರು ಬಂದ್ ಸಂದರ್ಭದಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಹಣ ಕೀಳುವುದು ಮಾಮೂಲು. ಆದರೆ, ಇಲ್ಲೊಬ್ಬ ಪುಣ್ಯಾತ್ಮ ವಯಸ್ಸಾದವರು, ರೋಗಿಗಳು, ಅಂಗವಿಕಲರಿಗೆ ಉಚಿತ ಸೇವೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಅವರೇ ಸಭಾಪತಿ. ಮಹದಾಯಿ ನೀರಿಗೆ ಆಗ್ರಹಿಸಿ ಕರ್ನಾಟಕ ಬಂದ್ಗೆ ಕರೆ ನೀಡಿರುವ ಸಂದರ್ಭದಲ್ಲಿ ನಗರದಲ್ಲಿ ಬಸ್ ಸೇವೆ ಸ್ಥಬ್ಧಗೊಂಡಿದೆ.
ಇಂತಹ ಸಂದರ್ಭದಲ್ಲಿ ನಿಲ್ದಾಣಗಳಲ್ಲಿ ಬಸ್ ಸಿಗದೆ ಪರದಾಡುವ ಹಿರಿಯ ನಾಗರಿಕರಿಗೆ, ರೋಗಿಗಳಿಗೆ, ಅಂಗವಿಕಲರಿಗೆ ಮತ್ತು ಸಣ್ಣಪುಟ್ಟ ಮಕ್ಕಳೊಂದಿಗಿರುವ ಮಹಿಳೆಯರನ್ನು ತಮ್ಮ ಕಾರ್ ಮೂಲಕ ಅವರು ಸೇರಬೇಕಾದ ಸ್ಥಳ ಸೇರಿಸುವ ಮೂಲಕ ಸಭಾಪತಿ ಶಹಭಾಷ್ ಗಿರಿ ಗಿಟ್ಟಿಸಿಕೊಂಡಿದ್ದಾರೆ. ತಮ್ಮ ಕಾರಿನ ಮೇಲೆ ಮೊಬೈಲ್ ನಂಬರ್ ದಾಖಲು ಮಾಡಿಕೊಂಡು ಮೆಜಸ್ಟಿಕ್ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಸಭಾಪತಿಗೆ ಯಾರೇ ದೂರವಾಣಿ ಕರೆ ಮಾಡಿ ತಮ್ಮ ಸಂಕಷ್ಟ ಹೇಳಿಕೊಂಡರೆ ಸಾಕು, ಕ್ಷಣಾರ್ಧದಲ್ಲಿ ಸ್ಥಳಕ್ಕೆ ಹಾಜರಾಗುವ ಸಭಾಪತಿ ಅಸಹಾಯಕರನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗುವ ಮೂಲಕ ಮಾನವೀಯತೆಗೆ ಮುನ್ನುಡಿ ಬರೆದಿದ್ದಾರೆ. ಸಭಾಪತಿಯವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.