ಈ ತಿಂಗಳೊಳಗೆ ಆಧಾರ್ ಲಿಂಕ್ ಮಾಡದಿದ್ದರೆ ರದ್ದಾಗಲಿದೆ ನಿಮ್ಮ ರೇಷನ್ ಕಾರ್ಡ್

ಈ ಸುದ್ದಿಯನ್ನು ಶೇರ್ ಮಾಡಿ

Ration-Card

ಬೆಂಗಳೂರು, ಸೆ.10-ಈ ತಿಂಗಳ ಅಂತ್ಯದೊಳಗೆ ಆಧಾರ್ ಲಿಂಕ್ ಮಾಡದ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದರು.  ಅವರು ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಗರ ಪ್ರದೇಶಗಳಲ್ಲಿ ಪಡಿತರಚೀಟಿಗಳಿಗೆ ಆಧಾರ್ ಲಿಂಕ್ ಮಾಡಲು ಈ ತಿಂಗಳ 30ರವರೆಗೆ ಅವಕಾಶವಿದೆ ಎಂದರು.  ಕುಟುಂಬದ ಒಬ್ಬರ ಆಧಾರ್‍ಕಾರ್ಡ್ ಲಿಂಕ್ ಆಗದಿದ್ದರೂ ಅಂತಹ ಹೆಸರುಗಳನ್ನು ಪಡಿತರಚೀಟಿಯಿಂದ ಅಳಿಸಿ ಹಾಕಲಾಗುವುದು. ನಂತರ ಇದಕ್ಕೆ ಸಂಬಂಧಪಟ್ಟಂತೆ ಸೂಕ್ತ ದಾಖಲೆಗಳನ್ನು ಒದಗಿಸಿದರೆ ಆ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಮತ್ತೆ ಆ ಹೆಸರುಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಪ್ರಸ್ತುತ ಅಕ್ಟೋಬರ್, ನವೆಂಬರ್, ಡಿಸೆಂಬರ್ ಈ ಮೂರೂ ತಿಂಗಳಿಗೆ ಪಡಿತರ ಕೂಪನ್‍ಗಳನ್ನು ಏಕಕಾಲಕ್ಕೆ ನೀಡಲಾಗಿದೆ. ಈ ವ್ಯವಸ್ಥೆಯನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವ ಯೋಜನೆ ಇದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಅಭಾವ ಇರುವುದರಿಂದ ಮೊಬೈಲ್ ಮಿಷನ್ ಮೂಲಕ ಕೂಪನ್ ವಿತರಿಸುವ ವ್ಯವಸ್ಥೆ ಮಾಡಲಾಗುವುದು. [ ಇದನ್ನೂ ಓದಿ :  ಪಡಿತರ ವ್ಯವಸ್ಥೆಯಿಂದ ಬಡಜನತೆ ವಂಚಿತರಾಗಬಾರದು : ಯು.ಟಿ.ಖಾದರ್  ] ಮುಂದಿನ ಮೂರು ತಿಂಗಳಲ್ಲಿ ಪಡಿತರಚೀಟಿ ಮತ್ತು ಅವುಗಳ ವಿತರಣೆಯಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಬೇಕು. ಜನವರಿಯಿಂದ ಹೊಸ ಕಾರ್ಡ್‍ಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗುವುದು. ನಗರ ಪ್ರದೇಶದಲ್ಲಿ ಶೇ.72ರಷ್ಟು ಪಡಿತರ ಚೀಟಿಗಳಿಗೆ ಮಾತ್ರ ಆಧಾರ್ ಲಿಂಕ್ ಮಾಡಲಾಗಿದೆ.

ಬೋಗಸ್ ಎಂದು ಪರಿಗಣನೆ:

ಆಧಾರ್ ಲಿಂಕ್ ಇಲ್ಲದ ಪಡಿತರ ಚೀಟಿಗಳನ್ನು ಬೋಗಸ್ ಎಂದು ಪರಿಗಣಿಸಲಾಗುವುದು. ಇದಕ್ಕಾಗಿ ಪರಿಶೀಲನಾ ಸಮಿತಿ ಕಾರ್ಯ ನಿರ್ವಹಿಸಲಿದೆ. ಈ ಮೊದಲು ಆಹಾರ ಪೂರೈಕೆ ಸೂಪರ್‍ವೈಸರ್ ಅವರಿಗೆ ಪಡಿತರ ಚೀಟಿ ವಿತರಣೆ ಅಧಿಕಾರ ನೀಡಲಾಗಿತ್ತು. ಈಗ ಇದನ್ನು ಸರಳೀಕೃತಗೊಳಿಸಿ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಈ ಅಧಿಕಾರ ನೀಡಲಾಗಿದೆ. ಎಲ್ಲ ಕಾರ್ಡ್‍ದಾರರಿಗೆ ಸ್ಪೀಡ್ ಪೋಸ್ಟ್ ಮೂಲಕ ಕೂಪನ್‍ಗಳನ್ನು ಕಳುಹಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲೂ ಏಕಕಾಲಕ್ಕೆ ಮೂರು ತಿಂಗಳ ಕೂಪನ್ ನೀಡುವ ವ್ಯವಸ್ಥೆ ಮಾಡಲಾಗುವುದು. ಇದು ಮುಂದಿನ ತಿಂಗಳಿನಿಂದಲೇ ( ಅಕ್ಟೋಬರ್) ಜಾರಿಯಾಗಲಿದೆ.   ಪ್ರಸ್ತುತ ನಗರ ಪ್ರದೇಶದಲ್ಲಿ 5,538 ನ್ಯಾಯಬೆಲೆ ಅಂಗಡಿಗಳಲ್ಲಿ 31,49,948 ಪಡಿತರಚೀಟಿದಾರರು ಈ ರೀತಿ ಕೂಪನ್ ಪಡೆದಿದ್ದಾರೆ. ಇಷ್ಟು ಜನ ಕಾರ್ಡ್‍ದಾರರ ಪೈಕಿ ಒಟ್ಟು 15,19,854 ಮಂದಿ ಪಡಿತರ ಪಡೆದಿದ್ದಾರೆ.

ಆನ್‍ಲೈನ್‍ನಲ್ಲಿ ಅರ್ಜಿ:

ಬಿಪಿಎಲ್ ಮತ್ತು ಎಪಿಎಲ್ ಹೊಸ ಚೀಟಿಗಳನ್ನು ಪಡೆಯಲು ಫಲಾನುಭವಿಗಳು ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಆನ್‍ಲೈನ್ ಮೂಲಕವೇ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಈಗಾಗಲೇ ಅನುಮತಿ ಸಿಕ್ಕಿದೆ. ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳಿಂದ ಇನ್ನು ಈ ಬಗ್ಗೆ ಒಪ್ಪಿಗೆ ಸಿಕ್ಕಿಲ್ಲ ಎಂದು ಅವರು ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin