ಈ ಬಾರಿಯ ದಸರಾ ಉದ್ಘಾಟನೆ ಮಾಡಲಿರುವ ಕವಿ ಚನ್ನವೀರ ಕಣವಿಯವರ ವಿಶೇಷ ಸಂದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

kanavi-kavi

ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನೆಗೆ 90ರ ಹೊಸ್ತಿಲಲ್ಲಿರುವ ಹೊಸಗನ್ನಡ ಕಾವ್ಯ ಯುಗದ ಬಹುದೊಡ್ಡ ಕವಿ ನಾಡೋಜ ಡಾ.ಚೆನ್ನವೀರ ಕಣವಿಯವರನ್ನು ಆಯ್ಕೆ ಮಾಡುವ ಮೂಲಕ ರಾಜ್ಯ ಸರ್ಕಾರ ಈ ಬಾರಿಯ ದಸರಾ ಮಹೋತ್ಸವಕ್ಕೆ ಘನತೆಯನ್ನೂ ತಂದುಕೊಟ್ಟಿದೆ. ವಿಶ್ವ ವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ ಜಯಭಾರತಿ, ಕರುನಾಡ ಸರಸ್ವತಿ..
ಎಂದು ಕರ್ನಾಟಕದ ಹಿರಿಮೆಯನ್ನು ಎತ್ತಿ ಹಿಡಿದ ನಾಡಿನ ಹೆಮ್ಮೆಯ ಹಿರಿಯ ಕವಿಗೆ ಈ ಅವಕಾಶ ಕಲ್ಪಿಸಿರುವುದು ಸಮಸ್ತ ಕನ್ನಡಗರಿಗೆ ಸಂತಸ ತಂದಿದೆ.ಪರಿಸರ, ಪ್ರೀತಿ, ಪ್ರೇಮ, ದಾಂಪತ್ಯದಂತಹ ವಿಷಯಗಳನ್ನು ಮೆಲುದನಿಯಲ್ಲಿಯೂ, ಭ್ರಷ್ಟಾಚಾರ ಮತ್ತು ಸಾಮಾಜಿಕ ವಿಚಾರಗಳನ್ನು ಗಡುಸಾಗಿ,
ವಿಡಂಬನಾತ್ಮಕವಾಗಿ ಹೇಳುವ ಕಣವಿ ತಮ್ಮ ತಂತ್ರಗಾರಿಕೆಯಿಂದಲೇ ಕನ್ನಡಿಗರಿಗೆ ಹತ್ತಿರವಿರುವವರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿರುವ, ಕಾವ್ಯ ಶಿಲ್ಪವನ್ನು ತನ್ಮಯತೆಯಲ್ಲಿ ಕಡೆಯುವ ಕಲೆಗಾರಿಕೆಯ ಚೆಂಬೆಳಕಿನ ಕಣವಿ ಅವರನ್ನು ಈ ಸಂದರ್ಭದಲ್ಲಿ ಈ ಸಂಜೆ ಮಾತನಾಡಿಸಿದಾಗ…
ದಸರಾ ಉದ್ಘಾಟನೆ ಗೌರವ ದೊರೆತಿರುವ ಬಗ್ಗೆ ನಿಮ್ಮ ಅನಿಸಿಕೆ?
ಜಾಗತಿಕ ಮಟ್ಟದಲ್ಲಿ ನಡೆಯುವ ಸಾಂಸ್ಕøತಿಕ ಹಬ್ಬವನ್ನು ಉದ್ಘಾಟಿಸಲು ನನ್ನನ್ನು ಆಹ್ವಾನಿಸಿರುವುದು ಬಹಳ ದೊಡ್ಡ ಗೌರವ. ಖುದ್ದು ಮುಖ್ಯಮಂತ್ರಿಯವರೇ ಕರೆ ಮಾಡಿ ತಾವು ದಸರಾ ಉದ್ಘಾಟಿಸಬೇಕು ಎಂದು ಕೇಳಿಕೊಂಡಾಗ ಮನಸ್ಸಿಗೆ ಒಂದು ಕ್ಷಣ ಏನೂ ತೋಚದಂತಾಗಿತ್ತು.ನಾಡು-ನುಡಿ, ಸಾಂಸ್ಕೃತಿ  ಪರಂಪರೆಯ ಮುಂದುವರಿಕೆಯ ಹಬ್ಬವಾಗಿರುವುದರಿಂದ ಯಾರೇ ಆಯ್ಕೆಯಾಗಿದ್ದರೂ ಸಂತೋಷ ಪಡುತ್ತಿದ್ದೆ. ದಸರಾ ಉತ್ಸವದಲ್ಲಿ ಕುವೆಂಪು, ಹಾ.ಮಾ.ನಾಯಕ್ ಅವರ ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದೆ. ಒಮ್ಮೆ ನಾನೇ ಕವಿಗೋಷ್ಠಿಯ ಅಧ್ಯಕ್ಷನಾಗಿದ್ದೆ. ಇದೀಗ 11 ದಿನಗಳು ನಡೆಯುವ ಉತ್ಸವಕ್ಕೆ ಚಾಲನೆ ನೀಡುವ ದೊಡ್ಡ ಗೌರವ ದೊರೆತಿರುವುದು ತುಂಬಾ ಸಂತೋಷವಾಗಿದೆ.
ವ್ಯವಸ್ಥೆಯ ಇಂದಿನ ಪರಿಸ್ಥಿತಿಗೆ ಶಿಕ್ಷಣವೂ ಸೇರಿದಂತೆ ಯಾವ ಅಂಶಗಳನ್ನು ಗುರುತಿಸುತ್ತೀರಿ?
ಯೋಗ್ಯವಾದ ಶಿಕ್ಷಣ ಸಿಗದೆ ಇರುವುದು ಕಾರಣವಾಗುತ್ತದೆ. ತಂದೆ-ತಾಯಿಗಳು ಮಕ್ಕಳಿಗೆ ಆಸ್ತಿ ಮಾಡಿಟ್ಟರೆ ಹಾದಿತಪ್ಪುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇಂಥ ಪ್ರವೃತ್ತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಪರಿವರ್ತಿಸುವ ಪರಿಪಾಠ ಬೆಳೆಯಬೇಕಿದೆ. ಈ ಬಗ್ಗೆ ಪೋಷಕರಿಗೆ ಗ್ರಾಮ ಪಂಚಾಯಿತಿಗಳ ಮೂಲಕ ಅರಿವು ಮೂಡಿಸುವ ಕೆಲಸ ಆಗಬೇಕು. 30-40ರ ದಶಕದಲ್ಲಿ ಧಾರವಾಡದ 18 ಹಳ್ಳಿಗಳನ್ನು ಒಳಗೊಂಡಂತೆ ಗರಗವನ್ನು ಕೇಂದ್ರವಾಗಿ ಮಾಡಿಕೊಂಡು ಸ್ವ-ಉದ್ಯೋಗಿಗಳಾಗಲು ಚರಕದಿಂದ ನೂಲು ನೇಯುವುದು, ಬಟ್ಟೆ ತಯಾರಿಸಿಕೊಳ್ಳುವುದು, ಚಿತ್ರಕಲೆ ಇತ್ಯಾದಿ ಹೇಳಿಕೊಡಲಾಗುತ್ತಿತ್ತು.

ಇಂದು ಯಂತ್ರಗಳು ಬಂದು ಕೈಮಗ್ಗವನ್ನು ನುಂಗಿವೆ.ಒಕ್ಕಲುತನದಲ್ಲಿ ಸ್ವಂತ ಉದ್ಯೋಗಕ್ಕೆ ಬಹಳಷ್ಟು ಅವಕಾಶಗಳಿವೆ. ಅದರಲ್ಲಿಯೇ ಹೊಸ ಹೊಸ ಸಂಶೋಧನೆಗಳನ್ನು ಮಾಡಿ ಪ್ರಗತಿ ಸಾಧಿಸಬೇಕು. ಈ ರೀತಿಯ ಮಾಹಿತಿಗಳನ್ನು ಶಾಲಾ-ಕಾಲೇಜು ಮಟ್ಟದಲ್ಲಿಯೇ ಮನಮುಟ್ಟುವಂತೆ ಹೇಳಿಕೊಡಬೇಕು. ಸಮಾಜಕ್ಕೆ ನನ್ನಿಂದ ಏನು ಉಪಯೋಗವಾಗಿದೆ ಎಂದು ಚಿಂತಿಸುವ ಮನಸ್ಸುಗಳಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿದ್ದಂತಹ ಒಬ್ಬ ಯೋಗ್ಯ ಮುಖಂಡನಿಲ್ಲ. ಪರಸ್ಪರ ವೈರುಧ್ಯಗಳೇ ಹೆಚ್ಚಾಗಿದ್ದು, ನಿಸ್ವಾರ್ಥದಿಂದ ಸಮಾಜಮುಖಿ ಕೆಲಸ ಮಾಡುವವರಿಲ್ಲದಂತಾಗಿದೆ.

ಕೌಶಲ್ಯಾಧಾರಿತ ಮತ್ತು ವೃತ್ತಿ ಆಧಾರಿತ ಶಿಕ್ಷಣ ಪ್ರಾಥಮಿಕ ಹಂತದಲ್ಲಿ ಸಿಗುತ್ತಿಲ್ಲವಾದ್ದರಿಂದ ನಿರುದ್ಯೋಗ ಸೃಷ್ಟಿಯಾಗುತ್ತಿರುವುದನ್ನು ಹೇಗೆ ಪ್ರತಿಪಾದಿಸುತ್ತೀರಿ? ಕೇವಲ ಏಕರೂಪ ಶಿಕ್ಷಣ ಪದ್ಧತಿಯಿಂದ ಎಲ್ಲವೂ ಸುಧಾರಣೆಯಾಗುತ್ತದೆಯೇ?
ನೀವು ಪ್ರಸ್ತಾಪಿಸಿದಂತೆ ಕೌಶಲ್ಯಾಧಾರಿತ ಮತ್ತು ವೃತ್ತಿ ಆಧಾರಿತ ಶಿಕ್ಷಣವನ್ನು ಪ್ರಾಥಮಿಕವಾಗಿ ಕಲಿಸುವ ಪದ್ಧತಿಯೇ ನಮ್ಮಲ್ಲಿಲ್ಲ. ಜೀವನ ವಿಕಾಸಕ್ಕೆ ಬೇಕಾಗುವ ಶಿಕ್ಷಣ ಇಂದು ದೊರೆಯುತ್ತಿಲ್ಲ. ಯೋಗ್ಯವಾದ ಶಿಕ್ಷಣ ದೊರೆಯದಿರುವುದರಿಂದ ಇಂದು ಈ ಪರಿಸ್ಥಿತಿಗೆ ಕಾರಣವಾಗಿದೆ. ಹಾಗಾಗಿ ಶಿಕ್ಷಣ ಪದ್ದತಿಯೇ ಆಮೂಲಾಗ್ರವಾಗಿ ಬದಲಾಗಬೇಕು. ಜೊತೆಗೆ ಏಕರೂಪ ಶಿಕ್ಷಣ ಪದ್ಧತಿಯೂ ಜಾರಿಯಾಗಬೇಕು, ಇದರಿಂದ ಮೇಲು-ಕೀಳೆಂಬ ಭೇದ-ಭಾವ ಹೋಗಲಾಡಿಸಲು ಸಹಕಾರಿಯಾಗುತ್ತದೆ. ಈ ಬಗ್ಗೆ ಸರ್ಕಾರಗಳು ವಿಶೇಷ ಲಕ್ಷ್ಯವಹಿಸಬೇಕು.

ತಜ್ಞರಾದವರು ಹೆಚ್ಚಿನ ಆಸ್ಥೆ ವಹಿಸಿ ಸರ್ಕಾರದ ಗಮನಸೆಳೆಯಬೇಕು. ಬೇರೆ ದೇಶಗಳಂತೆ ಪ್ರೈಮರಿ ಹಂತದಿಂದಲೇ ವೃತ್ತಿಪರ ಶಿಕ್ಷಣವು ಕಲಿಕೆಯ ಭಾಗವಾದರೆ ಉದ್ಯೋಗ ಸಮಸ್ಯೆ ತಗ್ಗಿಸಬಹುದು. ಕಮ್ಮಾರಿಕೆ, ಕುಂಬಾರಿಕೆ ಇತ್ಯಾದಿಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೇವೆ. ಗಾಂಧಿ ಕನಸಿನ ಗುಡಿಕೈಗಾರಿಕೆಗೆ ಒತ್ತು ನೀಡಬೇಕು, ಇವುಗಳಲ್ಲಿ ತೊಡಗಿಸಿಕೊಳ್ಳುವಂತೆ ಯುವ ಜನತೆಯನ್ನು ಪ್ರೇರೇಪಿಸಬೇಕು, ಕಡೆಪಕ್ಷ ಹೊಲ-ಗದ್ದೆ ಇರುವವರಾದರೂ ಸರ್ಕಾರಿ ನೌಕರಿಗೆ ಆಸೆಪಡದೆ ಸ್ವ-ಉದ್ಯೋಗದಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತಾಗಬೇಕು.
ಸಾಹಿತಿಗಳು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ಕೊಡುವ ಬಗ್ಗೆ ನಿಮ್ಮ ಅಭಿಪ್ರಾಯವೇನು?
ದೇವರು ಸರ್ವಾಂತರ್ಯಾಮಿ. ಅದೇ ರೀತಿ ಎಲ್ಲ ಕ್ಷೇತ್ರಗಳಲ್ಲೂ ರಾಜಕೀಯ ಬೆರೆತುಹೋಗಿದೆ. ರಾಜಕೀಯ ಬೇರ್ಪಡಿಸಿ ಯಾವ ಕ್ಷೇತ್ರವನ್ನು ನೋಡಲು ಆಗುವುದಿಲ್ಲ. ಹಾಗಾಗಿ ರಾಜಕೀಯದಲ್ಲಿ ಸಾಹಿತ್ಯವನ್ನು ಕರಗಿಸಿ ಮರುಹುಟ್ಟು ಪಡೆಯುವಂತೆ ಮಾಡಬೇಕು, ಏಕೆಂದರೆ ರಾಜಕೀಯದ ವೇಗ ಕರುಗುವಂತಹದಲ್ಲ. ಸಾಮಾಜಿಕ ಚರ್ಚಿತ ವಿಷಯಗಳ ಬಗ್ಗೆ ಮಾತನಾಡುವಾಗ ಯಾವುದೇ ಪಕ್ಷಕ್ಕೆ ಸೀಮಿತವಾಗದೆ ವಿವೇಚನೆಯಿಂದ ನಡೆದುಕೊಳ್ಳಬೇಕು.
ಇಂದಿನ ಮಹಿಳಾ ಸಾಹಿತ್ಯವನ್ನು ಹೇಗೆ ಪರಿಭಾವಿಸುತ್ತೀರಿ?
ಮಹಿಳೆಯರಲ್ಲಿ ವಿಶಿಷ್ಟವಾದ ಅನುಭವಗಳು ಅಡಕವಾಗಿರುತ್ತವೆ. ಮಕ್ಕಳನ್ನು ಹೆರುವುದು, ಬೆಳೆಸುವುದು, ಕುಟುಂಬ ನಿರ್ವಹಣೆ, ಮನೆಗೆಲಸಗಳು ಇವೆಲ್ಲ ಮಹಿಳೆಯರ ವಿಶಿಷ್ಟ ಅನುಭವಗಳಾಗುತ್ತವೆ. ಅವರ ಅನುಭವಗಳನ್ನು ಸಾಹಿತ್ಯದ ಮೂಲಕ ವಿಶೇಷವಾಗಿಯೇ ದಾಖಲಿಸಿರುತ್ತಾರೆ. ಹಾಗಾಗಿ ಮಹಿಳಾ ಸಾಹಿತ್ಯವೆಂದು ಯಾವುದೇ ಕಾರಣಕ್ಕೂ ಭೇದ ಮಾಡಲು ಬರುವುದಿಲ್ಲ. ಇಂತಹ ವಿಶೇಷ ಅನುಭವಗಳನ್ನು ಹೊಂದಿರುವ ಹೆಣ್ಣು ಮಕ್ಕಳನ್ನು ಮತ್ತು ಅವರ ಸಾಹಿತ್ಯವನ್ನು ಬಹಳ ವರ್ಷಗಳಿಂದಲೂ ಹಿಂದಕ್ಕೆ ತಳ್ಳಲಾಗುತ್ತಿದೆ. ಇದು ಪುರುಷರ ದಬ್ಬಾಳಿಕೆ. ಇದರ ನಡುವೆಯೂ ಮಹಿಳೆಯರು ತಮ್ಮ ಛಾಪು ಮೂಡಿಸುತ್ತಿರುವುದು ಗಮನಾರ್ಹ.
ಇದುವರೆಗೂ ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ದೊರೆತಿವೆ. ಆದರೆ ಜ್ಞಾನಪೀಠ ಸೇರಿದಂತೆ ಉನ್ನತ ಪ್ರಶಸ್ತಿಗಳು ಕನ್ನಡದ ಲೇಖಕಿಯರಿಗೆ ದೊರೆತಿಲ್ಲ. ಪುರುಷ ಸಾಹಿತ್ಯಕ್ಕೆ ಸಮಾನವಾಗಿ ಮಹಿಳಾ ಸಾಹಿತ್ಯ ರಚನೆಯಾಗಿಲ್ಲವೇ?
ಪುರುಷ ಸಮಾನ ಸಾಹಿತ್ಯಗಳು ರಚನೆಯಾಗಿಲ್ಲ ಎಂದು ಹೇಳಲಾಗುವುದಿಲ್ಲ. ಆದರೆ ರಚನೆಯಾಗಿರುವ ಸಾಹಿತ್ಯವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ವ್ಯತ್ಯಾಸಗಳಾಗಿವೆ. ಕನ್ನಡ ಲೇಖಕಿಯರ ಸಾಹಿತ್ಯ ಹೆಚ್ಚಿನ ಪ್ರಮಾಣದಲ್ಲಿ ಹತ್ತಾರು ಭಾಷೆಗೆ ಅನುವಾದಗೊಳ್ಳಬೇಕು. ಪ್ರಮುಖವಾಗಿ ಹಿಂದಿ, ಇಂಗ್ಲಿಷ್‍ಗೆ ಅನುವಾದವಾಗಬೇಕು ಇಲ್ಲದಿದ್ದರೆ ಅದರ ಹಿರಿಮೆ-ಗರಿಮೆಯನ್ನು ರಾಷ್ಟ್ರಮಟ್ಟದಲ್ಲಿ ತಿಳಿಯುವುದಾದರೂ ಹೇಗೆ? ಅಲ್ಲದೆ ಒಟ್ಟು ಕೊಡುಗೆಯನ್ನು ಪರಿಗಣಿಸಲಾಗುತ್ತದೆ ಮತ್ತು ಈ ವಿಷಯದಲ್ಲಿ ರಾಜಕೀಯವನ್ನು ಬೆರೆಸುವುದರಿಂದ ಕೂಡ ಕೈ ತಪ್ಪಿರಬಹುದು.
ಈ ವ್ಯವಸ್ಥೆ ಗೆ ಹೊಸ ಆಯಾಮ ನೀಡಲು ಯಾರಿಂದ ಯಾವ ಸ್ವರೂಪದ ಚಳವಳಿ ನಡೆಯಬೇಕು?
ದೇಶದ ಒಟ್ಟು ಅಭಿವೃದ್ದಿಯ ಬಗ್ಗೆ ಎಲ್ಲರೂ ಚಿಂತಿಸಬೇಕು, ಭ್ರಷ್ಟಾಚಾರದ ವಿರುದ್ಧ ಹೊಸ ರೀತಿಯ ಚಳವಳಿ ನಡೆಯಬೇಕು. ಜೆ.ಪಿ ಕಾಲದಲ್ಲಿ ನಡೆದ ಭಾಷಾ ಚಳವಳಿ ಮಾದರಿಯಲ್ಲಿ ಆಂದೋಲನಗಳು ನಡೆಯುವ ಅವಶ್ಯಕತೆ ಇದೆ. ಮಹದಾಯಿ ಹೋರಾಟವನ್ನು ಕಳೆದ ಒಂದು ವರ್ಷದಿಂದ ನಡೆಸುತ್ತಾ ಬಂದಿದ್ದರೂ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆಯೇ ವಿನಃ ಬಗೆಹರಿಯುತ್ತಿಲ್ಲ. ಇದು ನೋವಿನ ಸಂಗತಿ.ಸಮಗ್ರ ಅಭಿವೃದ್ದಿಗೆ ಕಾರಣವಾಗುವ ರೀತಿಯಲ್ಲಿ ಎಲ್ಲ ಕ್ಷೇತ್ರದಲ್ಲೂ ಆಂದೋಲನ ದೊಡ್ಡ ಪ್ರಮಾಣದಲ್ಲಿ ಆಗಬೇಕು, ಅಣ್ಣಾ ಹಜಾರೆಯಂತಹವರು ಪ್ರತಿ ಹಳ್ಳಿಗಳ್ಳಲ್ಲಿ ಹುಟ್ಟಬೇಕು, ನಿಷ್ಪಕ್ಷಪಾತವಾಗಿ ಎಲ್ಲ ಪಕ್ಷಗಳನ್ನೂ ಒಂದುಗೂಡಿಸಿ ನಾಡನ್ನು ಮುನ್ನಡೆಸುವ ನಾಯಕರ ಅವಶ್ಯಕತೆ ಇದೆ. ಸರ್ಕಾರದ ಕಣ್ಣು-ಕಿವಿ ಮಂದ. ಹಾಗಾಗಿ ಸಮಗ್ರ ಅಭಿವೃದ್ದಿ ಕುರಿತಂತೆ ಸರ್ಕಾರಗಳನ್ನು ಎಚ್ಚರಿಸುವ ಕೆಲಸಗಳು ನಿರಂತರವಾಗಿ ಆಗಬೇಕು.
ಯುವ ಜನಾಂಗಕ್ಕೆ ನಿಮ್ಮ ಸಂದೇಶಗಳೇನು?
ನಾವು ಯುವಕರಾಗಿದ್ದಾಗ ಇದ್ದ ಪರಿಸ್ಥಿತಿಗಿಂತ ಪ್ರಸ್ತುತ 21ನೇ ಶತಮಾನದಲ್ಲಿ ಬಹಳಷ್ಟು ಬದಲಾಗಿದೆ. ಇಂದಿನ ಯುವ ಜನಾಂಗ ಮೈತುಂಬ ಕಣ್ಣಾಗಿರಬೇಕು. ತಂತ್ರಜ್ಞಾನ ಮತ್ತು ವೈಜ್ಞಾನಿಕವಾಗಿ ಬೆಳೆದಂತೆಲ್ಲ ಜೀವನ ಶೈಲಿಯೂ ಬದಲಾಗಿದೆ. ಯುವಕರನ್ನು ಹಾದಿ ತಪ್ಪಿಸುವ ಶಕ್ತಿಗಳು ಅವರನ್ನು ತಮ್ಮತ್ತ ಸೆಳೆಯಲು ಪ್ರಬಲವಾಗಿ ಕೆಲಸ ಮಾಡುವುದರಿಂದ ಎಚ್ಚರಿಕೆ ಮತ್ತು ವಿವೇಚನೆಯಿಂದ ಪ್ರಬುದ್ಧತೆ ಮೆರೆಯಬೇಕು. ದೊಡ್ಡ ದೊಡ್ಡ ಪದವಿ ಗಳಿಸಿದರೂ ಉದ್ಯೋಗವಿಲ್ಲ ಎಂದು ಪರಿತಪಿಸುವ ಮನಸ್ಥಿತಿಯಿಂದ ಯುವ ಜನತೆ ಹೊರಬಂದು ಸ್ವಉದ್ಯೋಗ ಮಾಡಿ ಹೊಸ ಹೊಸ ಆವಿಷ್ಕಾರಗಳಿಗೆ ಸಂಬಂಧಿಸಿದಂತೆ ಸ್ವಸಾಮಥ್ರ್ಯದಿಂದ ಮುನ್ನಡೆದರೆ ಅದಕ್ಕೆ ಬೆಲೆ ಇದ್ದೇ ಇರುತ್ತದೆ. ಇಂಥ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇಂದಿನ ಜಾಗತೀಕರಣದ ಕಾಲಘಟ್ಟದಲ್ಲಿ ಜಗತ್ತೇ ಒಂದು ಹಳ್ಳಿಯಾಗಿದೆ. ಯುವ ಜನತೆ ಹಳ್ಳಿಯನ್ನೇ ಜಾಗತಿಕ ಕೇಂದ್ರವನ್ನಾಗಿ ಮಾಡಿಕೊಂಡು ಉದ್ಯಮಶೀಲರಾದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.

1928 ಜೂನ್ 28ರಂದು ಗದಗ ( ಆಗಿನ ಧಾರವಾಡ) ಜಿಲ್ಲೆಯ ಹೊಂಬಳದ ಶಿಕ್ಷಕ ಸಂಕರೆಪ್ಪ-ಪಾರ್ವತವ್ವ ದಂಪತಿಯ ಪುತ್ರನಾಗಿ ಜನಿಸಿದ ಕಣವಿ, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ತಮ್ಮದೇ ಛಾಪು ಮೂಡಿಸಿದವರು. ಅದಕ್ಕೆ ಅವರ 56ಕ್ಕೂ ಹೆಚ್ಚು ಕೃತಿಗಳೇ ಸಾಕ್ಷಿ. ಧಾರವಾಡದಲ್ಲಿ 1952ರಲ್ಲಿ ಎಂಎ ಮುಗಿಸಿ ವಿವಿ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿ, ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಜೀವಧ್ವನಿ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಹಾಸನದಲ್ಲಿ ನಡೆದ 65ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ, ನಾಡೋಜ, ಪಂಪ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಗೌರವಗಳು ದೊರೆತಿವೆ.ಇಷ್ಟಾದರೂ ತಮ್ಮ ನೆಲದಲ್ಲಿ ನೀರಿಗಾಗಿ ಜನ ಪರಿತಪಿಸುತ್ತಿರುವುದು, ಹೋರಾಟಗಳು ವಿಫಲವಾಗುತ್ತಿರುವುದು ಸರ್ಕಾರಗಳ ನಿರ್ಲಕ್ಷ್ಯತನಗಳ ಬಗ್ಗೆ ಹಿರಿಯ ಜೀವ ಕಣವಿಯವರಿಗೆ ಅಪಾರ ನೋವಿದೆ. ಅದನ್ನವರು ತಮ್ಮ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ.

► Follow us on –  Facebook / Twitter  / Google

Facebook Comments

Sri Raghav

Admin