ಈ ಬಾರಿ ಚುನಾವಣೆಯಲ್ಲಿ ಮಾನದಂಡವಾಗಲಿವೆ ಹಿಂದುತ್ವ v/s ಅಭಿವೃದ್ಧಿ

ಈ ಸುದ್ದಿಯನ್ನು ಶೇರ್ ಮಾಡಿ

Hindutva--02

-ರವೀಂದ್ರ.ವೈ.ಎಸ್.
ಬೆಂಗಳೂರು,ಡಿ.6-ಹಿಂದೆಂದು ಕಾಣದ ತುರುಸಿನ ಸ್ಪರ್ಧೆಗೆ ಸಾಕ್ಷಿಯಾಗಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಹಿಂದುತ್ವ ಹಾಗೂ ಅಭಿವೃದ್ದಿ ಮಾನದಂಡದ ಮೇಲೆ ನಡೆಯುವ ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸಿವೆ. ಕರ್ನಾಟಕ ವಿಧಾನಸಭೆ ಚುಣಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಮುಕ್ತ ರಾಜ್ಯವಾಗಿ ಮಾಡುವ ಹುಮ್ಮಸಿನಲ್ಲಿದೆ ಬಿಜೆಪಿ. ದೇಶದ ವಿವಿಧೆಡೆ ಸಾಲು ಸಾಲು ಸೋಲಿನಿಂದ ದಿಕ್ಕೆಟ್ಟಿರುವ ಕಾಂಗ್ರೆಸ್ ಇಲ್ಲಿಯೇ ಗೆದ್ದು 2019ರ ಲೋಕಸಭೆ ಚುನಾವಣೆಗೆ ಗೆಲುವಿನ ಮುನ್ನುಡಿ ಬರೆಯಬೇಕೆಂಬ ಹಪಾಹಪಿಯಲ್ಲಿದೆ.ಹೀಗೆ ಎರಡು ರಾಷ್ಟ್ರೀಯ ಪಕ್ಷಗಳು ಹಿಂದುತ್ವ, ಅಭಿವೃದ್ಧಿ ಮಾನದಂಡದ ಮೇಲೆ ಚುನಾವಣೆಗೆ ಹೊರಟರೆ ಪ್ರಾದೇಶಿಕ ಪಕ್ಷ ಜೆಡಿಎಸ್ ಕನ್ನಡಿಗರ ಆಸ್ಮಿತೆಯನ್ನು ಮುಂದಿಟ್ಟುಕೊಂಡು ಮತ ಬೇಟೆಗೆ ಹೊರಟಿದೆ.

ಸದ್ಯದ ರಾಜಕೀಯ ಸ್ಥಿತಿಗತಿಗಳನ್ನು ಅವಲೋಕಿಸಿದರೆ ಬಿಜೆಪಿ ಹಿಂದುತ್ವ ಅಜೆಂಡದ ಮೇಲೆ ಚುನಾವಣಾ ರಣ ಕಹಳೆ ಮೊಳಗಿಸಲು ಸಜ್ಜಾಗಿದೆ. ಇದಕ್ಕೆ ಮುನ್ನುಡಿ ಎಂಬಂತೆ ಗುಜರಾತ್‍ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಸಿದ್ದರೂ ಜಾತಿ ರಾಜಕಾರಣವೇ ಮೇಳೈಸುತ್ತದೆ. ಹಿಂದುತ್ವ ಟ್ರಂಪ್ ಕಾರ್ಡ್ ಬಳಿಸಿ ಹಿಂದು ಮತಗಳ ದೃಢೀಕರಣಗೊಳಿಸುವುದು ಬಿಜೆಪಿ ಲೆಕ್ಕಾಚಾರ. ಗುಜರಾತ್ ಫಲಿತಾಂಶದಲ್ಲಿ ಇದರ ಯಶಸ್ಸು ಸಿಕ್ಕರೆ ರಾಜ್ಯದಲ್ಲೂ ಹಿಂದುತ್ವದ ಪ್ರಯೋಗ ಆರಂಭವಾಗಲಿದೆ.

ಸಿಕ್ಕಿದೆ ಮುನ್ಸೂಚನೆ:

ಈಗಾಗಲೇ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹಾಗೂ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ಬೆಂಕಿ ಉಗುಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಹೇಗೆ ಹಿಂದು ಟ್ರಂಪ್ ಕಾರ್ಡ್ ಮತಗಳನ್ನು ಕ್ರೋಢೀಕರಿಸಿದರೋ ಅದೇ ಮಾದರಿಯಲ್ಲಿ ಬಿಜೆಪಿ ತನ್ನ ಮತ ಪೆಟ್ಟಿಗೆಯನ್ನು ಭದ್ರಪಡಿಸಿಕೊಳ್ಳಲು ಮುಂದಾಗಿದೆ.

ನನಗೆ ಪಕ್ಷಕ್ಕಿಂತ ನನ್ನ ದೇಶ, ಧರ್ಮ ಮುಖ್ಯ. ಇದಕ್ಕಾಗಿ ಯಾವುದೇ ಬೆಲೆ ತೆತ್ತಲು ನಾನು ಸಿದ್ಧ ಎಂದು ಪ್ರತಾಪ್ ಸಿಂಹ ಹೇಳಿರುವುದು ಬಿಜೆಪಿ ಹಿಂದುತ್ವದತ್ತ ವಾಲುತ್ತದೆ ಎಂಬ ಮುನ್ಸೂಚನೆಯನ್ನು ನೀಡಿದೆ. ಇನ್ನು ಅನಂತಕುಮಾರ್ ಹೆಗಡೆ ಕೂಡ ಹೋದ ಕಡೆಯಲೆಲ್ಲ ಹಿಂದುತ್ವವನ್ನೇ ಬಳಸುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಎರಡು ಪಕ್ಷಗಳು ಹಠಕ್ಕೆ ಬಿದ್ದವರಂತೆ ಓಲೈಸುತ್ತಿರುವುದು ಬಿಜೆಪಿ ಕಣ್ಣು ಕೆಂಪಾಗುವಂತೆ ಮಾಡಿದೆ. ಇದಕ್ಕಾಗಿ ಹಿಂದು ಮತಗಳು ಆಚೀಚೆ ಛಿದ್ರವಾಗದಂತೆ ಕಾರ್ಯತಂತ್ರವನ್ನು ರೂಪಿಸುತ್ತಿದೆ.

ಕೈಕೊಡದ ಫಲ:

ರಾಜ್ಯ ಸರ್ಕಾರದ ವಿರುದ್ಧ ಎಷ್ಟೇ ಹೋರಾಟ ನಡೆಸಿದರೂ ಬಿಜೆಪಿಗೆ ನಿರೀಕ್ಷಿತ ಫಲ ಸಿಗುತ್ತಿಲ್ಲ. ಮುಖ್ಯಮಂತ್ರಿ ಸೇರಿದಂತೆ ಸಚಿವರ ವಿರುದ್ದ ಭ್ರಷ್ಟಾಚಾರ, ಹಗರಣಗಳ ದಾಖಲೆಗಳನ್ನು ಬಿಡುಗಡೆ ಮಾಡಿದರೂ ಹೊಳೆಯಲ್ಲಿ ಹುಣಸೆ ಹಣ್ಣು ಹಿಂಡಿದಂತಾಗಿದೆ ಎಂಬುದು ಬಿಜೆಪಿ ಲೆಕ್ಕಾಚಾರ. ನವಕರ್ನಾಟಕ ಪರಿವರ್ತನಾ ರಥಯಾತ್ರೆ ವೇಳೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಪ್ರಸ್ತಾಪಿಸಿದರೂ ಮತದಾರ ಮಾತ್ರ ಸೊಪ್ಪು ಹಾಕುತ್ತಿಲ್ಲ. ಬದಲಿಗೆ ಇನ್ನು ಮುಂದೆ ಸರ್ಕಾರದ ಹಗರಣಗಳ ಮಾತನಾಡುವ ಬದಲು ಹಿಂದುತ್ವದ ಮೂಲಕವೇ ಮತಯಾಚನೆ ಮಾಡಬೇಕೆಂದು ಹೈಕಮಾಂಡ್ ಸೂಚನೆ ಕೊಟ್ಟಿದೆ.

ಇದಕ್ಕೆ ನಿದರ್ಶನ ಎಂಬಂತೆ ಇತ್ತೀಚೆಗೆ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಹನುಮ ಜಯಂತಿ ಆಚರಣೆಗೆ ಅವಕಾಶ ನೀಡದಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ರೋಷಾವೇಷ ತೋರಿಸಿದ್ದರು. ಕೇಂದ್ರ ಸಚಿವರಾದ ಅನಂತಕುಮಾರ್ ಹೆಗಡೆ, ಡಿ.ವಿ.ಸದಾನಂದಗೌಡ, ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಇಡೀ ಸಂಘ ಪರಿವಾರ ಸರ್ಕಾರದ ವಿರುದ್ಧ ಕೆರಳಿ ನಿಂತಿತ್ತು. ಬಿಜೆಪಿಗೂ ಮತ್ತು ಹಿಂದುತ್ವಕ್ಕೂ ಸಾಕಷ್ಟು ಅವಿನಾಭಾವ ಸಂಬಂಧವಿದೆ. ಹಿಂದೆ ಪಕ್ಷದ ಹಿರಿಯ ನಾಯಕ ಅಡ್ವಾಣಿ ನೇತೃತ್ವದಲ್ಲಿ ಚುನಾವಣೆ ನಡೆಸಲಾಗಿತ್ತು. ಆದರೆ ಮೋದಿ ಬಂದ ನಂತರ ಹಿಂದುತ್ವ ಪಕ್ಕಕ್ಕಿಟ್ಟು ಅಭಿವೃದ್ದಿ ಮಂತ್ರವನ್ನು ಜಪಿಸಿದ್ದರಿಂದಲೇ 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶತಮಾನದಲ್ಲೇ ಕಂಡರಿಯದ ಸೋಲಿಗೆ ಶರಣಾಯಿತು. ಉತ್ತರ ಪ್ರದೇಶದಲ್ಲಿ ಹಿಂದುತ್ವ ಪ್ರಯೋಗಿಸಿದ್ದರಿಂದ ಭರ್ಜರಿ ಫಲಿತಾಂಶ ಸಿಕ್ಕಿತ್ತು. ಈಗ ಕರ್ನಾಟಕದಲ್ಲೂ ಕೂಡ ಇದೇ ಮಾದರಿ ಅನುಸರಿಸಲು ಬಿಜೆಪಿ ಚಿಂತಕರ ಛಾವಡಿ ಆಲೋಚಿಸಿದೆ.

ಕಾಂಗ್ರೆಸ್ ಅಭಿವೃದ್ಧಿ ಮಂತ್ರ:

ಬಿಜೆಪಿ ಹಿಂದುತ್ವಕ್ಕೆ ವಾಲಿದರೆ ಕಾಂಗ್ರೆಸ್ ಅಭಿವೃದ್ದಿ ಮಂತ್ರ ಪಠಿಸಲು ಮುಂದಾಗಿದೆ. ಐದು ವರ್ಷಗಳಲ್ಲಿ ಜನತೆಗೆ ನೀಡಿದ ಭರವಸೆಗಳು ಎಷ್ಟರ ಮಟ್ಟಿಗೆ ಈಡೇರಿವೆ ಎಂಬುದರ ಮೇಲೆ ಮತಯಾಚನೆ ನಡೆಯಲಿದೆ.  ಯಾವುದೇ ಒಂದು ಧರ್ಮ ಅಥವಾ ಜಾತಿಗೆ ಸೀಮಿತವಾಗದೆ ಜಾತ್ಯತೀತ ಹೆಸರಿನಲ್ಲಿ ಮತಯಾಚಿಸಿ ಅಧಿಕಾರಕ್ಕೆ ಬರುವ ಹುಮ್ಮಸ್ಸಿನಲ್ಲಿದೆ ಕಾಂಗ್ರೆಸ್.  ಜೆಡಿಎಸ್ ಮಾತ್ರ ಪ್ರಾದೇಶಿಕ ಪಕ್ಷ ಎಂಬ ಹಣೆಪಟ್ಟಿ ಅಂಟಿಸಿಕೊಂಡು ನಾಡುನುಡಿ ಜಲ, ಸಂಸ್ಕøತಿ ಹೆಸರಿನಲ್ಲಿ ಮತಯಾಚಿಸಲು ಮುಂದಾಗಿದೆ.

Facebook Comments

Sri Raghav

Admin