ಈ ಬಾರಿ ಚುನಾವಣೆಯಲ್ಲೂ ಸೊರಬದಲ್ಲಿ ಸಹೋದರರ ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Madhu-and-Kumar-Bangarappa-

ಬೆಂಗಳೂರು, ಫೆ.18-ರಾಜ್ಯ ಕಂಡ ಧೀಮಂತ ರಾಜಕಾರಣಿ ವರ್ಣರಂಜಿತ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಕರ್ಮಭೂಮಿ ಸೊರಬ ಈ ಬಾರಿಯೂ ಸಹೋದರರಿಬ್ಬರ ಸ್ಪರ್ಧೆಯಿಂದ ರಾಜ್ಯದ ಗಮನಸೆಳೆಯಲಿದೆ.  ಕಾಂಗ್ರೆಸ್‍ನಲ್ಲಿ ತಮಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಬೇಸರಗೊಂಡಿರುವ ಮಾಜಿ ಸಚಿವ ಕುಮಾರಬಂಗಾರಪ್ಪ ಸದ್ಯದಲ್ಲೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.   ಈಗಾಗಲೇ ಪಕ್ಷ ತೊರೆಯಲು ಬಹುತೇಕ ಮಾನಸಿಕವಾಗಿ ಸಿದ್ಧರಾಗಿರುವ ಕುಮಾರಬಂಗಾರಪ್ಪ 2018ರ ವಿಧಾನಸಭೆ ಚುನಾವಣೆಯಲ್ಲಿ ಸೊರಬದಿಂದ ಸ್ಪರ್ಧಿಸಲಿದ್ದಾರೆ.

ಹಾಲಿ ಜೆಡಿಎಸ್ ಶಾಸಕ ಹಾಗೂ ಕುಮಾರ ಬಂಗಾರಪ್ಪನವರ ಕಿರಿಯ ಸಹೋದರ ಮಧು ಬಂಗಾರಪ್ಪ ವಿರುದ್ಧವೇ ತೊಡೆ ತಟ್ಟಲು ಸಜ್ಜಾಗಿದ್ದಾರೆ. ಬಿಜೆಪಿ ಸೇರ್ಪಡೆ ಸಂಬಂಧ ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಪಕ್ಷಕ್ಕೆ ಬಂದರೆ ಸೂಕ್ತ ಸ್ಥಾನಮಾನದ ಜೊತೆಗೆ ಸೊರಬದಿಂದಲೇ ಟಿಕೆಟ್ ನೀಡುವ ಭರವಸೆ ಕುಮಾರ ಬಂಗಾರಪ್ಪಗೆ ಸಿಕ್ಕಿದೆ.  ಕಳೆದ ಮೂರು ವಿಧಾನಸಭೆ ಚುನಾವಣೆಯಲ್ಲಿ ಸತತವಾಗಿ ಸೋತು ಶಿವಮೊಗ್ಗ ಜಿಲ್ಲೆಯಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಕುಮಾರಬಂಗಾರಪ್ಪ ಹಾಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಮ್ಮ ರಾಜಕೀಯ ಏಳಿಗೆಗೆ ಅಡ್ಡಿಯಾಗಿದ್ದಾರೆಂದು ಮುನಿಸಿಕೊಂಡಿದ್ದಾರೆ. ಹೀಗಾಗಿ ಬಿಜೆಪಿ ಸೇರ್ಪಡೆಯಾಗಲು ಒಲವು ತೋರಿದ್ದಾರೆ.
ಕೆಲವೇ ದಿನಗಳಲ್ಲಿ ತಮ್ಮ ಬೆಂಬಲಿಗರ ಜೊತೆ ಯಡಿಯೂರಪ್ಪ ಸಮ್ಮುಖದಲ್ಲಿ ಕುಮಾರಬಂಗಾರಪ್ಪ ಕೈ ಬಿಟ್ಟು ಕಮಲ ಮುಡಿಗೇರಿಸಿಕೊಳ್ಳುವುದು ಖಚಿತವಾಗಿದೆ.

ಹೊಸತೇನಲ್ಲ:

ಅಂದಹಾಗೆ ಕುಮಾರಬಂಗಾರಪ್ಪ, ಮಧುಬಂಗಾರಪ್ಪ ಮುಖಾಮುಖಿಯಾಗುತ್ತಿರುವುದು ಹೊಸತೇನಲ್ಲ. 2004, 2008 ವಿಧಾನಸಭೆ ಚುನಾವಣೆಯಲ್ಲಿ ಅಣ್ಣ-ತಮ್ಮಂದಿರೇ ತೊಡೆ ತಟ್ಟಿದ್ದರು. ಆದರೆ ಅದೃಷ್ಟ ಕೈಕೊಟ್ಟಿದ್ದರಿಂದ ಎರಡೂ ಚುನಾವಣೆಯಲ್ಲೂ ಪರಾಭವಗೊಂಡಿದ್ದರು.  ಅದರಲ್ಲೂ 2008ರ ವಿಧಾನಸಭೆ ಚುನಾವಣೆಯಲ್ಲಿ ಬಂಗಾರಪ್ಪ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಶಿಕಾರಿಪುರದಿಂದ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿದರೆ, ಕುಮಾರ್ ಬಂಗಾರಪ್ಪ ಕಾಂಗ್ರೆಸ್‍ನಿಂದ ಹಾಗೂ ಎಸ್‍ಪಿ ಯಿಂದ ಮಧು ಬಂಗಾರಪ್ಪ, ಬಿಜೆಪಿಯಿಂದ ಹರತಾಳ್ ಹಾಲಪ್ಪ ಕಣಕ್ಕಿಳಿದಿದ್ದರು.

ಆಗ ರಾಜ್ಯದಲ್ಲಿ ಯಡಿಯೂರಪ್ಪ ಪರ ಅಲೆ ಎದ್ದಿದ್ದರಿಂದ ಅಪ್ಪ, ಮಕ್ಕಳಿಬ್ಬರು ಸೋತಿದ್ದು, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಪುನಃ ಅಣ್ಣತಮ್ಮಂದಿರು ಸೊರಬದಿಂದಲೇ ಸ್ಪರ್ಧಿಸುವ ಮೂಲಕ ಚುನಾವಣೆಯಲ್ಲಿ ಸಂಬಂಧಗಳು ನಗಣ್ಯ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ.

ಹಾಲಪ್ಪಗೆ ಕೋಕ್:

ಯಡಿಯೂರಪ್ಪ ಬಣದಲ್ಲಿ ಮೊದಲಿನಿಂದಲೂ ಗುರುತಿಸಿಕೊಂಡಿರುವ ಹರತಾಳ್ ಹಾಲಪ್ಪಗೆ ಸೊರಬದಿಂದ ಪಕ್ಕದ ಸಾಗರ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಈ ಹಿಂದೆ ಕ್ಷೇತ್ರ ಪುನರ್ ವಿಂಗಡಣೆಗೂ ಮೊದಲು ಹೊಸ ನಗರದಿಂದ ಸ್ಪರ್ಧಿಸಿ ವಿಜೇತರಾಗಿದ್ದ ಹಾಲಪ್ಪ ಬಳಿಕ ಸೊರಬ್ಬಕ್ಕೆ ಶಿಫ್ಟ್ ಆಗಿದ್ದರು. 2008ರ ವಿಧಾನಸಭೆ ಚುನಾವಣೆಯಲ್ಲಿ ಸಹೋದರರಿಬ್ಬರ ಸ್ಪರ್ಧೆಯಲ್ಲಿ ಹಾಲಪ್ಪ ಗೆದ್ದು ಸಚಿವ ಸಂಪುಟಕ್ಕೂ ಸೇರ್ಪಡೆಯಾಗಿದ್ದರು.  ಇದೀಗ ಕುಮಾರಬಂಗಾರಪ್ಪ ಬಿಜೆಪಿಗೆ ಬರುತ್ತಿರುವುದರಿಂದ ಹಾಲಪ್ಪ ಕ್ಷೇತ್ರವನ್ನು ತ್ಯಾಗ ಮಾಡಲು ಸಿದ್ದರಾಗಿದ್ದು, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿರುದ್ಧ ಸ್ಪರ್ಧಿಸಲಿದ್ದಾರೆ.

ಪರಿಷತ್‍ಗೆ ಬೇಳೂರು:

ಇನ್ನು ಸಾಗರ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿದ್ದ ಗೋಪಾಲಕೃಷ್ಣ ಬೇಳೂರಿಗೆ ಟಿಕೆಟ್ ಕೈ ತಪ್ಪುವ ಸಂಭವವಿದ್ದು, ಅವರನ್ನು ವಿಧಾನಪರಿಷತ್‍ಗೆ ನಾಮಕರಣ ಮಾಡುವ ಸಂಭವವಿದೆ. ಈಗಾಗಲೇ ಯಡಿಯೂರಪ್ಪ ಬೇಳೂರು ಜೊತೆ ಮಾತುಕತೆ ನಡೆಸಿದ್ದಾರೆ.   ಆದರೆ ಬೇಳೂರು ಕಾಗೋಡು ತಿಮ್ಮಪ್ಪ ವಿರುದ್ಧ ಸ್ಪರ್ಧಿಸಲೇ ಬೇಕೆಂಬ ಜಿದ್ದಿಗಿಳಿದಿದ್ದಾರೆ. ಸಂಬಂಧದಲ್ಲಿ ಮಾವನಾಗಿದ್ದರೂ ಈ ಹಿಂದೆ ಎರಡು ಬಾರಿ ಅವರ ವಿರುದ್ಧ ಸ್ಪರ್ಧಿಸಿ ವಿಜೇತರಾಗಿದ್ದರು.  2013ರ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ಈಗಲೂ ಸಾಗರದಲ್ಲಿ ಬೇಳೂರು ಹಿಡಿತ ಹೊಂದಿದ್ದಾರೆ. ಅಂತಿಮವಾಗಿ ಅವರನ್ನು ಬಿಎಸ್‍ವೈ ಯಾವ ರೀತಿ ಮನವೊಲಿಸಲಿದ್ದಾರೆ ಎಂಬುದರ ಮೇಲೆ ಹಾಲಪ್ಪ ಭವಿಷ್ಯ ಅಡಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin