ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

HDK-n

ಬೆಂಗಳೂರು, ಫೆ.7- ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಫಲಿತಾಂಶ 2018ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಿದ್ದು, ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.  ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದು ಯಡಿಯೂರಪ್ಪ ಹೇಳಿದ್ದರು. ಅದೇ ರೀತಿ ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಸಿದ್ದರಾಮಯ್ಯನವರು ಪ್ರಶ್ನಿಸಿದ್ದರೂ. ಈ ಎಲ್ಲಾ ವ್ಯಂಗ್ಯಗಳಿಗೆ ಹಾಗೂ ಹೇಳಿಕೆಗಳಿಗೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರು ಉತ್ತರ ನೀಡಿದ್ದಾರೆ. ಯಡಿಯೂರಪ್ಪ ಹೇಳಿದಂತೆ ರಾಜ್ಯ ರಾಜಕೀಯದ ದಿಕ್ಸೂಚಿ ಈ ಚುನಾವಣೆಯಾಗಿದೆ. ಜನ ಜೆಡಿಎಸ್ ಪರವಾಗಿದ್ದಾರೆ ಎಂಬುದನ್ನು ಸಾಬೀತು ಪಡಿಸಿದೆ ಎಂದರು.

ಜೆಡಿಎಸ್ ಅಭ್ಯರ್ಥಿ ರಮೇಶ್‍ಬಾಬು ಗೆಲುವಿನಿಂದಾಗಿ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಬಲಗೊಳಿಸಲು ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯ ಹೆಚ್ಚಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಆರಂಭದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಎದ್ದಿದ್ದು ನಿಜ. ಕಳೆದ ಚುನಾವಣೆಯಲ್ಲಿ ಚೌಡಾರೆಡ್ಡಿ ವಿರುದ್ಧ ಬಂಡಾಯವಾಗಿ ಕಣಕ್ಕಿಳಿದಿದ್ದ ಅರವಿಂದ ಅವರಿಂದ ನಾಮಪತ್ರ ವಾಪಸ್ ತೆಗೆಸುವಾಗ ನಾನು ಭರವಸೆ ನೀಡಿದ್ದೆ. ಮುಂದಿನ ಆಗ್ನೇಯ ಶಿಕ್ಷಕರ ಚುನಾವಣೆಗೆ ಟಿಕೆಟ್ ನೀಡುವುದಾಗಿ ನೀಡಿದ್ದ ಭರವಸೆಯನ್ನು ಉಳಿಸಿಕೊಳ್ಳಲಾಗಲಿಲ್ಲ.

ಇದರಿಂದ ಅರವಿಂದ ಅವರು ರಮೇಶ್‍ಬಾಬು ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದರು. ನನ್ನನ್ನು ಚುನಾವಣಾ ಪ್ರಚಾರಕ್ಕೆ ಹೋಗದಂತೆ ಒತ್ತಡ ಹೇರಿ ತಡೆದಿದ್ದರು. ಆದರೆ, ನನ್ನ ಪರವಾಗಿ ಆರು ಜನ ಶಾಸಕರು ರಮೇಶ್‍ಬಾಬು ಪರ ಕೆಲಸ ಮಾಡಿ ಜಯ ತಂದುಕೊಟ್ಟಿದ್ದಾರೆ. ಇದು 20 ತಿಂಗಳ ಅವಧಿಯ ಸರ್ಕಾರ ನಡೆಸಿ ನಾನು ನೀಡಿದ ಜನಪರ ಯೋಜನೆಗಳ ಫಲ ಎಂದು ಹೇಳಿದರು.  ಬಂಡಾಯ ಅಭ್ಯರ್ಥಿಯಾಗಿ ಅರವಿಂದ್ ಸ್ಪರ್ಧಿಸಿದ್ದರಿಂದ ರಮೇಶ್‍ಬಾಬುಗೆ ಅನುಕೂಲವಾಗಿದೆ. ಹೀಗಾಗಿ ಅರವಿಂದ್ ವಿರುದ್ಧ ಕ್ರಮ ಜರುಗಿಸುವ ಅಗತ್ಯವಿಲ್ಲ. ಫೆ.10ರಂದು ಜೆಡಿಎಸ್ ಸಭೆ ನಡೆಯಲಿದ್ದು, ಒಂದು ವೇಳೆ ಅಲ್ಲಿ ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯ ಕೈಗೊಂಡರೆ ಅದರಂತೆ ನಡೆದುಕೊಳ್ಳುವುದಾಗಿ ತಿಳಿಸಿದರು.  ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಕೋನಾರೆಡ್ಡಿ, ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಜೇತ ಅಭ್ಯರ್ಥಿ ರಮೇಶ್‍ಬಾಬು ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin