ಈ ಬಾರಿ ಮುಂಗಾರು ಮಳೆ ವಾಡಿಕೆ ಪ್ರಮಾಣದಷ್ಟೇ ಆಗುವ ನಿರೀಕ್ಷೆ
ಬೆಂಗಳೂರು, ಮೇ 11-ಈ ಬಾರಿ ಮುಂಗಾರು ಮಳೆ ವಾಡಿಕೆ ಪ್ರಮಾಣದಷ್ಟೇ ಆಗುವ ನಿರೀಕ್ಷೆ ಇದ್ದು, ಮೇ ಅಂತ್ಯದಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಕರ್ನಾಟಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸ ರೆಡ್ಡಿ ತಿಳಿಸಿದರು. ಮುಂಗಾರು ಹಂಗಾಮು ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ನೈರುತ್ಯ ಮಾರುತ ಮುನ್ಸೂಚನೆ ಬಗ್ಗೆ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ವಾಡಿಕೆಯಂತೆ ಆಗಲಿದ್ದು, ಈಗಾಗಲೇ ನೀರಿನ ಅಭಾವ ಎದುರಿಸುತ್ತಿರುವ ಜಲಾಶಯಗಳು ಭರ್ತಿಯಾಗುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಮೇ ಅಂತ್ಯದಲ್ಲಿ ಮುಂಗಾರು ಆರಂಭದ ಮುನ್ಸೂಚನೆ ಕಾಣುತ್ತಿದ್ದು, ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಲಿದೆ. ಜುಲೈ ಅಥವಾ ಆಗಸ್ಟ್ನಲ್ಲಿ ಮಳೆ ಕೊರತೆ ಕಾಡುವ ಸೂಚನೆ ಇದ್ದು, ಆಗಸ್ಟ್ನಲ್ಲಿ ಹೆಚ್ಚಿನ ಮಳೆ ಕೊರತೆ ಆಗದು, ಆದರೆ, ಸೆಪ್ಟೆಂಬರ್ನಲ್ಲಿ ನಿರೀಕ್ಷೆಯಂತೆ ಮಳೆ ಬೀಳಲಿದೆ ಎಂದು ಮಾಹಿತಿ ನೀಡಿದರು.
ನೈರುತ್ಯ ಮಾರುತ ನಿರೀಕ್ಷಿತ ಪ್ರಮಾಣದಲ್ಲಿ ಬೀಸುವುದರಿಂದ ಮುಂಗಾರು ಮಳೆ ಪ್ರಮಾಣದಲ್ಲಿ ಹೆಚ್ಚಿನ ಕೊರತೆಯಾಗದು ಎಂಬ ಸೂಚನೆ ದೊರೆತಿದೆ ಎಂದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS