ಈ ಬಾರಿ ಸರಳವೂ ಅಲ್ಲದ, ಅದ್ಧೂರಿಯೂ ಅಲ್ಲದ ಸಾಂಪ್ರದಾಯಿಕ ದಸರಾ

ಈ ಸುದ್ದಿಯನ್ನು ಶೇರ್ ಮಾಡಿ

Dasaraಬೆಂಗಳೂರು, ಆ.4- ಕಳೆದ ವರ್ಷ ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದುದರಿಂದ ಸರಳ ದಸರಾ ಉತ್ಸವ ಆಚರಿಸಲಾಗಿತ್ತು. ಈ ಬಾರಿ ಸರಳವೂ ಅಲ್ಲದ, ಅದ್ಧೂರಿಯೂ ಅಲ್ಲದ, ಸಾಂಪ್ರದಾಯಿಕ ಜನರನ್ನು ಆಕರ್ಷಿಸುವ ನಾಡಹಬ್ಬವನ್ನು ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದಲ್ಲಿ ಮೈಸೂರು ದಸರಾ ಉನ್ನತಮಟ್ಟದ  ಸಮಿತಿಯ ಮೊದಲ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಭೀಕರ ಬರ ಇದ್ದುದರಿಂದ ಸರಳ ದಸರಾ ಆಚರಿಸಿದೆವು.  ಈ ಬಾರಿ ಕೂಡ ಕರಾವಳಿ ಮಲೆನಾಡು ಭಾಗದಲ್ಲಿ ಕಡಿಮೆ ಮಳೆಯಾಗಿದೆ. ಹಾಗಾಗಿ ಸರಳವೂ ಅಲ್ಲದ, ಅದ್ದೂರಿಯೂ ಅಲ್ಲದ ಸಾಂಪ್ರದಾಯಿಕ ಜನಾಕರ್ಷಣೆಯ ನಾಡಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ನಾಡಹಬ್ಬ ದಸರಾ ಅಕ್ಟೋಬರ್ 1ರಂದು ಬೆಳಗ್ಗೆ 11.40ಕ್ಕೆ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆಯಾಗಲಿದೆ. ಅಕ್ಟೋಬರ್ 11 ರಂದು ವಿಜಯದಶಮಿಯ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ ಎಂದು ಹೇಳಿದರು.

ಸಾಮಾನ್ಯವಾಗಿ ದಸರಾ ಪ್ರಾರಂಭವಾದ ದಿನದಿಂದ 10ನೆ ದಿನಕ್ಕೆ ವಿಜಯದಶಮಿ ಬರುತ್ತಿತ್ತು. ಈ ಬಾರಿ 11 ದಿನಕ್ಕೆ ದಸರಾ ಉತ್ಸವ ಉದ್ಘಾಟನೆಯಾಗಲಿದೆ. 10ನೆ ದಿನಕ್ಕೆ ಆಯುಧಪೂಜೆ ನಡೆಯಲಿದೆ. ಎಷ್ಟೋ ಬಾರಿ ಈ ರೀತಿ ವ್ಯತ್ಯಾಸವಾಗಿರುವ ಉದಾಹರಣೆಗಳಿವೆ. 11 ರಂದು ಸಂಜೆ ಪಂಜಿನ ಕವಾಯತು ನಡೆಯಲಿದೆ ಎಂದು ತಿಳಿಸಿದರು.  ದಸರಾ ಉದ್ಘಾಟನೆಗೆ  ಕ್ರಿಕೆಟ್ ದೇವರು ಸಚಿನ್, ಹಿರಿಯ ಸಾಹಿತಿಗಳಾದ ಚೆನ್ನವೀರ ಕಣವಿ, ನಿಸಾರ್‍ಅಹಮದ್, ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ, ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿ ಅವರ ಹೆಸರು ಪ್ರಸ್ತಾಪವಾಗಿದೆ. ಸಂಸದ ಪ್ರತಾಪ್‍ಸಿಂಹ ಅವರು ಸಾಹಿತಿ ಎಸ್.ಎಲ್.ಭೈರಪ್ಪ ಅವರ ಹೆಸರನ್ನು ಸೂಚಿಸಿದ್ದಾರೆ.

ಆ.9 ರಂದು ಮೈಸೂರು ದಸರಾ ಉನ್ನತಮಟ್ಟದ  ಸಮಿತಿಯ ಕಾರ್ಯಕಾರಿಣಿ ಸಭೆ  ನಡೆಯಲಿದೆ. ಅಂದು ಸಮಿತಿಯು ಉದ್ಘಾಟನೆಗೆ ಯಾರನ್ನು ಕರೆಸಬೇಕೆಂಬುದನ್ನು ತೀರ್ಮಾನಿಸುತ್ತದೆ ಎಂದು ಸಿಎಂ ಹೇಳಿದರು. ಇದುವರೆಗೆ ದಸರಾಗೆ ಚಾಲನೆ ನೀಡಿದ ದಿನವೇ ವಸ್ತುಪ್ರದರ್ಶನಕ್ಕೂ ಚಾಲನೆ ನೀಡಲಾಗುತ್ತಿತ್ತು. ಆದರೆ ಬಹಳಷ್ಟು ಮಳಿಗೆಗಳು ಖಾಲಿ ಇರುತ್ತಿದ್ದವು. ಹಾಗಾಗಿ ಈ ಬಾರಿ ಎಲ್ಲಾ ಮಳಿಗೆಗಳೂ ಭರ್ತಿಯಾಗಿರಬೇಕೆಂದು ಮುಖ್ಯಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ ಎಂದರು. ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಅರಣ್ಯ, ಕೃಷಿ, ವಾರ್ತಾ ಇಲಾಖೆ, ಪ್ರವಾಸೋದ್ಯಮ, ಇಂಧನ, ನೀರಾವರಿ, ಲೋಕೋಪಯೋಗಿ ಹೀಗೆ ಎಲ್ಲಾ ಇಲಾಖೆಗಳೂ ಕಡ್ಡಾಯವಾಗಿ ವಸ್ತುಪ್ರದರ್ಶನದಲ್ಲಿ ಮಳಿಗೆ ತೆರೆಯಬೇಕು ಹಾಗೂ ಎಲ್ಲಾ ಜಿ.ಪಂ.ಗಳು ಭಾಗವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ದಸರಾ ಕುರಿತು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ಆದೇಶಿಸಲಾಗಿದೆ. ಕಳೆದ ವರ್ಷ ದಸರಾಗೆ 4 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು, ಈ ಬಾರಿ ಇನ್ನೂ ಹೆಚ್ಚು ಖರ್ಚಾಗಬಹುದು. ಹಾಗಾಗಿ ಅಂದಾಜು ವೆಚ್ಚದ ಪಟ್ಟಿಯ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಸಮಿತಿಗೆ ಸೂಚಿಸಿದ್ದೇನೆ ಎಂದು ಹೇಳಿದರು. ದಸರಾದ ಉಳಿದ ಕಾರ್ಯಕ್ರಮಗಳು ಮತ್ತು ಕೆಲಸಗಳ ಬಗ್ಗೆ ಸಮಿತಿ ನಿರ್ಧರಿಸಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಸಚಿವರಾದ ತನ್ವೀರ್‍ಸೇಠ್, ಎಚ್.ಎಸ್.ಮಹದೇವಪ್ರಸಾದ್, ಆರ್.ವಿ.ದೇಶಪಾಂಡೆ, ಉಮಾಶ್ರೀ, ಮೈಸೂರು ಜಿಲ್ಲಾಧಿಕಾರಿ ಶಿಖಾ, ಮೈಸೂರು ನಗರ ಪೊಲೀಸ್‍ಆಯುಕ್ತ ದಯಾನಂದ್, ಮೇಯರ್ ಭೈರಪ್ಪ, ಶಾಸಕರಾದ ಸೋಮಶೇಖರ್, ವಾಸು, ಚಿಕ್ಕಮಾದು ಮತ್ತಿತರರು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin