ಈ ಮಕ್ಕಳ ಪಾಲಿಗೆ ಹುಟ್ಟುಹಬ್ಬದ ದಿನವೇ ಸಾವಿನ ದಿನವಾಯ್ತು ..!

ಈ ಸುದ್ದಿಯನ್ನು ಶೇರ್ ಮಾಡಿ

Acid--01

ಬೆಂಗಳೂರು, ಸೆ.28- ಪೋಷಕರು ಮಾಡಿದ ಎಡವಟ್ಟಿ ನಿಂದಾಗಿ ಇಬ್ಬರು ಮುಗ್ಧ ಬಾಲಕರು ಜೀವ ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ಹುಟ್ಟುಹಬ್ಬದ ದಿನದಂದೇ ನಡೆದಿರುವುದು ವಿಪರ್ಯಾಸ. ಮೂಲತಃ ಉತ್ತರ ಪ್ರದೇಶದ ಆರ್ಯನ್‍ಸಿಂಗ್(9) ಮತ್ತು ಸಾಹಿಲ್(8) ಮೃತಪಟ್ಟ ನತದೃಷ್ಟ ಬಾಲಕರು. ಚಿನ್ನ-ಬೆಳ್ಳಿ ಪಾಲಿಶ್ ವೃತ್ತಿ ಮಾಡುವ ಶಂಕರ್ ಎಂಬುವರು ಪಾಲಿಶ್ ಮಾಡಲು ದ್ರಾವಣವನ್ನು ತಂದು ಮನೆಯಲ್ಲಿಟ್ಟಿದ್ದರು.  ನಿನ್ನೆ ಸಾಹಿಲ್‍ನ ಹುಟ್ಟುಹಬ್ಬವಿತ್ತು. ಅದಕ್ಕಾಗಿ ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ಸಿಹಿ ಪದಾರ್ಥಗಳನ್ನು ತಯಾರಿಸುತ್ತಿದ್ದರು. ಈತನ ಹುಟ್ಟುಹಬ್ಬಕ್ಕಾಗಿ ಆರ್ಯನ್ ತಾಯಿ ಮಗನನ್ನು ಬಿಟ್ಟುಹೋಗಿದ್ದರು.

ಇವರಿಬ್ಬರು ಸಂಜೆ ತಿಂಡಿ ತಿಂದು ಆಟವಾಡುತ್ತಿದ್ದರು. ಕೆಲ ಸಮಯದ ಬಳಿಕ ಸಾಹಿಲ್ ತಂಪುಪಾನೀಯವೆಂದು ಪಾಲಿಶ್‍ಗೆಂದು ತಂದಿಟ್ಟಿದ್ದ ದ್ರಾವಣವನ್ನು ಸೇವಿಸಿ ಆರ್ಯನ್‍ಗೂ ಕೊಟ್ಟಿದ್ದಾನೆ. ಇವರಿಬ್ಬರು ಈ ದ್ರಾವಣ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಒದ್ದಾಡುತ್ತಿದುದ್ದನ್ನು ಸಾಹಿಲ್ ಮನೆಯವರು ಗಮನಿಸಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗಲೇ ಮಾರ್ಗಮಧ್ಯೆ ಇವರಿಬ್ಬರ ಪ್ರಾಣಪಕ್ಷಿ ಹಾರಿ ಹೋಗಿದೆ. ಸುದ್ದಿ ತಿಳಿದ ಆರ್ಯನ್ ಹಾಗೂ ಸಾಹಿಲ್ ಕುಟುಂಬಸ್ಥರ ರೋಧನ ಮುಗಿಲುಮುಟ್ಟಿತ್ತು. ಈ ಸಂಬಂಧ ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಮಕ್ಕಳು ಯಾವ ದ್ರಾವಣ ಸೇವಿಸಿದ್ದರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಎಚ್ಚರಿಕೆ : ಮನೆಯಲ್ಲಿ ಮಕ್ಕಳಿದ್ದರೆ ಪೋಷಕರು ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು. ಯಾವುದೇ ಅಪಾಯಕಾರಿ ವಸ್ತು ಅಥವಾ ದ್ರಾವಣ ವನ್ನು ಮನೆಗೆ ತಂದರೆ ಮಕ್ಕಳ ಕೈಗೆ ಸಿಗದಂತೆ, ಕಾಣದಂತೆ ಇಡುವುದು ಉತ್ತಮ. ನಿನ್ನೆ ನಡೆದ ಘಟನೆಯಲ್ಲಿ ಅಮಾಯಕ ಮಕ್ಕಳು ಪ್ರಾಣ ಕಳೆದುಕೊಂಡಿರುವುದು ಎಂತಹವರ ಮನ ಕಲಕದಿರದು.

Facebook Comments

Sri Raghav

Admin