ಈ ಮಹಾನುಭಾವ ಪ್ರೇಯಸಿಗಾಗಿ 51ಬೈಕ್ ಕದ್ದ..!

ಈ ಸುದ್ದಿಯನ್ನು ಶೇರ್ ಮಾಡಿ

Bengaluru-Crime
ಬೆಂಗಳೂರು,ಏ.22-ಪ್ರೇಯಸಿಯ ವಿಲಾಸಿ ಜೀವನಕ್ಕಾಗಿ ಹಣ ಹೊಂದಿಸುವ ಸಲುವಾಗಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಇಳಿದಿದ್ದ ಯುವಕನನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿ 25 ಲಕ್ಷ ರೂ. ಮೌಲ್ಯದ 51 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಆಂಧ್ರಪ್ರದೇಶದ ಪೆಟ್ಲಕುಂಟಪಲ್ಲಿ ಗ್ರಾಮದ ಮನೋಹರ್(23) ಬಂಧಿತ ಯುವಕ. ಬೊಮ್ಮನಹಳ್ಳಿಯ ನಾಯ್ಡು ಲೇಔಟ್‍ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಮನೋಹರ್ ತನ್ನ ಪ್ರೇಯಸಿಯ ವಿಲಾಸಿ ಜೀವನಕ್ಕಾಗಿ ಹಣವನ್ನು ಹೊಂದಿಸುವ ಸಲುವಾಗಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುವುದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದರು. ಅಲ್ಲದೆ ಈತ ಬಿಗ್ ಬಾಸ್ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಬೆಟ್ಟಿಂಗ್ ಕಟ್ಟುವ ಚಟ ಹೊಂದಿದ್ದನು. ಇತ್ತೀಚೆಗೆ ನಗರದ ವಿವಿಧೆಡೆ ದ್ವಿಚಕ್ರ ವಾಹನಗಳು ಕಳ್ಳತನವಾಗುತ್ತಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬೊಮ್ಮನಹಳ್ಳಿ ಪೊಲೀಸರು ಇನ್‍ಸ್ಪೆಕ್ಟರ್ ಮಂಜುನಾಥ್ ಅವರ ನೇತೃತ್ವದಲ್ಲಿ ತಂಡ ರಚಿಸಿದ್ದರು.ಈ ತಂಡ ತೀವ್ರ ಕಾರ್ಯಾಚರಣೆ ನಡೆಸಿ ಆರೋಪಿ ಯನ್ನು ಬಂಧಿಸಿ 26 ಹೋಂಡಾ ಮೋಟಾರ್ ಸೈಕಲ್, 19 ಹೀರೋ ಹೊಂಡಾ ಫ್ಯಾಷನ್, 4 ಬಜಾಜ್ ಪಲ್ಸರ್ , 2 ಬಜಾಜ್ ಡಿಸ್ಕವರಿ ಹಾಗೂ ಒಂದು ಆ್ಯಕ್ಟೀವ್ ಹೊಂಡಾ ವಾಹನಗಳು ಸೇರಿದಂತೆ ಒಟ್ಟು 25 ಲಕ್ಷ ರೂ. ಬೆಲೆಯ 51 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈತನ ವಿರುದ್ಧ ಅಂಧ್ರಪ್ರದೇಶದ ಹಿಂದೂಪುರ, ಕದ್ರಿ ಠಾಣೆಗಳಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣಗಳು ದಾಖಲಾಗಿದ್ದು ವಿಚಾರಣೆಯಲ್ಲಿವೆ. ಈತನ ಬಂಧನದಿಂದ ಬೊಮ್ಮನಹಳ್ಳಿ ಠಾಣೆಯ 22 ಪ್ರಕರಣ, ಮಡಿವಾಳ, ಬೇಗೂರು, ಮಧುಗಿರಿ, ಕೊರಟಗೆರೆ, ಮಿಡಿಗೇಶಿ, ಬಾಗೇಪಲ್ಲಿ , ಗುಂಡಿಬಂಡೆ, ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಮೋಟಾರ್ ಬೈಕ್ ಕಳವು ಪ್ರಕರಣಗಳು ಸೇರಿದಂತೆ ಒಟ್ಟು 36 ಪ್ರಕರಣಗಳು ಪತ್ತೆಯಾದಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin