ಈ ಲವ-ಕುಶರ ಬೆಲೆ ಬರೋಬ್ಬರಿ 5 ಲಕ್ಷ ರೂ..!

ಈ ಸುದ್ದಿಯನ್ನು ಶೇರ್ ಮಾಡಿ

lava-kusha

ಪಾಂಡವಪುರ, ಮಾ.4- ರಾಜ್ಯದಲ್ಲಿ ವ್ಯಾಪಕ ಬರಗಾಲ ತಾಂಡವವಾಡುತ್ತಿದೆ. ಜಾನುವಾರುಗಳಿಗೆ ಮೇವು-ನೀರು ಸಿಗದೆ ಪರಿತಪಿಸುತ್ತಿವೆ. ಜಾನುವಾರುಗಳನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಇಂತಹ ಸಮಯದಲ್ಲಿ ಜೋಡೆತ್ತುಗಳು 4 ಲಕ್ಷ ಹಾಗೂ 5 ಲಕ್ಷ ಬೆಲೆ ಕಟ್ಟಿ ಮಾರಾಟವಾಗುತ್ತಿವೆ ಎಂದರೆ ನಂಬುತ್ತೀರಾ… ನಂಬಲೇಬೇಕು… ತಾಲೂಕಿನ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಬೇಬಿ ಬೆಟ್ಟದಲ್ಲಿ ಕಳೆದ ಐದಾರು ದಿನಗಳಿಂದಲೂ ವಿಜೃಂಭಣೆಯಿಂದ ನಡೆಯುತ್ತಿರುವ ಭಾರಿ ದನಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ರೈತ ಶ್ಯಾದನಹಳ್ಳಿ ಪಿ.ಚಲುವರಾಜು ಅವರ ಬೆಲೆ ಬಾಳುವ ಜೋಡೆತ್ತುಗಳು ಎಲ್ಲರ ಗಮನ ಸೆಳೆಯುತ್ತಿವೆ.

ರೈತರಾದ ಚಲುವರಾಜು ಎಂಬುವವರು 5 ಲಕ್ಷ ರೂ ಮೌಲ್ಯ ದ ಹಳ್ಳಿಕಾರ್ ತಳಿಗಳಾದ ಬಾಯಿಗೂಡಿದ ಲವ-ಕುಶ ಎಂಬ ಹೆಸರಿನ ಎತ್ತುಗಳು ಹಾಗೂ 4 ಲಕ್ಷ ರೂ.ಮೌಲ್ಯ ದ ಎರಡು ಹಲ್ಲಿನ ರಾಮ-ಲಕ್ಷ್ಮಣ ಎಂಬ ಹೆಸರಿನ ಜೋಡಿ ಕರುಗಳು ಸೇರಿದಂತೆ ಜಾತ್ರಯಲ್ಲಿ ಕಟ್ಟಿರುವ ಜೋಡೆತ್ತುಗಳು ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.  ಪ್ರತಿ ಭಾರಿಯೂ ಭಾರಿ ಬೆಲೆ ಬಾಳುವ ಜೋಡೆತ್ತುಗಳನ್ನು ಬೇರೆ ಕಡೆಯಿಂದ ಕೊಂಡುಕೊಂಡು ಬಂದು ಜಾತ್ರಯಲ್ಲಿ ಪ್ರದರ್ಶನಕ್ಕಿಡುತ್ತಾರೆ. ಜಾತ್ರಯಲ್ಲಿ ಎರಡು ಜೊತೆ ಜೋಡೆತ್ತುಗಳನ್ನು ಕಟ್ಟಿರುವ ರೈತ ಚಲುವರಾಜು ಮತ್ತು ಅವರ ಕುಟುಂಬದವರು ಸುಮಾರು 40 ವರ್ಷಗಳಿಂದಲೂ ಎತ್ತುಗಳನ್ನು ಸಾಕುವ ಸಂಪ್ರದಾಯವನ್ನು ರೂಡಿಸಿಕೊಂಡಿದ್ದಾರೆ.

ಎತ್ತುಗಳನ್ನು ಬೆಳಗ್ಗೆ 6 ಗಂಟೆಗೆ ವಾಯುವಿಹಾರಕ್ಕೆ ಕರೆದೊಯ್ಯಲಿದ್ದು, ನಂತರ ಬಿಸಿ ನೀರಿನಲ್ಲಿ ಎತ್ತುಗಳಿಗೆ ಸ್ನಾನ ಮಾಡಿಸಿ ರವೆ ಗಂಜಿ ನೀಡಲಾಗುತ್ತದೆ. ಬಳಿಕ ಮಧ್ಯಾಹ್ನ 12 ಗಂಟೆಗೆ ಹೆಸರು, ಉದ್ದು, ಗೋಧಿ, ಕಡಲೆ ಹಿಟ್ಟಿಗೆ ಮೆಂತ್ಯ, ಜೀರಿಗೆ, ಮೆಣಸಿನ ಪುಡಿಯನ್ನು ಕಲಸಿ ತಿನ್ನಿಸಲಾಗುತ್ತದೆ. ರಾತ್ರಿ 8 ಗಂಟೆಗೆ 2 ಲೀಟರ್ ಹಾಲು, 1 ಸೇರು ಬೆಣ್ಣೆ ತಿನ್ನಿಸಲಾಗುತ್ತದೆ.  ಇದಕ್ಕೆಲ್ಲ ಒಂದು ಜೊತೆ ಎತ್ತುಗಳಿಗೆ ದಿನವೊಂದಕ್ಕೆ ಕನಿಷ್ಠ 500ರೂ.ಗಳಷ್ಟು ಖರ್ಚು ತಗುಲುತ್ತದೆ. ಆದರೆ ಜಾತ್ರ ಸಂದರ್ಭದಲ್ಲಿ ಮಾತ್ರ 1000ರೂ.ಗಳವರೆಗೆ ಖರ್ಚು ತಗಲುತ್ತದೆ ಎನ್ನುತ್ತಾರೆ ರೈತ ಸಿ.ಚಲುವರಾಜು ಅವರು.ಬಾಯಿಗೂಡಿದ ಲವ-ಕುಶ ಜೋಡೆತ್ತುಗಳ ಮೌಲ್ಯ  5ಲಕ್ಷ ರೂ.ಗಳು. ಈ ಜೋಡೆತ್ತುಗಳನ್ನು ಅವರು ತುಮಕೂರಿನ ಸಿದ್ದಗಂಗಾ ಜಾತ್ರಯಲ್ಲಿ ಕೊಂಡು ಕೊಂಡು ಸಾಕಿ ಈಗ ಜಾತ್ರಯಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿದ್ದಾರೆ.ಕಳೆದ ವರ್ಷ ನಡೆದ ಬೇಬಿ ಬೆಟ್ಟದ ಜಾತ್ರೆಯಲ್ಲಿ ಸಿ.ಚಲುವರಾಜು 6 ಲಕ್ಷ ರೂ. ಮೌಲ್ಯ ದ ಲವ-ಕುಶ ಎನ್ನುವ ಹೆಸರಿನ ಜೋಡೆತ್ತುಗಳನ್ನು ಕಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಎತ್ತುಗಳನ್ನು ಚಲುವರಾಜು ಅವರು ಜಾತ್ರೆಯಲ್ಲಿಯೇ 6.10 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದರು.

ಇದೀಗ ಈ ಜಾತ್ರೆಯಲ್ಲಿಯೂ 4 ಲಕ್ಷ ರೂ.ಮೌಲ್ಯ ದ ಎರಡು ಹಲ್ಲಿನ ಜೋಡಿ ಕರುಗಳನ್ನು ಕೋಲಾರ ಜಿಲ್ಲೆಯ ಚಿಂತಾಮಣಿಯ ರೈತರಿಗೆ 3.75ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದಾರೆ.
ಇದೇ ರೀತಿ ಹಲವಾರು ರೈತರು ಬೆಲೆ ಬಾಳುವ ಜೋಡೆತ್ತುಗಳನ್ನು ಬೇಬಿಬೆಟ್ಟದ ಭಾರಿ ದನಗಳ ಜಾತ್ರ ಮಹೋತ್ಸವದಲ್ಲಿ ಪ್ರದರ್ಶನಕ್ಕಿಟ್ಟಿದ್ದು, ಅವುಗಳು ನೋಡುಗರ ಗಮನಸೆಳೆಯುವಲ್ಲಿ ಯಶಸ್ವಿಯಾಗಿವೆ.ಈ ಜಾತ್ರೆಗೆ ದೇಶಿ ತಳಿಯ ಸುಮಾರು 5 ಸಾವಿರಕ್ಕೂ ಹೆಚ್ಚು ಜೋಡೆತ್ತುಗಳು ಬಂದು ಸೇರಿವೆ. ಹಾಲಲ್ಲದ 2, 4, 6, 8 ಹಲ್ಲಿನ ಹಾಗೂ ಹಾಲುಗೂಡಿದ ವಿಧಗಳಲ್ಲಿನ ಜೋಡೆತ್ತುಗಳ ವ್ಯಾಪಾರ ನಡೆಯುತ್ತಿದೆಯಾದರೂ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಎತ್ತುಗಳ ವ್ಯಾಪಾರಕ್ಕೆ ಕೊಂಚ ಹಿನ್ನಡೆ ಉಂಟಾಗಿದೆ. ಉತ್ತಮ ಬೆಲೆಗೆ ಮಾರಾಟವಾದ ರಾಸುಗಳ ಮಾಲೀಕರಿಗೆ ಚಿನ್ನ, ಬೆಳ್ಳಿ ನೀಡಿ ಗೌರವಿಸಲಾಗುವುದು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin