ಈ ವರ್ಷವೂ ಜಲಕ್ಷಾಮ : 1619 ಸಣ್ಣ ಕೆರೆಗಳಿಗೆ ನೀರೇ ಬಂದಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Jala

ಬೆಂಗಳೂರು, ಆ.14– ರಾಜ್ಯದ ಬೃಹತ್ ಜಲಾಶಯಗಳಲ್ಲಿ ಉಂಟಾದ ನೀರಿನ ಕೊರತೆಯಂತೆಯೇ ಸಣ್ಣ ಕೆರೆಗಳಲ್ಲೂ ಕೂಡ ನೀರು ಸಂಗ್ರಹವಾಗದೆ ಆತಂಕ ಉಂಟಾಗಿದೆ. ಬೃಹತ್ ಜಲಾಶಯಗಳ ನೀರನ್ನು ಕುಡಿಯಲು ಮಾತ್ರ ಬಳಸಿಕೊಳ್ಳಲಿದ್ದು, ಕೃಷಿಗೆ ನೀರು ಬಿಡದಂತಹ ಪರಿಸ್ಥಿತಿ ಉಂಟಾಗಿದೆ. ಅದೇ ರೀತಿ ಸಣ್ಣ ಕೆರೆಗಳಲ್ಲೂ ಕೂಡ ನೀರಿನ ಕೊರತೆ ಈ ವರ್ಷವೂ ಮುಂದುವರಿದಿದ್ದು, ಜನ-ಜಾನುವಾರುಗಳು ಪರಿತಪಿಸುವಂತಾಗಿದೆ. ರಾಜ್ಯದಲ್ಲಿ ಜಲಕ್ಷಾಮ ಮುಂದುವರಿಯುತ್ತಿದ್ದು, ಈ ತಿಂಗಳ ಅಂತ್ಯ ಮತ್ತು ಸೆಪ್ಟೆಂಬರ್‍ನಲ್ಲಿ ಅಧಿಕ ಪ್ರಮಾಣದ ಮಳೆ ಬರದಿದ್ದರೆ ಮುಂದಿನ ಬೇಸಿಗೆ ಕಷ್ಟಕರವಾಗಲಿದೆ.  ಕೃಷಿ ಹಾಗೂ ಜಾನುವಾರುಗಳಿಗೆ ಆಸರೆಯಾಗಿರುವ ಸಣ್ಣ ಕೆರೆಗಳು ಕೂಡ ಭರ್ತಿಯಾಗಿಲ್ಲ. ರಾಜ್ಯದ 3598 ಕೆರೆಗಳ ಪೈಕಿ ಶೇ.9ರಷ್ಟು ಮಾತ್ರ ಕೆರೆಗಳು ಪೂರ್ಣ ಭರ್ತಿಯಾಗಿದ್ದರೆ, ಶೇ.45ರಷ್ಟು ಕೆರೆಗಳು ನೀರಿಲ್ಲದೆ ಮುಂಗಾರಿನಲ್ಲಿ ಒಣಗಿರುವುದರಿಂದ ಜನರಲ್ಲಿ ಆತಂಕ ಹೆಚ್ಚಿದೆ. ಕಳೆದೆರಡು ವರ್ಷ ಸತತ ಬರದಿಂದ ಬಹುತೇಕ ಸಣ್ಣ ಕೆರೆಗಳು ಭರ್ತಿಯಾಗದೆ ಒಣಗಿದ್ದವು. ಈ ಬಾರಿ ಮುಂಗಾರು ಆರಂಭ ಉತ್ತಮವಾಗಿದ್ದರೂ ಕೂಡ ಕೆರೆಗಳಿಗೆ ನೀರು ಬರುವಂತಹ ಮಳೆ ಬಿದ್ದಿಲ್ಲ. ಹೀಗಾಗಿ ಬಹುತೇಕ ಕೆರೆಗಳು ಖಾಲಿ ಖಾಲಿಯಾಗಿ ಕಂಡುಬರುತ್ತಿವೆ.

ಕರ್ನಾಟಕ ನೈಸರ್ಗಿಕ ವಿಭಾಗ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಶೇ.46ರಷ್ಟು ಕೆರೆಗಳಲ್ಲಿ ಅರ್ಧದಷ್ಟು ನೀರು ಮಾತ್ರ ಸಂಗ್ರಹವಾಗಿದೆ. 3598 ಕೆರೆಗಳ ಪೈಕಿ 1619 ಕೆರೆಗಳಿಗೆ ನೀರೇ ಬಂದಿಲ್ಲ. 76 ಕೆರೆಗಳು ಮಾತ್ರ ಪೂರ್ಣ ಭರ್ತಿಯಾಗಿದ್ದರೆ, 1228 ಕೆರೆಗಳಲ್ಲಿ ಕಾಲು ಭಾಗದಷ್ಟು ಮಾತ್ರ ನೀರು ಸಂಗ್ರಹವಾಗಿರುವ ವರದಿಯಾಗಿದೆ.   ಕೇವಲ 412 ಕೆರೆಗಳಲ್ಲಿ ಮಾತ್ರ ಅರ್ಧದಷ್ಟು ನೀರು ಸಂಗ್ರಹವಾಗಿದೆ. ಅದರಲ್ಲೂ ಯಾದಗಿರಿ ಜಿಲ್ಲೆಯ 12, ಬೆಳಗಾವಿ ಜಿಲ್ಲೆಯ 5, ಬೀದರ್ ಜಿಲ್ಲೆಯ 14, ಕಲಬುರಗಿ ಜಿಲ್ಲೆಯ 18, ಉಡುಪಿ ಜಿಲ್ಲೆಯ 4, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ ಜಿಲ್ಲೆಯ ತಲಾ ಒಂದೊಂದು ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ. ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಜಿಲ್ಲೆಯ ತಲಾ 6 ಕೆರೆಗಳು ಭರ್ತಿಯಾಗಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 8 ಕೆರೆಗಳು ಮಾತ್ರ ಭರ್ತಿಯಾಗಿವೆ. ಸಣ್ಣ ಕೆರೆಗಳಿಂದ 4,22,050 ಎಕರೆ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತಿತ್ತು. ಈಗ ಕೃಷಿಗಿರಲಿ, ಜನ-ಜಾನುವಾರುಗಳ ಕುಡಿಯುವ ನೀರಿಗೂ ಕೂಡ ಸಂಚಕಾರ ಬಂದೊದಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin