ಈ ವಾರದಿಂದ ಕೌರವನ ದರ್ಬಾರ್ ಶುರು

ಈ ಸುದ್ದಿಯನ್ನು ಶೇರ್ ಮಾಡಿ

kowrava
ಸ್ಯಾಂಡಲ್‍ವುಡ್‍ನಲ್ಲಿ ಈ ವಾರ ಕೌರವನ ದರ್ಬಾರ್ ಶುರುವಾಗಿದೆ. ಬಹಳಷ್ಟು ನಿರೀಕ್ಷೆಯೊಂದಿಗೆ ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿ ಪ್ರಚಾರದೊಂದಿಗೆ ಬಿಡುಗಡೆಯಾಗುತ್ತಿರುವ ಚಿತ್ರ ಒನ್ಸ್‍ಮೋರ್ ಕೌರವ. ಈ ಚಿತ್ರದ ನಾಯಕ ಕಮ್ ನಿರ್ಮಾಪಕ ನರೇಶ್‍ಗೌಡ ಅವರು ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಚಿತ್ರದ ಬಗ್ಗೆ ಈಗಾಗಲೇ ಉತ್ತಮ ಸಹಕಾರವನ್ನು ಜನರು ನೀಡುತ್ತಿದ್ದಾರೆ.  ನಾನು ವಿದೇಶಕ್ಕೆ ಹೋದಾಗಲೂ ಸಹ ಅಲ್ಲಿನ ಕನ್ನಡಿಗರು ಸಹಕಾರ ನೀಡುತ್ತೇವೆ ಎಂದಿದ್ದಾರೆ. ಅದೇ ರೀತಿ ಉತ್ತರ ಕರ್ನಾಟಕದ ಕಡೆ ಹೋದಾಗಲೂ ಕೂಡ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಬೆಂಗಳೂರು, ಮೈಸೂರು, ಕೋಲಾರ, ತುಮಕೂರು ಸೇರಿದಂತೆ ಕರ್ನಾಟಕದ ಎಲ್ಲ ಕಡೆ ನಮ್ಮ ಆತ್ಮೀಯರು, ಸ್ನೇಹಿತರು ತುಂಬಾ ಸಹಕಾರ ನೀಡಿದ್ದಾರೆ. ಅದರಂತೆ ಬಿಡುಗಡೆ ದಿನದಂದು ನಮ್ಮ ಅಭಿಮಾನಿಗಳು ಆಟೋ ಮೇಲೆ ಕೌರವನ ತೇರನ್ನು ಸಿದ್ಧಪಡಿಸಿದ್ದಾರೆ.

ಅವರ ಅಭಿಮಾನಕ್ಕೆ ನಾನು ಸದಾ ಚಿರಋಣಿ. ಗಾಂಧಿನಗರದ ಅಣ್ಣಮ್ಮ ದೇವಸ್ಥಾನದಿಂದ ಹಿಡಿದು ನಮ್ಮ ಚಿತ್ರಮಂದಿರದವರೆಗೂ ನಾನು ನಾಯಕಿ ಹಾಗೂ ನಿರ್ದೇಶಕರು ಆ ಒಂದು ಆಟೋದ ಮೂಲಕ ಸಂಚರಿಸುತ್ತೇವೆ. ಇದೇ ರೀತಿ ಈಗಾಗಲೇ ಪ್ರಚಾರಕ್ಕಾಗಿ ಹಲವಾರು ಕೆಲಸಗಳನ್ನು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇನ್ನೇನಿದ್ದರೂ ನೀವೆಲ್ಲರೂ ನೋಡಿ ನಮ್ಮಂತಹ ಯುವ ಪ್ರತಿಭೆಗಳನ್ನು ಹರಸಬೇಕು ಎಂದು ಕೇಳಿಕೊಂಡರು. ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿರುವವರು ನಿರ್ದೇಶಕ ಎಸ್. ಮಹೇಂದರ್. ಬಹಳ ದಿನಗಳ ನಂತರ ಮತ್ತೆ ನಿರ್ದೇಶನ ಮಾಡಿರುವ ಈ ಚಿತ್ರದ ಕುರಿತು ಮಾತನಾಡಿದ ಅವರು ಈ ಚಿತ್ರವನ್ನು ಹಳೇ ಹಾಗೂ ಹೊಸ ಕಲಾವಿದರ ಸಂಗಮ ಎನ್ನಬಹುದು. ಚಿತ್ರದ ಫ್ಲಾಶ್ ಬ್ಯಾಕ್‍ನಲ್ಲಿ ಬರುವ ದೃಶ್ಯಗಳಲ್ಲಿ ಹಳಬರು, ಈಗಿನ ಕಾಲದ ಕಥೆಯಲ್ಲಿ ಹೊಸ ಕಲಾವಿದರು ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳನ್ನು ಮೇಲುಕೋಟೆ, ಕಾವೇರಿಯ ಬ್ಯಾಕ್‍ವಾಟರ್, ಮುಡುಕುತೊರೆ, ಕರಿಘಟ್ಟ ಮೊದಲಾದ ಲೊಕೇಶನ್‍ಗಳಲ್ಲಿ ಶೂಟ್ ಮಾಡಲಾಗಿದೆ. ಕರಿಘಟ್ಟವನ್ನು ಮಹೇಂದರ್ ಕಾಶ್ಮೀರ ಅಂತಲೂ ಕರೆಯುತ್ತಾರೆ. ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಅದರದೇ ಆದಂಥ ಪ್ರಾಮುಖ್ಯತೆ ಇದೆ.

ಗ್ರಾಮೀಣ ಸೊಗಡಿಗೆ ತಕ್ಕಂತೆ ಬಿ.ಎ.ಮಧು ಅವರು ಚೆನ್ನಾಗಿ ಕತೆಯನ್ನು ನಿರೂಪಿಸಿದ್ದಾರೆ. ಹಿಂದಿನ ಕೌರವ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡರು. ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಮಾತನಾಡುತ್ತ ಕಲ್ಯಾಣ್ ಅವರು ರಚಿಸಿರುವ ಪದಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು ಖುಷಿ ತಂದಿದೆ. ಹಾಡುಗಳು ಉತ್ತಮವಾಗಿ ಮೂಡಿಬಂದಿವೆ ಎಂದು ಹೇಳಿದರು. ಇನ್ನು ಈ ಚಿತ್ರದ ಎಲ್ಲ ಹಾಡುಗಳಿಗೆ ಸಾಹಿತ್ಯ ಒದಗಿಸಿರುವ ಕೆ.ಕಲ್ಯಾಣ್ ಮಾತನಾಡುತ್ತ, ಚಿತ್ರ ಬಹಳ ಅರ್ಥಪೂರ್ಣವಾದ ಕಥೆಯನ್ನು ಒಳಗೊಂಡಿದೆ.  ಸಾಮಾನ್ಯವಾಗಿ ಒಂದು-ಎರಡು ಹಾಡನ್ನು ಬರೆಸುವುದು ಇತ್ತೀಚಿನ ದಿನಗಳಲ್ಲಿ ಕಾಣುತ್ತಿತ್ತು. ಆದರೆ, ನಿರ್ಮಾಪಕ ನರೇಶ್‍ಗೌಡ್ರು ಎಲ್ಲ ಹಾಡುಗಳನ್ನು ನನ್ನ ಕೈಯಲ್ಲೇ ಬರೆಸಿದ್ದಾರೆ. ಪ್ರತಿಯೊಂದು ಹಾಡೂ ಸಂದರ್ಭಕ್ಕೆ ತಕ್ಕಂತೆ ಒದಗಿ ಬಂದಿದೆ ಎನ್ನುತ್ತ ತಮ್ಮ ಪ್ರಾಸದ ಮಾತುಗಳಲ್ಲೇ ಹೇಳಿದ್ದು ವಿಶೇಷವಾಗಿತ್ತು.

ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಅನುಷಾ ರಂಗನಾಥ್ ಮಾತನಾಡಿ, ನನ್ನದು ತುಂಬಾ ಮಾತನಾಡುವ ಹಳ್ಳಿ ಹುಡುಗಿಯ ಪಾತ್ರ. ಈ ಚಿತ್ರದಿಂದ ನನಗೆ ಒಳ್ಳೆಯ ಬ್ರೇಕ್ ಸಿಗುತ್ತದೆ. ಒಂದು  ಉತ್ತಮ ಪಾತ್ರ ಮಾಡಿರುವುದಕ್ಕೆ ತುಂಬಾ ಖುಷಿ ಇದೆ. ಕನ್ನಡದ ಮೇಲೆ ಅಭಿಮಾನ ಇದ್ದರೂ ಇಂಗ್ಲೀಷ್ ಕಲಿಯುವ ವ್ಯಾಮೋಹ ಇರುವ ಒಬ್ಬ ಹಳ್ಳಿ ಹುಡುಗಿಯಾಗಿ ನಾನು ಕಾಣಿಸಿಕೊಂಡಿದ್ದೇನೆ ಎಂದರು.
ಹಿರಿಯ ನಟ ದೇವರಾಜ್, ಅನುಪ್ರಭಾಕರ್ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿರುವ ಈ ಚಿತ್ರಕ್ಕೆ ಕೆ.ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದ್ದು, ಮಾಲೂರು ಶ್ರೀನಿವಾಸ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದ್ದು, ಚಿತ್ರದ ಬೆನ್ನೆಲುಬಾಗಿಯೂ ಕೂಡ ಸಹಕಾರ ನೀಡಿದ್ದಾರಂತೆ. ಒಟ್ಟಿನಲ್ಲಿ ಅದ್ಧೂರಿ ಪ್ರಚಾರ ದೊಂದಿಗೆ ಬರುತ್ತಿರುವ ಕೌರವನನ್ನು ಪ್ರೇಕ್ಷಕರು ಯಾವ ಪರಿ ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.

Facebook Comments

Sri Raghav

Admin