ಈ ವಾರ ತೆರೆಮೇಲೆ ಮತ್ತೊಂದು ಮಲ್ಟಿ ಸ್ಟಾರ್ ಸಿನಿಮಾ ‘ಮುಕುಂದ ಮುರಾರಿ’

ಈ ಸುದ್ದಿಯನ್ನು ಶೇರ್ ಮಾಡಿ

Mukunda-Murari

ಈ ದೀಪಾವಳಿ ಹಬ್ಬದ ಕೊಡುಗೆಯಾಗಿ ಕನ್ನಡದಲ್ಲಿ ಮತ್ತೊಂದು ಬಹುನಿರೀಕ್ಷಿತ ಮಲ್ಟೀಸ್ಟಾರ್ ಸಿನಿಮಾ ಮುಕುಂದ ಮುರಾರಿ ಈ ವಾರ ತೆರೆಗೆ ಬರಲಿದೆ. ಎಂ.ಎನ್.ಕೆ. ಮೂವೀಸ್ ಬ್ಯಾನರ್‍ನಡಿಯಲ್ಲಿ ಹಿರಿಯ ನಿರ್ಮಾಪಕ ಎಂ.ಎನ್. ಕುಮಾರ್ ಹಾಗೂ ಶ್ರೀ ಮಂಜುನಾಥ ಚಿತ್ರ ಖ್ಯಾತಿಯ ಜಯಶ್ರೀದೇವಿ ನಿರ್ಮಾಣ ಮಾಡಿರುವ ಮುಕುಂದ ಮುರಾರಿ ಚಿತ್ರದಲ್ಲಿ ಇದೇ ಮೊದಲಬಾರಿಗೆ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮುಕುಂದ ಮುರಾರಿ ಚಿತ್ರ ಇದೇ ಅಕ್ಟೋಬರ್ 28 ರಂದು ರಾಜ್ಯದಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಕನ್ನಡ ಚಿತ್ರರಂಗದಲ್ಲಿ ತನ್ನ ವಿಭಿನ್ನ ಮ್ಯಾನರಿಸಂನಿಂದ ಗುರುತಿಸಿಕೊಂಡಿರುವ ನಟ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಇಬ್ಬರ ಕೆಮಿಸ್ಟ್ರಿ ತೆರೆಮೇಲೆ ಹೇಗೆ ವರ್ಕೌಟ್ ಆಗಬಹುದೆಂಬ ಕುತೂಹಲ ಈ ಇಬ್ಬರೂ ನಟರ ಅಭಿಮಾನಿಗಳಲ್ಲಿದೆ.

ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಡಿ ಬೀಟ್ಸ್ ಆಡಿಯೋ ಸಂಸ್ಥೆ ಮುಕುಂದ ಮುರಾರಿ ಚಿತ್ರದ ಹಾಡುಗಳನ್ನು ಹೊರತಂದಿದೆ. ಹಿಂದಿಯಲ್ಲಿ ಕೆಲವರ್ಷಗಳ ಹಿಂದೆ ತೆರೆಕಂಡು, ಸೂಪರ್ ಹಿಟ್ ಚಿತ್ರವೆನಿಸಿಕೊಂಡಿದ್ದ ಓ ಮೈ ಗಾಡ್‍ನ ಕನ್ನಡ ಅವತರಣಿಕೆಯಾಗಿರುವ ಮುಕುಂದ ಮುರಾರಿ, ಕನ್ನಡದ ನೇಟಿವಿಟಿಗೆ ತಕ್ಕಂತೆ ಹಲವಾರು ಮಾರ್ಪಾಡುಗಳೊಂದಿಗೆ ತೆರೆಗೆ ಬರುತ್ತಿದೆ. ಕನ್ನಡದ ಪ್ರೇಕ್ಷಕರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಕೆಲ ಬದಲಾವಣೆಗಳನ್ನು ಮಾಡಲಾಗಿದ್ದು ಎಲ್ಲರಿಗೂ ಇಷ್ಟವಾಗುವಂತೆ ಮುಕುಂದ ಮುರಾರಿ ಚಿತ್ರವನ್ನು ಕಟ್ಟಿಕೊಡುತ್ತಿದ್ದೇವೆ ಎಂದು ಚಿತ್ರದ ನಿರ್ದೇಶಕ ನಂದಕಿಶೋರ್ ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಾಯಕನಟ ಉಪೇಂದ್ರ ಮಾತನಾಡಿ, 7 ವರ್ಷಗಳ ನಂತರ ನಿರ್ಮಾಪಕಿ ಜಯಶ್ರೀ ದೇವಿ ಅವರು ಚಿತ್ರರಂಗಕ್ಕೆ ಮರಳಿದ್ದಾರೆ. ನಿಜವಾದ ದೇವರು ಎಂದರೇನು, ಎಂಬುದನ್ನು ಹೇಳಿರುವಂಥ ಚಿತ್ರವಿದು, ಅಣ್ಣಾವ್ರು ಅಭಿಮಾನಿಗಳಲ್ಲಿ, ಕಾರಂತರು ಪ್ರಕೃತಿಯಲ್ಲಿ ದೇವರನ್ನು ಕಂಡಿದ್ದಾರೆ. ನಾನು ಎಲ್ಲರಲ್ಲೂ ದೇವರೆಂದು ಕಂಡಿದ್ದೇನೆ ಎಂದು ಹೇಳಿದರು. ನಂತರ ಮಾತನಾಡಿದ ಕಿಚ್ಚ ಸುದೀಪ ನನಗೆ ಕಥೆ ತುಂಬಾ ಇಷ್ಟವಾಯಿತು, ಬಹಳ ಇಷ್ಟವಾದದ್ದು ಉಪೇಂದ್ರ ಅವರ ಪಾತ್ರ. ಬಹಳ ವರ್ಷಗಳ ನಂತರ ಅವರು ಅವರಾಗಿ ಕಾಣಿಸಿಕೊಂಡಿದ್ದಾರೆ. ನನ್ನ ಪಾತ್ರ ತುಂಬಾ ಚಿಕ್ಕದಿದೆ. ಒಂದು ಫುಲ್‍ಪ್ಲೇಟ್ ಮೀಲ್ಸ್‍ನಲ್ಲಿ ಕೋಸುಂಬರಿ ಥರ ಎಂದು ಹೇಳಿದರು. ಉಪೇಂದ್ರ ಮತ್ತು ಸುದೀಪ್ ಅವರೊಂದಿಗೆ ನಿಖಿತಾ, ಭಾವನಾ, ರಚಿತಾರಾಮ್, ಅವಿನಾಶ್, ದೇವರಾಜ್, ರವಿಶಂಕರ್, ಪ್ರಕಾಶ್ ಬೆಳವಾಡಿ ಹಾಗೂ ತಬಲಾ ನಾಣಿ ಮುಂತಾದವರಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin