ಉಚ್ಛಾಟನೆ ಮಾಡುವಂತೆ ಜೆಡಿಎಸ್ ಭಿನ್ನಮತೀಯ ಶಾಸಕರ ಸವಾಲು

ಈ ಸುದ್ದಿಯನ್ನು ಶೇರ್ ಮಾಡಿ

JDS-Mla

ಬೆಂಗಳೂರು, ಆ.12- ಜೆಡಿಎಸ್‍ನ ಭಿನ್ನಮತೀಯ ಶಾಸಕರು ಹಾಗೂ ವರಿಷ್ಠರ ನಡುವಿನ ಸಂಬಂಧ ಮತ್ತಷ್ಟು ಬಿಗಡಾಯಿಸಿದೆ. ಭಿನ್ನಮತೀಯ ಶಾಸಕರ ಕ್ಷೇತ್ರಗಳಲ್ಲಿ ಪಯಾರ್ಯ ನಾಯಕರನ್ನು ಹುಟ್ಟುಹಾಕುತ್ತಿ ದ್ದರೆ, ಬಂಡಾಯ ಶಾಸಕರು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ವರಿಷ್ಠರು ಪರ್ಯಾಯ ಚಿಂತನೆಗಳನ್ನು ನಡೆಸುತ್ತಿದ್ದಾರೆ. ಪಕ್ಷದ ವರಿಷ್ಠರು ಹಾಗೂ ಬಂಡಾಯಗಾರರ ನಡುವೆ ಹೊಂದಾಣಿಕೆ ಬಾರದೆ ದಿನದಿಂದ ದಿನಕ್ಕೆ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ. ಪರಸ್ಪರ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿವೆ.   ನಿನ್ನೆಯಷ್ಟೇ ಬಂಡಾಯ ಶಾಸಕರು ವರಿಷ್ಠರ ವಿರುದ್ಧ ಮಂಡ್ಯ, ಚನ್ನಪಟ್ಟಣದಲ್ಲಿ ಹರಿಹಾಯ್ದಿದ್ದಾರೆ. ಅದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಷ್ಟದಿಕ್ಪಾಲಕರ ಅಗತ್ಯ ನಮಗಿಲ್ಲ ಎಂದು ಛೇಡಿಸಿದ್ದಾರೆ.
ಈ ನಡುವೆ ಬಂಡಾಯ ಜೆಡಿಎಸ್ ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ನಾವು ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ ಎಂದು ಜಮೀರ್‍ಅಹಮ್ಮದ್ ತಿರುಗೇಟು ನೀಡಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದ ಎಫೆಕ್ಟ್‍ನಿಂದ ಉಂಟಾದ ಮುನಿಸು ಇನ್ನೂ ಆರಿಲ್ಲ. ಮುಂದೆ ಏನಾಗುತ್ತದೆಯೋ ಕಾದು ನೋಡಬೇಕು.
ರಾಜ್ಯಸಭೆ ಚುನಾವಣೆಯಲ್ಲಿ ವ್ಹಿಪ್ ಉಲ್ಲಂಘಿಸಿ ಬೇರೊಬ್ಬ ಅಭ್ಯರ್ಥಿಗೆ ಮತ ಚಲಾಯಿಸಿದ ಆರೋಪದ ಮೇಲೆ ಜೆಡಿಎಸ್‍ನ 8 ಮಂದಿ ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.  ಅಮಾನತುಗೊಂಡ ಶಾಸಕರನ್ನು ಮತ್ತೆ ಪಕ್ಷದಲ್ಲಿ ಸೇರಿಸಿಕೊಳ್ಳುವುದಿಲ್ಲ. ಶಿಸ್ತುಕ್ರಮ ಕೈಗೊಳ್ಳುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪದೇ ಪದೇ ಪುನರುಚ್ಚರಿಸುತ್ತಿದ್ದಾರೆ.

ಇದಕ್ಕೆ ಪ್ರತಿಯಾಗಿ ಅಮಾನತುಗೊಂಡಿರುವ ಶಾಸಕರು ಪಕ್ಷದಿಂದ ಉಚ್ಚಾಟನೆ ಮಾಡಲಿ ಎಂಬ ಸವಾಲನ್ನು ವರಿಷ್ಠರ ಮುಂದಿಡುತ್ತಿದ್ದಾರೆ. ಅಲ್ಲದೆ, ವರಿಷ್ಠರು ಮತ್ತು ಈ ಶಾಸಕರ ನಡುವೆ ವಾಕ್ಸಮರ ನಡೆಯುತ್ತಿದ್ದು, ಟೀಕೆ ಟಿಪ್ಪಣಿಗಳನ್ನೂ ಕೂಡ ಮಾಡತೊಡಗಿದ್ದಾರೆ.  ವರಿಷ್ಠರು ನೀಡುತ್ತಿರುವ ಹೇಳಿಕೆಗಳಿಂದ ಬೇಸತ್ತಿರುವ ಅಮಾನತುಗೊಂಡಿರುವ ಶಾಸಕರು ಮುಂದಿನ ರಾಜಕೀಯ ನಡೆಯ ಬಗ್ಗೆ ಸಮಾಲೋಚನೆಯಲ್ಲಿ ತೊಡಿಗಿದ್ದಾರೆ.  ಮುಂದಿನ ವಿಧಾನಸಭೆ ಚುನಾವಣೆ ಹತ್ತಿರವಾಗುವವರೆಗೂ ಕಾದುನೋಡುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಜೆಡಿಎಸ್ ಪಕ್ಷದ ವರಿಷ್ಠರು ತಮ್ಮ ಮೇಲೆ ಯಾವ ಶಿಸ್ತುಕ್ರಮ ಕೈಗೊಳ್ಳಬಹುದು ಎಂಬುದನ್ನೇ ಎದುರು ನೋಡುತ್ತಿದ್ದಾರೆ.  ಉಚ್ಚಾಟನೆ ಮಾಡಿದರೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ವರಿಷ್ಠರ ಮತ್ತು ಭಿನ್ನಮತೀಯ ಶಾಸಕರ ನಡುವಿನ ಟೀಕೆಗಳು ತಾರಕ್ಕೇರತೋಡಗಿವೆ. ಈ ನಡುವೆ ಭಿನ್ನಮತೀಯ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಕೆಲ ಸಚಿವರು ಹಾಗೂ ಮುಖಂಡ ರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.
ಶಾಸಕರಾದ ಜಮೀರ್‍ಅಮಮ್ಮದ್‍ಖಾನ್, ಚಲುವರಾಯಸ್ವಾಮಿ, ಎಚ್.ಸಿ. ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ, ಗೋಪಾಲಯ್ಯ, ರಮೇಶ್ ಬಂಡಿ ಸಿದ್ದೇಗೌಡ, ಇಕ್ಬಾಲ್ ಅನ್ಸಾರಿ, ಭೀಮಾನಾಯಕ್ ಅವರನ್ನು ಅಮಾನತು ಮಾಡಿದ್ದು, ಪರಿಶೀಲನೆ ನಡೆಸಿ ವರದಿ ನೀಡಲು ಶಿಸ್ತು ಸಮಿತಿಯನ್ನು ರಚಿಸಲಾಗಿದೆ. ಶಿಸ್ತು ಸಮಿತಿ ವರದಿ ಇನ್ನೂ ಕೂಡ ಸಲ್ಲಿಕೆಯಾಗದಿರುವ ಹಿನ್ನೆಲೆಯಲ್ಲಿ ವರಿಷ್ಠರು ನಿರ್ಧಾರವನ್ನು ಕೈಗೊಂಡಿಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin