ಉಡ್ತಾ ಬೆಂಗಳೂರು : ಡ್ರಗ್ ಸಿಟಿಯಾಗಿ ಬದಲಾಗುತ್ತಿದೆಯಾ ಐಟಿ ಸಿಟಿ..?

ಈ ಸುದ್ದಿಯನ್ನು ಶೇರ್ ಮಾಡಿ

Drugs

ಬೆಂಗಳೂರು, ಅ.16-ಜಾಗತಿಕ ಮಟ್ಟದಲ್ಲಿ ಐಟಿ ಸಿಟಿ ಎಂದು ಗುರುತಿಸಿಕೊಂಡಿರುವ ಬೆಂಗಳೂರು ಡ್ರಗ್ ಮಾಫಿಯಾದ ಕಬಂಧ ಬಾಹುಗಳಿಗೆ ಸಿಲುಕಿ ನಲುಗುತ್ತಿದ್ದು, ಕಳೆದ ವಾರದಿಂದೀಚೆಗೆ ಐದು ಪ್ರಮುಖ ಪ್ರಕರಣಗಳು ಬೆಳಕಿಗೆ ಬಂದಿದೆ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿನ್ನೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜಾಜಿನಗರದ ವ್ಯಕ್ತಿಯೊಬ್ಬನನ್ನು ಬಂಧಿಸಿ 12 ಕೋಟಿ ರೂ. ಮೌಲ್ಯದ 30 ಕೆಜಿ ಮ್ಯಾಥಕ್ಯೂಲಾನ್ ಎಂಬ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಈವರೆಗೂ ವಿದೇಶಿ ಪ್ರಜೆಗಳು ಈ ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿ ಬೀಳುತ್ತಿದ್ದರು. ಈಗ ಸ್ಥಳೀಯ ವ್ಯಕ್ತಿಗಳೂ ಕೂಡ ಡ್ರಗ್ಸ್ ಮಾಫಿಯಾ ಜೊತೆ ಕೈಜೋಡಿಸಿರುವುದು ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದೆ.

ಪ್ರತಿಷ್ಠಿತ ಶಾಲಾಕಾಲೇಜುಗಳು, ಐಟಿ-ಬಿಟಿ ಕಂಪೆನಿಗಳು ಮತ್ತು ಭಾರೀ ವಹಿವಾಟು ನಡೆಸುವ ಸಂಸ್ಥೆಗಳ ಆವರಣದಲ್ಲಿ ಮಾದಕ ವಸ್ತುಗಳು ಎಗ್ಗಿಲ್ಲದೆ ಸಿಗುತ್ತಿವೆ ಎಂದು ಹೇಳಲಾಗುತ್ತಿದೆ.
ಗಾಂಜಾದಿಂದ ಹಿಡಿದು ಹೆರಾಯಿನ್, ಚರಸ್, ಅಫೀಮುವರೆಗೂ ಎಲ್ಲಾ ರೀತಿಯ ಮಾದಕ ದ್ರವ್ಯಮತ್ತು ಪುಡಿಗಳು ಬೆಂಗಳೂರಿನ ವಿದ್ಯಾರ್ಥಿಗಳಿಗೆ ಸುಲಭವಾಗಿ ದಕ್ಕುತ್ತಿದ್ದು, ಯುವ ಸಮುದಾಯ ಹಾದಿ ತಪ್ಪಲು ಕಾರಣವಾಗುತ್ತಿದೆ. ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಡ್ರಗ್ಸ್ ದಂಧೆಗೆ ಸಂಬಂಧಪಟ್ಟಂತೆ 814 ಪ್ರಕರಣಗಳು ದಾಖಲಾಗಿದ್ದು, 200 ಮಂದಿ ವಿದೇಶಿಯರೂ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.  ಇವುಗಳಲ್ಲಿ ಬಹುತೇಕ ಪ್ರಕರಣಗಳು ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತ ನಡೆದಿರುವುದು ಆತಂಕದ ಸಂಗತಿಯಾಗಿದೆ. ಅಧಿಕೃತವಾಗಿ ಪತ್ತೆಯಾದ ಪ್ರಕರಣಗಳೇ ಇಷ್ಟು ಸಂಖ್ಯೆಯಲ್ಲಿರುವಾಗ ಬಯಲಾಗದ ಮತ್ತು ಪತ್ತೆಯಾಗದ ಪ್ರಕರಣಗಳ ಸಂಖ್ಯೆ ಲೆಕ್ಕವಿಲ್ಲದಷ್ಟು ಇರಬಹುದು ಎಂಬ ಆತಂಕವಿದೆ.

Bang-Drugs

ಹೊಸ ತಂತ್ರ-ಕುತಂತ್ರಗಳು :

ಮಾದಕ ವಸ್ತುಗಳ ಕಳ್ಳಸಾಗಣೆದಾರರು ಹೊಸ ಹೊಸ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಫ್ಯಾಬ್ರಿಕ್ ಬ್ಯಾಗ್‍ಗಳ ಹಿಡಿಕೆಗೆ ಮಾದಕ ವಸ್ತುಗಳನ್ನು ತುಂಬಿ ವಿದೇಶಕ್ಕೆ ಸ್ಮಗ್ಲಿಂಗ್ ಮಾಡುತ್ತಿದ್ದಾರೆ. ಈ ರೀತಿ ಕಳ್ಳ ಸಾಗಣೆ ಮಾಡಲು ಹೋಗಿಯೇ ನಿನ್ನೆ ರಾಜಾಜಿನಗರದ ಚಾಲಾಕಿ ವ್ಯಕ್ತಿ ವಿಮಾನನಿಲ್ದಾಣದ ಕೇಂದ್ರ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಈ ಪ್ರಕರಣದ ಮೂಲಕ ಸ್ಥಳೀಯರು ಕೂಡ ಡ್ರಗ್ಸ್ ಮಾಫಿಯಾ ಜೊತೆ ಕೈಜೋಡಿಸಿರುವುದು ಬೆಳಕಿಗೆ ಬಂದಿದ್ದು, ಆರೋಪಿ ವಿರುದ್ಧ ಎನ್‍ಡಿಪಿಎಸ್ ಕಾಯ್ದೆ 1985ರಡಿ ದೂರು ದಾಖಲಿಸಲಾಗಿದೆ.
ಈ ಡ್ರಗ್ಸ್ ವ್ಯವಹಾರ ವ್ಯವಸ್ಥಿತ ಉದ್ಯಮವಾಗಿ ಮಾರ್ಪಡುತ್ತಿದ್ದು, ದೊಡ್ಡ ಮಟ್ಟದ ಲಾಭದಾಯಕ ದಂಧೆಯಾಗಿದೆ. ಅಂತಾರಾಷ್ಟ್ರೀಯ ಡ್ರಗ್ ಡೀಲರ್‍ಗಳು ಸ್ಥಳೀಯರೊಂದಿಗೆ ಸಂಪರ್ಕ ಸಾಧಿಸಿ ತಮ್ಮ ಮಾರುಕಟ್ಟೆಯನ್ನು ವಿಸ್ತರಣೆ ಮಾಡುತ್ತಿದ್ದಾರೆ. ಈ ವ್ಯವಸ್ಥಿತ ಜಾಲವು ಈಗ ಸಹಸ್ರಾರು ಕೋಟಿ ರೂ. ವಹಿವಾಟು ನಡೆಸುತ್ತಿದೆ.

ಮಾಹಿತಿ ತಂತ್ರಜ್ಞಾನ ನಗರಿ ಬೆಂಗಳೂರು ರಾಜ್ಯದಲ್ಲಿ ಅತಿ ಹೆಚ್ಚು ಡ್ರಗ್ಸ್ ಮಾರಾಟವಾಗುತ್ತಿರುವ ನಗರಗಳಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಪ್ರವಾಸಿ ತಾಣ ಮಂಗಳೂರು ಮತ್ತು ಸಾಂಸ್ಕøತಿಕ ರಾಜಧಾನಿ ಮೈಸೂರು ನಂತರದ ಸ್ಥಾನಗಳಲ್ಲಿವೆ ಎಂಬುದನ್ನು ಅಂಕಿ-ಅಂಶಗಳು ಹೇಳುತ್ತವೆ.

ಕರ್ನಾಟಕದಲ್ಲಿ ಮಾರಾಟವಾಗುವ ಪ್ರಮುಖ ಡ್ರಗ್ಸ್‍ಗಳು:

ಗಾಂಜಾ, ಹೆರಾಯಿನ್, ಚರಸ್, ಆಫೀಮು, ಕೊಕೇನ್, ಮ್ಯಾಜಿಕ್ ಮಶ್ರೂಮ್ (ಹುಚ್ಚು ಅಣಬೆ), ಎಲ್‍ಎಸ್‍ಡಿ, ಎಂಡಿಎಂ, ಹಶೀಶ್. ಗಾಂಜಾದಂಥ ಸ್ಥಳೀಯ ಬ್ರಾಂಡ್‍ನಿಂದ ಅಂತರರಾಷ್ಟ್ರೀಯ ಬ್ರಾಂಡ್‍ಗಳ ಮಾರಾಟಗಳ ಅಡ್ಡೆಯಾಗಿ ನಾಡಿನ ಶೈಕ್ಷಣಿಕ ಮತ್ತು ಪ್ರವಾಸಿ ತಾಣಗಳು ಪರಿವರ್ತನೆಯಾಗುತ್ತಿರುವುದು ಚಿಂತೆಗೀಡು ಮಾಡುವ ಸಂಗತಿಯಾಗಿದೆ.

ಗಾಂಜಾ ಆಂಧ್ರಪ್ರದೇಶ, ಒಡಿಶಾ, ಪಶ್ಚಿಮಘಟ್ಟಗಳು, ತಮಿಳುನಾಡು ಹಾಗೂ ರಾಜ್ಯದ ಕೆಲವು ಭಾಗಗಳಿಂದ ಪೂರೈಕೆಯಾಗುತ್ತಿದ್ದರೆ, ಹೆರಾಯಿನ್, ಚರಸ್, ಅಫೀಮುಗಳು ಪಾಕಿಸ್ತಾನ, ಬರ್ಮಾ, ಇರಾನ್, ಅಫ್ಘಾನಿಸ್ತಾನದಿಂದ ರಾಜ್ಯಕ್ಕೆ ಸರಬರಾಜು ಆಗುತ್ತಿದೆ. ಲ್ಯಾಟಿನ್ ಅಮೆರಿಕ ರಾಷ್ಟ್ರವಾದ ಮೆಕ್ಸಿಕೋದಿಂದ ಕೊಕೇನ್ ಮತ್ತು ಯುರೋಪ್ ದೇಶಗಳಿಂದ ಎಲ್‍ಎಸ್‍ಡಿ ಅಕ್ರಮವಾಗಿ ಕರ್ನಾಟಕಕ್ಕೆ ಕಳ್ಳಸಾಗಣೆಯಾಗುತ್ತಿದೆ. ಇವುಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂ. ಮೌಲ್ಯವಿದ್ದು, ಪ್ರತಿ ಗ್ರಾಮ್‍ಗೆ ಲಕ್ಷ ಲಕ್ಷ ರೂಪಾಯಿ ಲೆಕ್ಕದಲ್ಲಿ ಮಾರಾಟವಾಗುತ್ತವೆ. ವಾಯು ಮತ್ತು ಜಲ ಮಾರ್ಗ ಮೂಲಕ ಈ ಮಾದಕ ವಸ್ತುಗಳು ಕರ್ನಾಟಕ ಪ್ರವೇಶಿಸುತ್ತವೆ. ಬಹುತೇಕ ಗೋವಾ ಮುಖಾಂತರ ಮಂಗಳೂರು ಬಂದರಿಗೆ ಬರುವ ವಿದೇಶಿ ಡ್ರಗ್ಸ್‍ಗಳು ಅಲ್ಲಿಂದ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಇತರ ಭಾಗಗಳಿಗೆ ಸಾಗಣೆಯಾಗುತ್ತದೆ. ವಿದೇಶಿಯರು ಮತ್ತು ಹೊರ ರಾಜ್ಯದವರು ಹೆಚ್ಚಾಗಿ ಬರುವ ಬೆಂಗಳೂರು, ಮಂಗಳೂರು, ಮೈಸೂರು, ಹಂಪಿ, ಗೋಕರ್ಣ, ಉಡುಪಿ ಭಾಗಗಳಲ್ಲಿ ಹೆಚ್ಚಿನ ಮಾದಕ ವಸ್ತುಗಳು ಮಾರಾಟವಾಗುತ್ತವೆ.

ಡ್ರಗ್ಸ್ ಡೀಲ್‍ನಲ್ಲಿ ನಟಿಯರು, ರೂಪದರ್ಶಿಯರು !

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ರೂಪದರ್ಶಿ ಸೇರಿ ನಾಲ್ವರನ್ನು ಕೇಂದ್ರ ಮಾದಕ ವಸ್ತು ನಿಯಂತ್ರಣ ದಳ (ಎನ್‍ಸಿಬಿ) ಬಂಧಿಸಿದೆ. ಚಿಕ್ಕಮಗಳೂರು ಮೂಲಕ ಮಾಡೆಲ್ ದರ್ಶಿತ್ ಮಿತಾ ಜೊತೆ ಮಂಗಳೂರಿನ ಇಬ್ಬರು ಹಾಗೂ ಬೆಂಗಳೂರಿನ ಒಬ್ಬ ಆರೋಪಿಯನ್ನು ಬಂಧಿಸಿ ಕೋರ್ಟ್‍ಗೆ ಹಾಜರುಪಡಿಸಲಾಗಿದೆ.  ಇದೇ ರೀತಿಯ ಅರೋಪಕ್ಕೆ ಸಂಬಂಧಪಟ್ಟಂತೆ ರೂಪದರ್ಶಿಯ ಗೆಳೆಯ ಅಬ್ದುಲ್ ಖಾದರ್‍ನನ್ನು 2015ರಲ್ಲಿ ಬಂಧಿಸಲಾಗಿತ್ತು. ಈತನನ್ನು ವಿಚಾರಣೆ ನಡೆಸಿದಾಗ ದರ್ಶಿತ್ ಬಗ್ಗೆ ಮಾಹಿತಿ ಲಭಿಸಿತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಸೆರೆ ಹಿಡಿಯಲಾಯಿತು.

ಬೆಳಕಿಗೆ ಬಂದ ಪ್ರಕರಣಗಳು ಇಷ್ಟಾದರೆ, ಬೆಳಕಿಗೆ ಬಾರದ ಅದೆಷ್ಟೋ ಪ್ರಕರಣಗಳಿವೆ. ಸುಸಂಸ್ಕøತರ ರಾಜಧಾನಿ ಬೆಂಗಳೂರನ್ನು ಡ್ರಗ್ಸ್ ಮಾಫಿಯಾ ನಿಧಾನವಾಗಿ ಆಕ್ರಮಿಸುತ್ತಿದ್ದು, ಆತಂಕಕ್ಕೀಡು ಮಾಡಿದೆ. ಡ್ಯಾನ್ಸ್ ಬಾರ್ ಹೆಸರಿನಲ್ಲಿ ಡ್ರಗ್ಸ್ ಮಾರಾಟ ಮತ್ತು ಬಳಕೆ ಯಥೇಚ್ಛವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪರಿಣಾಮಕಾರಿಯಾದ ಕ್ರಮಗಳ ಅಗತ್ಯವಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin