‘ಉತ್ತಮ ಶಿಕ್ಷಕ’ರ ಶಾಲೆಗಳಿಗೆ ಎರಡೂವರೆ ಲಕ್ಷ ರೂ. ಅನುದಾನ

ಈ ಸುದ್ದಿಯನ್ನು ಶೇರ್ ಮಾಡಿ

Teachers-Day

ಬೆಂಗಳೂರು, ಸೆ.5- ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಶಾಲೆಗಳಿಗೆ ಎರಡೂವರೆ ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು. ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಾಲೆಗಳಿಗೆ ಈವರೆಗೂ ಗ್ರಂಥಾಲಯ ನೀಡುವ ಪದ್ಧತಿ ಜಾರಿಯಲ್ಲಿತ್ತು. ಆದರೆ, ಬಹುತೇಕ ಶಾಲೆಗಳಲ್ಲಿ ಗ್ರಂಥಾಲಯಗಳು ಇರುವುದರಿಂದ ಈ ಯೋಜನೆ ಅಷ್ಟರ ಮಟ್ಟಿಗೆ ತೃಪ್ತಿಯಾಗಿರಲಿಲ್ಲ. ಹಾಗಾಗಿ ಇನ್ನು ಮುಂದೆ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಾಲೆಗಳಿಗೆ ಎರಡೂವರೆ ಲಕ್ಷ ಅನುದಾನ ನೀಡಲಾಗುವುದು. ಇದರಲ್ಲಿ ಕಂಪ್ಯೂಟರ್ ಖರೀದಿ, ಅಲ್ಮೇರಾಗಳು, ಶಾಲೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕಾರ್ಯಗಳಿಗೆ ಖರ್ಚು ಮಾಡಬಹುದು ಎಂದು ಹೇಳಿದರು.

ರಾಜ್ಯದಲ್ಲಿ 1.88 ಲಕ್ಷ ಶಿಕ್ಷಕರ ಹುದ್ದೆ ಮಂಜೂರಾಗಿದೆ. ಅವುಗಳ ಪೈಕಿ 1.67 ಲಕ್ಷ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಒಂದರಿಂದ 5ನೆ ತರಗತಿವರೆಗಿನ ಕಿರಿಯ ಪ್ರಾಥಮಿಕ ಶಿಕ್ಷಣದಲ್ಲಿ 1.37 ಲಕ್ಷ ಶಿಕ್ಷಕರು ಕೆಲಸ ಮಾಡುತ್ತಿದ್ದು, ಅವರಲ್ಲಿ ಪದವಿ ಪಡೆದವರಿಗೆ ಬಡ್ತಿ ನೀಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಳೆದ ವರ್ಷ 7900 ಪ್ರಾಥಮಿಕ ಶಿಕ್ಷಕರನ್ನು ನೇಮಿಸಲಾಗಿದೆ. ಈ ವರ್ಷ 10 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಕೆಲವು ಭಾಗಗಳಿಗೆ ಅವಕಾಶ ಸಿಗುವುದಿಲ್ಲ ಎಂಬ ಆಕ್ಷೇಪ ಕೇಳಿಬಂದಿದೆ. ಸರ್ಕಾರ ಭಾಷಾವಾರು ವಿಷಯ ಶಿಕ್ಷಕರನ್ನು ಪಾರದರ್ಶಕವಾಗಿ ನೇಮಿಸುತ್ತಿದೆ ಎಂದರು.
ಶಿಕ್ಷಕರ ಗುಣಮಟ್ಟ ಹೆಚ್ಚಿಸಲು ಈ ವರ್ಷದಿಂದ ಗುರುಚೇತನ ಎಂಬ ಯೋಜನೆ ಆರಂಭಿಸಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಇಂದು ಚಾಲನೆ ನೀಡಿದ್ದಾರೆ. ಶಿಕ್ಷಕರಿಗೂ ಆಯ್ಕೆಯ ವಿಷಯದ ಮೇಲೆ ತರಬೇತಿ ನೀಡಲು ಈ ಯೋಜನೆ ಆರಂಭವಾಗಿದ್ದು, ಈ ವರ್ಷ ಸುಮiÁರು 20 ಸಾವಿರ ಶಿಕ್ಷಕರು ತರಬೇತಿ ಪಡೆಯಲಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿರುವ 23 ಸಾವಿರ ಶಾಲೆಗಳ ಪೈಕಿ 3500 ಶಾಲೆಗಳಲ್ಲಿ 9 ಮತ್ತು 10ನೆ ತರಗತಿ ಮಾತ್ರ ಇದೆ. ಆ ಶಾಲೆಗಳಲ್ಲಿ 8ನೆ ತರಗತಿ ಪ್ರಾರಂಭಿಸಬೇಕಿದೆ. ಒಮ್ಮೆ ಸರ್ಕಾರಿ ಶಾಲೆಗೆ ದಾಖಲಾದ ವಿದ್ಯಾರ್ಥಿಗಳು ಪಿಯುಸಿವರೆಗೆ ನಮ್ಮಲ್ಲೇ ವ್ಯಾಸಂಗ ಮಾಡುವಂತೆ ಪ್ರೋತ್ಸಾಹಿಸಲು ಶಿಕ್ಷಣ ಕಲಾಪ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದರು. ಈ ಮೊದಲು ಸರ್ಕಾರಿ ಶಾಲೆಗಳಲ್ಲಿ ಡಿ ಗ್ರೂಪ್ ಸಿಬ್ಬಂದಿಗಳಿದ್ದರು. 1998ರ ನಂತರ ಇದನ್ನು ರದ್ದುಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಡಿ ಗ್ರೂಪ್ ನೌಕರರ ನೇಮಕಕ್ಕೆ ಪರಿಶೀಲನೆ ಮಾಡಲಾಗುತ್ತದೆ. ಎಲ್ಲ ಶಾಲೆಗಳಿಗೆ ಗ್ರಂಥಪಾಲಕರು, ದೈಹಿಕ ಶಿಕ್ಷಕರ ನೇಮಕವಾಗಬೇಕು. ಈಗಾಗಲೇ 5400 ಶಿಕ್ಷಕರಿಗೆ ಇಂಗ್ಲಿಷ್ ಭಾಷೆ ಬೋಧನೆಯ ತರಬೇತಿ ನೀಡಲಾಗಿದೆ. ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಕಲಿಸುವ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಲಾಗುವುದು ಎಂದರು. ಕಳೆದ ವರ್ಷ ಸರ್ಕಾರಿ ಶಾಲೆಗಳಿಗೆ 1.75 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಸರ್ಕಾರದ ಪ್ರಯತ್ನದಿಂದಾಗಿ ಈ ವರ್ಷ 1.87 ಲಕ್ಷಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗೆ ಹೋಗುವವರು ಬಡವರು. ಖಾಸಗಿ ಶಾಲೆಗೆ ಹೋಗುವವರು ಶ್ರೀಮಂತರು ಎಂಬ ಭೇದಭಾವ ತೊಡೆದುಹಾಕಲು ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಕಳೆದ ವರ್ಷ ಪರೀಕ್ಷೆಗಳಲ್ಲಿ ನಡೆದ ಗೊಂದಲವನ್ನು ಬಗೆಹರಿಸಲು ಈ ವರ್ಷ ಕರ್ನಾಟಕ ಸೆಕ್ಯುರ್ ಎಗ್ಸಾಮಿನೇಷನ್ ಸಿಸ್ಟಮ್‍ಅನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು. ಈ ವರ್ಷದಿಂದ ಉತ್ತಮವಾಗಿ ಕೆಲಸ ಮಾಡುವ ಎಸ್‍ಡಿಎಂಸಿ ಸಮಿತಿಗಳಿಗೂ ಪ್ರಶಸ್ತಿ ಕೊಡುವ ಸಂಪ್ರದಾಯವನ್ನು ಆರಂಭಿಸಲಾಗಿದೆ ಎಂದು ತನ್ವೀರ್ ಸೇಠ್ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಗುರುಚೇತನ ಯೋಜನೆಯ ಲೋಗೋ ಬಿಡುಗಡೆ ಮಾಡಿ ತರಬೇತಿ ಸಾಹಿತ್ಯವನ್ನು ಅನಾವರಣಗೊಳಿಸಿದರು. ಅಲ್ಲದೆ, ಪ್ರಶಸ್ತಿ ಪುರಸ್ಕøತರಾದ ಶಿಕ್ಷಕರನ್ನು ಸಿಎಂ ಇದೇ ವೇಳೆ ಸನ್ಮಾನಿಸಿದರು. ಸಚಿವರಾದ ಕೆ.ಜೆ.ಜಾರ್ಜ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ರಾಮಚಂದ್ರಗೌಡ, ಟಿ.ಎ.ಶರವಣ, ಶರಣಪ್ಪ ಮಟ್ಟೂರ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಜಯ್ ಸೇಠ್, ಜಾಫರ್, ಶಿಖಾ, ಬೆಂಗಳೂರು ಜಿಲ್ಲಾಧಿಕಾರಿ ವಿ.ಶಂಕರ್, ಜಿಪಂ ಸಿಇಒ ಎಂ.ಎಸ್.ಅರ್ಚನಾ, ಶಿಕ್ಷಕರ ಸಂಘದ ಬಸವರಾಜ್ ಗುರಿಕಾರ್, ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

Facebook Comments

Sri Raghav

Admin