ಉತ್ತರಪ್ರದೇಶದಲ್ಲಿ ಅಪ್ಪ-ಮಗನ ಕಿತ್ತಾಟ : ತೀವ್ರ ಕುತೂಹಲ ಕೆರಳಿಸಿವೆ ಮುಂದಿನ ಬೆಳವಣಿಗೆಗಳು

ಈ ಸುದ್ದಿಯನ್ನು ಶೇರ್ ಮಾಡಿ

Uttar-Pradesh-Akhilesh-Yada

ಲಕ್ನೋ ,ಡಿ.31-ವಿಧಾನಸಭೆ ಚುನಾವಣೆ ಸಮೀಪದಲ್ಲಿರುವಾಗಲೇ ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಕಂಡುಬಂದಿರುವ ಅತ್ಯಂತ ಕುತೂಹಲಕರ ವಿದ್ಯಮಾನ ಹೊಸ ಸ್ವರೂಪ ಪಡೆಯುತ್ತಿದೆ. ಒಂದೆಡೆ ಪಕ್ಷದಿಂದ ಉಚ್ಛಾಟನೆಗೊಂಡಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಮ್ಮ ಬೆಂಬಲಿಗ ಶಾಸಕರ ಮಹತ್ವದ ಸಭೆ ನಡೆಸಿದರೆ, ಇನ್ನೊಂದೆಡೆ ಪಕ್ಷದ ಪರಮೋಚ್ಛ ನಾಯಕ ಮುಲಾಯಂ ಸಿಂಗ್ ಯಾದವ್ ಸಂಸದೀಯ ಪಕ್ಷದ ಸಭೆ ನಡೆಸಿದ್ದಾರೆ. ರಾಜಕೀಯ ಕಾಳಗದಲ್ಲಿ ಅಪ್ಪ-ಮಗ ಪರಸ್ಪರ ವೈರಿಗಳಾಗಿದ್ದು , ಮುಂದಿನ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದೆ. ಅಖಿಲೇಶ್ ಯಾದವ್‍ರನ್ನು ಪಕ್ಷದ ಪ್ರತ್ಯೇಕ ಬಣದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಅವರ ಬೆಂಬಲಿಗರು ತುದಿಗಾಲಲ್ಲಿ ನಿಂತಿದ್ದಾರೆ. ಇದಕ್ಕೆ ಪ್ರತಿಯಾಗಿ ಹೊಸ ಮುಖ್ಯಮಂತ್ರಿಯನ್ನು ನೇಮಕ ಮಾಡಲು ಮುಲಾಯಂ ಸಿಂಗ್ ಯಾದವ್ ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಮುಲಾಯಂ ಸಿಂಗ್ ಯಾದವ್‍ಗೆ ಬೆಂಬಲ ನೀಡುವಂತೆ ಪಕ್ಷದ ಸದಸ್ಯರುಗಳಿಗೆ ಹಿರಿಯ ಮುಖಂಡ ಅಮರ್‍ಸಿಂಗ್ ಕರೆ ನೀಡಿ ನೇತಾಜಿ(ಮುಲಾಯಂಸಿಂಗ್)ಬಗ್ಗೆ ತಮಗಿರುವ ಅಪಾರ ನಿಷ್ಠೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.  ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಕಂಡು ಬಂದಿರುವ ಬೆಳವಣಿಗೆಯನ್ನು ಅತ್ಯಂತ ದುರದೃಷ್ಟಕರ ಎಂದು ಬಣ್ಣಿಸಿದರು.  ನೇತಾಜಿ ಕೈಗೊಳ್ಳುವ ತೀರ್ಮಾನ ತರ್ಕಬದ್ದವಾಗಿರುತ್ತದೆ. ಹೀಗಾಗಿ ಪಕ್ಷದ ಎಲ್ಲಾ ಶಾಸಕರು, ಮುಖಂಡರು ಮತ್ತು ಸದಸ್ಯರುಗಳು ಮುಲಾಯಂ ಅವರಿಗೆ ಬೆಂಬಲ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಬೆಳಗ್ಗೆಯಿಂದಲೇ ಬಿರುಸಿನ ಚಟುವಟಿಕೆ:

ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿರುವ ಉತ್ತರಪ್ರದೇಶದಲ್ಲಿ ಕಳೆದ ಕೆಲವು ತಿಂಗಳಿನಿಂದ ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಅಂತಃಕಲಹ ನಿನ್ನೆ ತಾರ್ಕಿಕ ಅಂತ್ಯ ಕಂಡಿತು.
ನಂಬಲಸಾಧ್ಯವಾದ ಅತ್ಯಂತ ಕುತೂಹಲ ವಿದ್ಯಾಮಾನದಲ್ಲಿ ತಮ್ಮ ಪುತ್ರ ಮುಖ್ಯಮಂತ್ರಿ ಅಖಿಲೇಶ್‍ರನ್ನೇ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಿ ಮುಲಾಯಂ ಸಿಂಗ್ ಇಡೀ ದೇಶದ ಗಮನ ಸೆಳೆದರು.  ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದಲೇ ಲಕ್ನೋದಲ್ಲಿ ಬಿರುಸಿನ ಚಟುವಟಿಕೆ ಮುಂದುವರೆದಿದೆ. ಇಂದು ಬೆಳಗ್ಗೆ ತಮ್ಮ ನಿವಾಸಲ್ಲಿ ಅಖಿಲೇಶ್ ಯಾದವ್ ತಮ್ಮ ಬೆಂಬಲಿಗ ಶಾಸಕರ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಪಕ್ಷದ 228 ಶಾಸಕರ ಪೈಕಿ 165 ಶಾಸಕರು ಭಾಗವಹಿಸಿ ಅಖಿಲೇಶ್‍ಗೆ ಬೆಂಬಲ ಸೂಚಿಸಿದರು.

ಇನ್ನೊಂದೆಡೆ ಪಕ್ಷದ ಪರಮೋಚ್ಛ ನಾಯಕ ಮುಲಾಯಂ ಸಿಂಗ್ ಯಾದವ್ ಸಂಸದೀಯ ಪಕ್ಷದ ಸಭೆ ನಡೆಸಿದರು. ಅಲ್ಲಿ ನೇತಾಜಿಯವರ ಬೆಂಬಲಿಗರು ಮತ್ತು ಹಿರಿಯ ಮುಖಂಡರು ಹಾಜರಿದ್ದು , ಮುಂದಿನ ನಡೆ ಬಗ್ಗೆ ಮಹತ್ವದ ಚರ್ಚೆ ನಡೆಸಿದರು.  ಈ ಮಧ್ಯೆ ಪಕ್ಷದಿಂದ ಉಚ್ಛಾಟನೆಗೊಂಡಿರುವ ಪಕ್ಷದ ಮತ್ತೋರ್ವ ಮುಖಂಡ ಹಾಗೂ ಅಖಿಲೇಶ್ ಯಾದವ್ ಅವರ ಆಪ್ತ ಎಂ.ರಾಮ್‍ಗೋಪಾಲ್ ಯಾದವ್ ನಾಳೆ ತುರ್ತು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಅಖಿಲೇಶ್‍ರನ್ನು ಭಿನ್ನ ಬಣದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.  ಒಟ್ಟಾರೆ ಉತ್ತರ ಪ್ರದೇಶದಲ್ಲಿ ಮುಂದೇನು ಎಂಬ ಬೃಹದಾಕಾರದ ಪ್ರಶ್ನೆ ಕಾಡುತ್ತಿದೆ. ಸೈಕಲ್ ಪಂಕ್ಚರ್ ಆಗಿದ್ದು , ಮತ್ತೆ ಸರಿ ಹೋಗಿ ಚಲಿಸುತ್ತದೆಯೇ ಅಥವಾ ಇಬ್ಭಾಗವಾಗಲಿದೆಯೇ ಎಂಬ ಬಗ್ಗೆ ರಾಜ್ಯಾದ್ಯಂತ ಬಿರುಸಿನ ಚರ್ಚೆ ನಡೆಯುತ್ತಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin